ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ‘ಶ್ರೇಯ’ದತ್ತ ಕರ್ನಾಟಕ ಚಿತ್ತ

ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿ: ತವರಿನಂಗಳದಲ್ಲಿ ಗೆಲುವಿಗಾಗಿ ಸೌರಾಷ್ಟ್ರದ ತವಕ
Last Updated 10 ಜನವರಿ 2020, 19:46 IST
ಅಕ್ಷರ ಗಾತ್ರ
ADVERTISEMENT
""
""
""

ರಾಜ್‌ಕೋಟ್: ಸರಿಯಾಗಿ ಒಂದು ವರ್ಷದ ಹಿಂದೆ ಬೆಂಗಳೂರಿನ ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೌರಾಷ್ಟ್ರ ತಂಡವು ಕರ್ನಾಟಕದ ರಣಜಿ ಟ್ರೋಫಿ ಫೈನಲ್‌ ತಲುಪುವ ಕನಸನ್ನು ಭಗ್ನಗೊಳಿಸಿತ್ತು. ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ಕರ್ನಾಟಕಕ್ಕೆ ಒದಗಿಬಂದಿದೆ.

ಸೌರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎ–ಬಿ ಗುಂಪಿನ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಈ ಸಲದ ಟೂರ್ನಿಯಲ್ಲಿ ಕರ್ನಾಟಕವು ಇದುವರೆಗೆ ನಾಲ್ಕು ಪಂದ್ಯಗಳಲ್ಲಿ ಸೋತಿಲ್ಲ. ತನ್ನ ಸಾಂಪ್ರದಾಯಿಕ ಎದುರಾಳಿಗಳಾದ ತಮಿಳುನಾಡು ಮತ್ತು ಮುಂಬೈ ತಂಡಗಳನ್ನು ಸೋಲಿಸಿದೆ. ಇದರಿಂದಾಗಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲಾಡುತ್ತಿದೆ. ಆದರೆ, ಸೌರಾಷ್ಟ್ರ ತಂಡವು ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು, ಒಂದು ಸೋತಿದೆ. ಕೇವಲ 13 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ.

ಕರ್ನಾಟಕ ತಂಡವು ತನ್ನ ಪ್ರಮುಖ ಆಟಗಾರರಾದ ಮನೀಷ್ ಪಾಂಡೆ, ಕೆ.ಎಲ್. ರಾಹುಲ್, ಕೃಷ್ಣಪ್ಪ ಗೌತಮ್ ಮತ್ತು ಮಯಂಕ್ ಅಗರವಾಲ್ ಅವರ ಗೈರುಹಾಜರಿಯಲ್ಲಿಯೂ ಅನುಪಸ್ಥಿತಿಯಲ್ಲಿಯೂ ಉತ್ತಮ ಸಾಧನೆ ಮಾಡಿದೆ. ಈ ಪಂದ್ಯದಲ್ಲಿ ಕರುಣ್ ನಾಯರ್ ಕೂಡ ಆಡುತ್ತಿಲ್ಲ. ಮದುವೆ ರಜೆ ಪಡೆದಿರುವ ಅವರ ಬದಲಿಗೆ ಶ್ರೇಯಸ್ ಗೋಪಾಲ್ ತಂಡವನ್ನು ಮುನ್ನಡೆಸುವರು. ಆಲ್‌ರೌಂಡರ್ ಶ್ರೇಯಸ್ ಇದುವರೆಗೆ ಈ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಗಳಿಸಿಲ್ಲ. ಆದರೆ ಬ್ಯಾಟಿಂಗ್‌ನಲ್ಲಿ ಮಿಂಚಿ, ತಂಡಕ್ಕೆ ಆಸರೆಯಾಗಿದ್ದಾರೆ. ಹೋದ ವರ್ಷದ ಗರಿಷ್ಠ ರನ್‌ ಸ್ಕೋರರ್ ಕೆ.ವಿ. ಸಿದ್ಧಾರ್ಥ್ ಮತ್ತು ಎಡಗೈ ಆಲ್‌ರೌಂಡರ್ ಪವನ್ ದೇಶಪಾಂಡೆ ತಂಡಕ್ಕೆ ಮರಳಿರುವುದು ಸಮಾಧಾನ.

ಮುಂಬೈ ಎದುರಿನ ಪಂದ್ಯದಲ್ಲಿ ಆರ್. ಸಮರ್ಥ್ ಲಯಕ್ಕೆ ಮರಳಿದ್ದರು. ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದರು. 19 ವರ್ಷದ ದೇವದತ್ತ ಪಡಿಕ್ಕಲ್ ಸತತ ನಾಲ್ಕು ಪಂದ್ಯಗಳಲ್ಲಿಯೂ ಅರ್ಧಶತಕ ಹೊಡೆದಿದ್ದಾರೆ. ಬಿ.ಆರ್. ಶರತ್ ಕೂಡ ತಂಡದ ಅಗತ್ಯಕ್ಕೆ ತಕ್ಕಂತೆ ಆಡಿದ್ದಾರೆ. ಬೌಲಿಂಗ್‌ನಲ್ಲಿ ಕೂಡ ದೊಡ್ಡ ಚಿಂತೆ ಇಲ್ಲ. ಅನುಭವಿ ಅಭಿಮನ್ಯು ಮಿಥುನ್ ನೇತೃತ್ವದ ಬೌಲಿಂಗ್ ಪಡೆಯು ಉತ್ತಮ ಫಾರ್ಮ್‌ನಲ್ಲಿದೆ. ಆದರೆ, ಇದುವರೆಗಿನ ಪಂದ್ಯಗಳಲ್ಲಿ ದೊಡ್ಡ ಮೊತ್ತದ ಸ್ಕೋರ್‌ಗಳನ್ನು ಕರ್ನಾಟಕವು ದಾಖಲಿಸಿಲ್ಲ. ಇಲ್ಲಿಯವರೆಗೆ ಆಡಿರುವ ಎಂಟು ಇನಿಂಗ್ಸ್‌ಗಳಲ್ಲಿ ಎರಡರಲ್ಲಿ ಮಾತ್ರ ಮುನ್ನೂರರ ಗಡಿ ದಾಟಿದೆ. ಇದುವರೆಗೆ ಒಬ್ಬರೂ ಶತಕ ಹೊಡೆದಿಲ್ಲ. ದೇವದತ್ತ ಹಿಮಾಚಲ ಪ್ರದೇಶ ಎದುರಿನ ಪಂದ್ಯದಲ್ಲಿ ಒಂದು ರನ್‌ ಅಂತರದಿಂದ ಶತಕ ತಪ್ಪಿಸಿಕೊಂಡಿದ್ದರು. ಆದ್ದರಿಂದ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಗಳಿಸುವ ಅವಶ್ಯಕತೆ ಇದೆ.

ಜಯದೇವ್ ಉನದ್ಕತ್ ನಾಯಕತ್ವದ ಸೌರಾಷ್ಟ್ರ ತಂಡವು ಈ ಪಂದ್ಯದಲ್ಲಿ ಜಯಿಸಲೇಬೇಕಾದ ಒತ್ತಡದಲ್ಲಿದೆ. ತಂಡದ ‘ಟ್ರಂ ಪ್‌ ಕಾರ್ಡ್‌’ ಚೇತೇಶ್ವರ್ ಪೂಜಾರ ಈ ಪಂದ್ಯದಲ್ಲಿ ಆಡುತ್ತಿಲ್ಲ. ಇದು ಕರ್ನಾಟಕದ ಮಟ್ಟಿಗೆ ಒಳ್ಳೆಯ ಸುದ್ದಿ. ಆತಿಥೇಯ ತಂಡವು ಹರ್ವಿಕ್ ದೇಸಾಯಿ, ಶೆಲ್ಡನ್ ಜಾಕ್ಸನ್, ಸ್ನೆಲ್ ಪಟೇಲ್ ಮೇಲೆ ಹೆಚ್ಚು ಅವಲಂಬಿತವಾಗಬೇಕಿದೆ. ಉನದ್ಕತ್ ಮತ್ತು ಧರ್ಮೇಂದ್ರಸಿಂಹ ಜಡೇಜ ಅವರಿರುವ ಬೌಲಿಂಗ್ ಪಡೆಯು ಸಮರ್ಥವಾಗಿದೆ.

ಚುರುಕಾದ ಬಿಸಿಲು ಇರುವ ರಾಜ್‌ ಕೋಟ್‌ನಲ್ಲಿ ಈ ಹಿಂದೆಯೂ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ಅವಕಾಶ ಕೊಟ್ಟಿದೆ. ಆದ್ದರಿಂದ ಟಾಸ್ ಗೆದ್ದ ತಂಡವು ತೆಗೆದುಕೊಳ್ಳುವ ನಿರ್ಧಾರವೂ ಮುಖ್ಯವಾಗಲಿದೆ.

ತಂಡಗಳು

ಕರ್ನಾಟಕ: ಶ್ರೇಯಸ್ ಗೋಪಾಲ್ (ನಾಯಕ), ದೇವದತ್ತ ಪಡಿಕ್ಕಲ್, ಆರ್. ಸಮರ್ಥ್, ಕೆ.ವಿ. ಸಿದ್ಧಾರ್ಥ್, ಪವನ್ ದೇಶಪಾಂಡೆ, ಬಿ.ಅರ್. ಶರತ್ (ವಿಕೆಟ್‌ಕೀಪರ್), ಅಭಿಮನ್ಯು ಮಿಥುನ್, ವಿ. ಕೌಶಿಕ್, ರೋನಿತ್ ಮೋರೆ, ಪ್ರತೀಕ್ ಜೈನ್, ಜೆ. ಸುಚಿತ್, ಪ್ರವೀಣ ದುಬೆ, ರೋಹನ್ ಕದಂ, ಡೇಗಾ ನಿಶ್ಚಲ್, ಯರೆ ಕೆ ಗೌಡ (ಕೋಚ್).

ಸೌರಾಷ್ಟ್ರ: ಜಯದೇವ್ ಉನದ್ಕತ್ (ನಾಯಕ), ಸ್ನೆಲ್ ಪಟೇಲ್ (ವಿಕೆಟ್‌ಕೀಪರ್), ಹರ್ವಿಕ್ ದೇಸಾಯಿ, ಶೆಲ್ಡನ್ ಜಾಕ್ಸನ್, ಸಮರ್ಥ್ ವ್ಯಾಸ್, ಪ್ರೇರಕ್ ಮಂಕಡ್, ಧರ್ಮೇಂದ್ರಸಿಂಹ ಜಡೇಜ, ಪಾರರ್ಥ್ ಭೂತ್, ಜೈ ಚೌಹಾಣ, ಕಮಲೇಶ್ ಮಕ್ವಾನ, ಚಿರಾಗ್ ಜಾನಿ, ಅರ್ಪಿತ್ ವಸವದಾ, ಕುಶಾಂಗ್ ಪಟೇಲ್, ಅವಿ ಬಾರೋಟ್, ದಿವ್ಯರಾಜ್ ಚೌಹಾಣ್, ವಿಶ್ವರಾಜ್ ಜಡೆಜ, ಚೇತನ್ ಸಕಾರಿಯಾ, ಸಿತಾಂಶು ಕೋಟಕ್ (ಕೋಚ್).

ಪಂದ್ಯ ಆರಂಭ: ಬೆಳಿಗ್ಗೆ 9.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT