ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ ಬೃಹತ್ ಮುನ್ನಡೆ- ಪಂಜಾಬ್ ದಿಟ್ಟ ಉತ್ತರ

ರಣಜಿ ಟ್ರೋಫಿ ಕ್ರಿಕೆಟ್‌; ಪ್ರಭಸಿಮ್ರನ್‌ ಸಿಂಗ್ ಆಕರ್ಷಕ ಶತಕ
Published 7 ಜನವರಿ 2024, 20:23 IST
Last Updated 7 ಜನವರಿ 2024, 20:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬೃಹತ್ ಮುನ್ನಡೆ ಗಳಿಸಿದ ಕರ್ನಾಟಕ ತಂಡಕ್ಕೆ ಪಂಜಾಬ್ ದಿಟ್ಟ ಉತ್ತರ ನೀಡಿತು.

ಪಂದ್ಯದ ಮೂರನೇ ದಿನವಾದ ಭಾನುವಾರ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 140 ಓವರ್‌ಗಳಲ್ಲಿ 8  ವಿಕೆಟ್‌ಗಳಿಗೆ 514 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ತಂಡವು 362 ರನ್‌ಗಳ ಬೃಹತ್‌ ಮುನ್ನಡೆ ಗಳಿಸಿತು. ಆದರೆ, ಎರಡನೇ ಇನಿಂಗ್ಸ್ ಆರಂಭಿಸಿದ ಪಂಜಾಬ್ ತಂಡ ದಿಟ್ಟ ತಿರುಗೇಟು ನೀಡಿತು. ದಿನದಾಟದ ಮುಕ್ತಾಯಕ್ಕೆ ತಂಡವು ಪಂಜಾಬ್ 68 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್‌ ಗಳಿಸಿತು. ಕರ್ನಾಟಕದ ಬಾಕಿ ಚುಕ್ತಾ ಮಾಡಲು ಪಂಜಾಬ್‌ಗೆ 124 ರನ್‌ಗಳ ಅಗತ್ಯವಿದೆ. ಅದಕ್ಕೂ ಮುನ್ನವೇ ಉಳಿದಿರುವ ಏಳು ವಿಕೆಟ್‌ಗಳನ್ನು ಕಬಳಿಸಿದರೆ ಕರ್ನಾಟಕಕ್ಕೆ ಇನಿಂಗ್ಸ್‌ ಜಯದ ಅವಕಾಶವಿದೆ. 

ಪಂಜಾಬ್ ತಂಡದ  ಆರಂಭಿಕ ಜೋಡಿ ಅಭಿಷೇಕ್ ಶರ್ಮಾ (91; 123ಎ, 4X9, 6X3)  ಮತ್ತು ಪ್ರಭಸಿಮ್ರನ್ ಸಿಂಗ್ (100; 148ಎ, 4X17)  ಕರ್ನಾಟಕದ ಬೌಲರ್‌ಗಳನ್ನು ದಂಡಿಸಿದರು. ಇವರಿಬ್ಬರು ಮೊದಲ ವಿಕೆಟ್ ಜತೆಯಾಟದಲ್ಲಿ 192 (267ಎ) ರನ್‌ ಸೇರಿಸಿದರು.

ಎಡಗೈ ಬ್ಯಾಟರ್‌ ಅಭಿಷೇಕ್ ಶರ್ಮಾ 68 ರನ್ ಗಳಿಸಿದ್ದಾಗ ಜೀವದಾನ ಪಡೆದರು. ವಿ.ಕೌಶಿಕ್‌ ಎಸೆದ 31ನೇ ಓವರ್‌ನ ಮೊದಲ ಎಸೆತದಲ್ಲಿ ಅಭಿಷೇಕ್ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಕ್ಷೇತ್ರ ರಕ್ಷಣೆ ವೇಳೆ ಗಾಯಗೊಂಡಿದ್ದ ವೈಶಾಕ್ ವಿಜಯಕುಮಾರ್ ಬದಲಿಗೆ ಕಣಕ್ಕಿಳಿದ ಕಿಶನ್ ಬೆದರೆ ಕ್ಯಾಚ್‌ ಕೈಚೆಲ್ಲಿದರು. ಬಳಿಕ ಬಿರುಸಿನ ಆಟವಾಡಿದ, ಅವರು ಎಡಗೈ ಸ್ಪಿನ್ನರ್ ರೋಹಿತ್‌ ಕುಮಾರ್‌ಗೆ ಒಂದೇ ಓವರ್‌ನಲ್ಲಿ ಮೂರು ಸಿಕ್ಸರ್‌ ಬಾರಿಸಿದರು. ಅಭಿಷೇಕ್ 91 (123ಎ, 4x9, 6x3) ರನ್‌ ಗಳಿಸಿದ್ದಾಗ ಸಾಂದರ್ಭಿಕ ಬೌಲರ್ ಆರ್.ಸಮರ್ಥ್‌ ಹಾಕಿದ 45ನೇ ಓವರ್‌ನಲ್ಲಿ  ಕ್ಲೀನ್ ಬೌಲ್ಡ್ ಆದರು.

ಬಲಗೈ ಬ್ಯಾಟರ್‌ ಪ್ರಭಸಿಮ್ರನ್ ಸಿಂಗ್‌ ಶತಕ (100; 146ಎ, 4X17) ಬಾರಿಸಿದರು. ಅವರು 46ನೇ ಓವರ್‌ನ ಎರಡನೇ ಎಸೆತದಲ್ಲಿ ವೇಗಿ ವಿದ್ವತ್ ಕಾವೇರಪ್ಪಗೆ ವಿಕೆಟ್ ಒಪ್ಪಿಸಿದರು.

ನಮನ್‌ ಧೀರ್ (20; 44ಎ, 4x1, 6X1) ಶುಭಾಂಗ್‌ ಹೆಗಡೆ ಬೌಲಿಂಗ್‌ನಲ್ಲಿ ರೋಹಿತ್ ಕುಮಾರ್‌ಗೆ ಕ್ಯಾಚಿತ್ತರು. ದಿನದಾಟದ ಅಂತ್ಯಕ್ಕೆ ಪಂಜಾಬ್ ನಾಯಕ ಮನದೀಪ್ ಸಿಂಗ್ (15; 61ಎ, 4x1), ನೇಹಲ್ ವಧೇರಾ (9; 35ಎ, 4x1) ಕ್ರೀಸ್‌ನಲ್ಲಿದ್ದರು. 

ಕರ್ನಾಟಕದ ಎಡಗೈ ಸ್ಪಿನ್ನರ್‌ಗಳಾದ ಶುಭಾಂಗ್ ಹೆಗಡೆ ಹಾಗೂ ಎ.ಸಿ. ರೋಹಿತ್ ಕುಮಾರ್ 23 ಓವರ್‌ಗಳಲ್ಲಿ 107 ರನ್‌ ಬಿಟ್ಟುಕೊಟ್ಟರು.

ಇದಕ್ಕೂ ಮುನ್ನ 6 ವಿಕೆಟ್‌ಗೆ 461 ರನ್‌ಗಳಿಂದ ಭಾನುವಾರ ಬೆಳಿಗ್ಗೆ ಮೊದಲ ಇನಿಂಗ್ಸ್‌ ಮುಂದುವರಿಸಿದ ಆತಿಥೇಯ ತಂಡ, ಊಟದ ವಿರಾಮಕ್ಕೂ ಒಂದು ಗಂಟೆ ಬಾಕಿ ಇರುವಾಗಲೇ 140 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 514 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. 

124 ನೇ ಓವರ್‌ನ ಮೂರನೇ ಎಸೆತದಲ್ಲಿ ವೈಶಾಕ್ ವಿಜಯಕುಮಾರ್‌ (19; 29ಎ, 4x3) ಅವರನ್ನು ವೇಗಿ ಅರ್ಷದೀಪ್ ಸಿಂಗ್‌ ಎಲ್‌ಬಿ ಬಲೆಗೆ ಕೆಡವಿದರು. ನಂತರ ಎಸ್.ಶರತ್‌ ಮತ್ತು ಸ್ಥಳೀಯ ಪ್ರತಿಭೆ ರೋಹಿತ್ ಕುಮಾರ್ (22; 60ಎ, 4X3) ಎಂಟನೇ ವಿಕೆಟ್ ಜತೆಯಾಟದಲ್ಲಿ 42 (88 ಎ) ಸೇರಿಸಿದರು. ಸಿದ್ಧಾರ್ಥ್‌ ಕೌಲ್ ಬೌಲಿಂಗ್‌ನಲ್ಲಿ ಶರತ್ (76; 193ಎ, 4x6) ಎಲ್‌ಬಿ ಬಲೆಗೆ ಬಿದ್ದ ನಂತರ ಡಿಕ್ಲೇರ್‌ ಘೋಷಿಸಲಾಯಿತು.   

ಶತಕ ಗಳಿಸಿದ ಪಂಜಾಬ್ ತಂಡದ ಪ್ರಭಸಿಮ್ರನ್ ಸಿಂಗ್ ಸಂಭ್ರಮಿಸಿದರು
-ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಶತಕ ಗಳಿಸಿದ ಪಂಜಾಬ್ ತಂಡದ ಪ್ರಭಸಿಮ್ರನ್ ಸಿಂಗ್ ಸಂಭ್ರಮಿಸಿದರು -ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT