ಶನಿವಾರ, ಮಾರ್ಚ್ 6, 2021
19 °C
ರಣಜಿ ಕ್ರಿಕೆಟ್: ಹಾಲಿ ಚಾಂಪಿಯನ್ ವಿದರ್ಭ–ಸೌರಾಷ್ಟ್ರ ಮುಖಾಮುಖಿ

‘ತಾರೆ’ಗಳ ಹಣಾಹಣಿಗೆ ಜಮ್ತಾ ಸಜ್ಜು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಾಗಪುರ: ಆತಿಥೇಯ ವಿದರ್ಭ ತಂಡಕ್ಕೆ ರಣಜಿ ಟ್ರೋಫಿಯನ್ನು ಉಳಿಸಿಕೊಳ್ಳುವ ಛಲ. ಸೌರಾಷ್ಟ್ರ ತಂಡಕ್ಕೆ ಮೊದಲ ಪ್ರಶಸ್ತಿ ಗೆದ್ದು ಸಂಭ್ರಮಿಸುವ ತವಕ.

ಜಮ್ತಾದ ವಿದರ್ಭ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾಗಲಿರುವ ಫೈನಲ್‌ ಪಂದ್ಯದಲ್ಲಿ ಈ ಎರಡೂ ತಂಡಗಳ ನಡುವಣ ಸಮಬಲದ ಹೋರಾಟದ ನಿರೀಕ್ಷೆಯಲ್ಲಿ ಕ್ರಿಕೆಟ್‌ಪ್ರೇಮಿಗಳು ಇದ್ದಾರೆ.

ಟೂರ್ನಿಯುದ್ದಕ್ಕೂ ರನ್‌ಗಳ ಹೊಳೆ ಹರಿಸಿರುವ ವಿದರ್ಭದ ವಾಸೀಂ ಜಾಫರ್, ಸ್ವಿಂಗ್‌ ಅಸ್ತ್ರಗಳ ಮೂಲಕ ತಂಡದ ಶಕ್ತಿಯಾಗಿರುವ ಮಧ್ಯಮವೇಗಿ ಉಮೇಶ್ ಯಾದವ್, ಸೌರಾಷ್ಟ್ರದ ತಂಡದ ನಾಯಕ, ಎಡಗೈ ಮಧ್ಯಮ ವೇಗಿ ಜಯದೇವ ಉನದ್ಕತ್ ಮತ್ತು ‘ಟೆಸ್ಟ್ ಪರಿಣತ’ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅವರೇ ಈ ಪಂದ್ಯದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಹೋದ ವಾರ ವಯನಾಡಿನಲ್ಲಿ ಕೇರಳ ವಿರುದ್ಧ ನಡೆದಿದ್ದ ನಾಲ್ಕರ ಘಟ್ಟದ ಪಂದ್ಯದಲ್ಲಿ 13 ವಿಕೆಟ್‌ ಕಬಳಿಸಿದ್ದ ಉಮೇಶ್ ಯಾದವ್ ಅವರ ಆಟದಿಂದ ವಿದರ್ಭ ಎರಡೇ ದಿನಗಳಲ್ಲಿ ಗೆದ್ದಿತ್ತು. ಜಾಫರ್‌ ಒಂದು ಸಾವಿರಕ್ಕೂ ಹೆಚ್ಚು ರನ್‌ ಗಳಿಸಿ ಎದುರಾಳಿ ಬೌಲರ್‌ಗಳಿಗೆ ಕಠಿಣ ಸವಾಲಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದಿದ್ದ ಇನ್ನೊಂದು ಸೆಮಿಫೈನಲ್‌ನ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪತನಕ್ಕೆ ಕಾರಣರಾಗಿದ್ದ ಜಯದೇವ ಉನದ್ಕತ್ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಚೇತೇಶ್ವರ್ ಪೂಜಾರ (ಅಂಪೈರ್ ನೀಡಿದ್ದ ತಪ್ಪು ತೀರ್ಪಿನ ಲಾಭ ಅವರಿಗೆ ಸಿಕ್ಕಿತ್ತು) ವಿದರ್ಭ ತಂಡಕ್ಕೆ ಸವಾಲೊಡ್ಡಬಲ್ಲವರಾಗಿದ್ದಾರೆ.

ಆದರೆ, ಪೂಜಾರ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಗೆ ಹೋದಾಗಲೂ ಸೌರಾಷ್ಟ್ರ ತಂಡದ ಹರ್ವಿಕ್ ದೇಸಾಯಿ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವದಾ ಅವರು ಬ್ಯಾಟಿಂಗ್ ಬೆನ್ನೆಲುಬಾಗಿದ್ದರು. ಇದರಿಂದಾಗಿ ತಂಡವು ಸಂಪೂರ್ಣವಾಗಿ ಪೂಜಾರ ಅವರನ್ನು ಅವಲಂಬಿಸಿಲ್ಲ. ಉನದ್ಕತ್ ಜೊತೆಗೆ ಸಕಾರಿಯಾ, ಸ್ಪಿನ್ನರ್ ಧರ್ಮೇಂದ್ರಸಿಂಹ ಜಡೇಜ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಆತಿಥೇಯ ಬಳಗದ ಬ್ಯಾಟಿಂಗ್ ಕೂಡ ಬಲಾಢ್ಯವಾಗಿದೆ. ನಾಯಕ ಫೈಜ್ ಫಜಲ್, ಅಕ್ಷಯ ವಾಡಕರ್ ಮತ್ತು ಕನ್ನಡಿಗ ಗಣೇಶ್ ಸತೀಶ್ ಕೂಡ ಬೌಲರ್‌ಗಳಿಗೆ ಕಠಿಣ ಸವಾಲಾಗಬಲ್ಲರು. ಈ ಖುತುವಿನಲ್ಲಿ ಗಣೇಶ್ ನಾಲ್ಕು ಅರ್ಧಶತಕಗಳನ್ನು ಹೊಡೆದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅವರು ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದಾರೆ. ಬೌಲಿಂಗ್‌ನಲ್ಲಿ ಉಮೇಶ್ ಯಾದವ್ ಜೊತೆಗೆ ರಜನೀಶ್ ಗುರುಬಾನಿ ಕೂಡ ಮಿಂಚಬಲ್ಲರು. ಹೋದ ವರ್ಷದ ಟೂರ್ನಿಯ ಸೆಮಿಫೈನಲ್‌ನಲ್ಲಿ ರಜನೀಶ್ ಬೌಲಿಂಗ್ ಕರ್ನಾಟಕ ತಂಡದ ಸೋಲಿಗೆ ಕಾರಣವಾಗಿತ್ತು. ಫೈನಲ್‌ನಲ್ಲಿಯೂ ಅವರು ಮಿಂಚಿದ್ದರು. ದೆಹಲಿ ವಿರುದ್ಧ ಗೆದ್ದಿದ್ದ ವಿದರ್ಭ ಮೊದಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಈ ಬಾರಿಯೂ ಅದನ್ನು ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಪಂದ್ಯ ಆರಂಭ: ಬೆಳಿಗ್ಗೆ 9.30
ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು