ಮಂಗಳವಾರ, ಫೆಬ್ರವರಿ 18, 2020
30 °C
ಉದ್ಯಾನ ನಗರಿಯಲ್ಲಿ ಇಂದಿನಿಂದ ರಣಜಿ ಹಣಾಹಣಿ: ಕರುಣ್ ನಾಯರ್ ಬಳಗಕ್ಕೆ ಕೃಣಾಲ್ ಪಾಂಡ್ಯ ಪಡೆ ಸವಾಲು

ಕರ್ನಾಟಕಕ್ಕೆ ನಿರ್ಣಾಯಕ ಪಂದ್ಯ: ಬೆಂಗಳೂರಿನಲ್ಲಿ ಇಂದಿನಿಂದ ರಣಜಿ ಹಣಾಹಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ತಂಡ ತುಸು ಒತ್ತಡದಿಂದ ರಣಜಿ ಟ್ರೋಫಿಯ ತನ್ನ ಕೊನೆಯ ಲೀಗ್‌ ಪಂದ್ಯವನ್ನು ಆಡಬೇಕಾಗಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗುವ ‘ಬಿ’ ಗುಂಪಿನ ಈ ಪಂದ್ಯ ನಾಕೌಟ್‌ ಪ್ರವೇಶದ ದೃಷ್ಟಿಯಿಂದ ಕರುಣ್‌ ನಾಯರ್‌ ಪಡೆಗೆ ನಿರ್ಣಾಯಕವಾಗಿದೆ.

ಈ ಪಂದ್ಯದಲ್ಲಿ ಗೆದ್ದರೆ ಅಥವಾ ಕಡೇಪಕ್ಷ ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿದರೂ ನಾಕೌಟ್‌ ಸ್ಥಾನ ಖಚಿತಪಡಿಸಿಕೊಳ್ಳಬಹುದು. ಬರೋಡಾಕ್ಕೆ ಈಗಾಗಲೇ ನಾಕೌಟ್‌ ಬಾಗಿಲುಗಳು ಮುಚ್ಚಿವೆ. ಆದರೆ ಈ ತಂಡ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದರೆ ಅಥವಾ ಗೆದ್ದರೆ ಕರ್ನಾಟಕದ ಭವಿಷ್ಯ ಇತರ ಪಂದ್ಯಗಳ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.

ಕರ್ನಾಟಕ ಈ ಪಂದ್ಯಕ್ಕೆ ಮೊದಲು ಆಡಿರುವ ಏಳು ಪಂದ್ಯಗಳಲ್ಲಿ ಮೂರು ಗೆದ್ದು, ನಾಲ್ಕು ‘ಡ್ರಾ’ ಮಾಡಿಕೊಂಡಿದ್ದು, 25 ಪಾಯಿಂಟ್ಸ್‌ ಗಳಿಸಿದೆ. ‘ಡ್ರಾ’ ಮಾಡಿರುವ ಪಂದ್ಯಗಳ ಪೈಕಿ ಮೂರರಲ್ಲಿ ಎದುರಾಳಿಗಳಿಗೆ ಮುನ್ನಡೆ ಬಿಟ್ಟು ಕೊಟ್ಟಿದೆ. ಆದರೆ ಶಿವಮೊಗ್ಗದಲ್ಲಿ ಮಧ್ಯಪ್ರದೇಶಕ್ಕೆ ಮುನ್ನಡೆ ಬಿಟ್ಟುಕೊಟ್ಟಿದ್ದು ಈಗಿನ ಸ್ಥಿತಿಗೆ ಕಾರಣ.

ಗುಜರಾತ್‌ (29), ಸೌರಾಷ್ಟ್ರ (28), ಆಂಧ್ರ ತಂಡಗಳು (27) ‘ಎಲೈಟ್‌’ ಗುಂಪಿನಿಂದ ಕ್ವಾರ್ಟರ್‌ ಫೈನಲ್‌ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಗುಂಪಿನಿಂದ ಕ್ವಾರ್ಟರ್‌ಫೈನಲ್‌ಗೆ ಎರಡು ಸ್ಥಾನಗಳಷ್ಟೇ ಉಳಿದಿವೆ. ಇದಕ್ಕಾಗಿ ಐದು ತಂಡಗಳು ಪೈಪೋಟಿಯಲ್ಲಿವೆ.

ಮಂಗಳವಾರ, ತಂಡ ಅಭ್ಯಾಸ ನಡೆಸಿದ ನಂತರ ಮಾತನಾಡಿದ ಕರುಣ್‌ ನಾಯರ್‌, ‘ಈ ಪಂದ್ಯ ಗೆಲ್ಲುವುದಕ್ಕೇ ನಾವು ಪ್ರಯತ್ನಿಸುತ್ತೇವೆ. ನಾಲ್ಕೂ ದಿನ ಚೆನ್ನಾಗಿ ಆಡವುದು ನಮ್ಮ ಗುರಿ. ಗೆಲುವು ಸಾಧ್ಯವಾ‌ಗದಿದ್ದರಷ್ಟೇ ಮೊದಲ ಇನಿಂಗ್ಸ್‌ ಮುನ್ನಡೆಗೆ ಹೋಗುತ್ತೇವೆ’ ಎಂದು ಹೇಳಿದರು.

ಬ್ಯಾಟಿಂಗ್‌ ವಿಭಾಗದಲ್ಲಿ ಒತ್ತಡವಿರು ವುದನ್ನು ಅವರು ಒಪ್ಪಿಕೊಂಡರು. ‘ವೈಯಕ್ತಿಕವಾಗಿ ಎಲ್ಲ ಆಟಗಾರರಿಗೆ ಒತ್ತಡವಿರುತ್ತದೆ. ಆದರಿಂದ ಹೊರ ಬಂದು ರನ್‌ ಪೇರಿಸುವುದರ ಜೊತೆಗೆ ಪರಿಸ್ಥಿತಿಗೆ ಹೊಂದಿಕೊಂಡು ಆಡಬೇಕಾ ಗುತ್ತದೆ’ ಎಂದರು.

ಮೊದಲ ಕೆಲವು ಪಂದ್ಯಗಳಲ್ಲಿ ‌ಆರಂಭ ಆಟಗಾರ ದೇವದತ್ತ ಪಡಿಕ್ಕಲ್‌ ಸ್ಥಿರ ಪ್ರದರ್ಶನ ನೀಡಿದ್ದಾರೆ. ನಂತರ ಅಂಥದ್ದೇ ಆಟ ಮುಂದುವರಿಸಿಲ್ಲ. ಎರಡು ಪಂದ್ಯಗಳಿಂದ ಆರ್‌.ಸಮರ್ಥ್ ಲಯ ಕಂಡುಕೊಂಡಿರುವುದು ಕರ್ನಾ ಟಕಕ್ಕೆ ಸಮಾಧಾನ ಮೂಡಿಸಿದೆ. ಈ ಋತುವಿನಲ್ಲಿ  ಕರ್ನಾಟಕದ ಏಕೈಕ ಶತಕ ದಾಖಲಿಸಿರುವ ಅವರು ಉಪ ನಾಯಕನ ಸ್ಥಾನಕ್ಕೂ ಬಡ್ತಿ ಪಡೆದಿದ್ದಾರೆ.

ಸ್ವತಃ ನಾಯಕ ಕರುಣ್‌ ಸೇರಿದಂತೆ ಉಳಿದವರಿಂದ ಸ್ಥಿರ ಪ್ರದರ್ಶನ ಬಂದಿಲ್ಲ. ಎರಡು ಅರ್ಧ ಶತಕ ಬಿಟ್ಟರೆ ಕರುಣ್‌ ಅವರಿಂದ ದೊಡ್ಡ ಇನಿಂಗ್ಸ್‌ ಬಂದಿಲ್ಲ. ಬ್ಯಾಟಿಂಗ್ ಬಲಪಡಿಸುವ ಉದ್ದೇಶ ದಿಂದ ರೋಹನ್ ಕದಂ ಬದಲಿಗೆ ನಿಶ್ಚಲ್‌ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಹಿಂದೆ ಹಲವು ಬಾರಿ ಉಪಯುಕ್ತ ಆಟವಾಡಿದ್ದ ಶ್ರೇಯಸ್‌ ಗೋಪಾಲ್‌ ಈ ಋತುವಿನಲ್ಲಿ ವಿಫಲರಾಗಿದ್ದಾರೆ. ಕೆ.ಗೌತಮ್‌ ಈ ಬಾರಿ ಕೆಲವು ಉಪಯುಕ್ತ ಇನಿಂಗ್ಸ್‌ ಆಡಿದ್ದಾರೆ.

ಆನುಭವಿ ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ ಅವರ ಜೊತೆ ವೇಗದ ಬೌಲಿಂಗ್‌ನಲ್ಲಿ ಬಲ ಹೆಚ್ಚಿಸಲು ತಂಡಕ್ಕೆ ಪ್ರಸಿದ್ಧ ಕೃಷ್ಣ ಅವರನ್ನು ಸೇರ್ಪಡೆ ಮಾಡಲಾಗಿದೆ. ಅವರು ಹಾಲಿ ಋತುವಿನಲ್ಲಿ ಒಂದೂ ಪಂದ್ಯ ಆಡಿಲ್ಲ. ಹೀಗಾಗಿ ತಮ್ಮ ಸಾಮರ್ಥ್ಯ ತೋರಲು ಅವರಿಗೆ ಈ ಪಂದ್ಯ ಮಹತ್ವದ್ದು.

ಇನ್ನೊಂದೆಡೆ ಅಂತರರಾಷ್ಟ್ರೀಯ ಆಟಗಾರ ಕೃಣಾಲ್‌ ಪಾಂಡ್ಯ ನೇತೃತ್ವದ ಬರೋಡಾ ತಂಡ ಎಲೈಟ್‌ ಗುಂಪಿನಲ್ಲಿ 14 ಪಾಯಿಂಟ್‌ಗಳೊಡನೆ 13ನೇ ಸ್ಥಾನದಲ್ಲಿದೆ. 

ಈ ತಂಡದ ಬ್ಯಾಟ್ಸ್‌ಮನ್ನರ ಪೈಕಿ ಆರಂಭ ಆಟಗಾರ ಕೇದಾರ ದೇವಧರ್‌, ವಿಷ್ಣು ಸೋಲಂಕಿ ಮತ್ತು ದೀಪಕ್‌ ಹೂಡಾ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅನುರೀತ್‌ ಸಿಂಗ್‌ ಮತ್ತು ಲುಕ್ಮನ್‌ ಮೆರಿವಾಲಾ ಮಧ್ಯಮ ವೇಗದ ಬೌಲಿಂಗ್‌ನಲ್ಲಿ ತಂಡದ ಶಕ್ತಿಯಾಗಿದ್ದಾರೆ. ಆದರೆ ಬರೋಡಾ ತಂಡವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ.

ಕರ್ನಾಟಕ ವಿರುದ್ಧ ಅದು ಹಿಂದಿನ ಐದು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದು, ಒಂದು ಸೋತಿದೆ. ಎರಡು ಪಂದ್ಯಗಳಲ್ಲಿ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿದೆ.

ತಂಡಗಳು

ಕರ್ನಾಟಕ: ಕರುಣ್‌ ನಾಯರ್‌ (ನಾಯಕ), ಆರ್‌.ಸಮರ್ಥ್‌ (ಉಪನಾಯಕ), ದೇವದತ್ತ ಪಡಿಕ್ಕಲ್‌, ಡಿ.ನಿಶ್ಚಲ್‌, ಪವನ್‌ ದೇಶಪಾಂಡೆ, ಶರತ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌), ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ಕೆ.ವಿ.ಸಿದ್ಧಾರ್ಥ್‌, ಪ್ರಸಿದ್ಧ ಕೃಷ್ಣ, ಪ್ರವೀಣ್‌ ದುಬೆ, ವಿ.ಕೌಶಿಕ್‌, ರೋನಿತ್‌ ಮೋರೆ ಮತ್ತು ಬಿ.ಆರ್‌.ಶರತ್‌.

ಬರೋಡಾ: ಕೃಣಾಲ್‌ ಪಾಂಡ್ಯ (ನಾಯಕ), ಕೇದಾರ ದೇವಧರ್‌ (ಉಪನಾಯಕ), ದೀಪಕ್‌ ಹೂಡಾ, ಅಹಮದ್‌ನೂರ್‌ ಪಠಾಣ್‌, ವಿಷ್ಣು ಸೋಲಂಕಿ, ಪಾರ್ಥ್ ಕೊಹ್ಲಿ, ಅಭಿಮನ್ಯು ಸಿಂಗ್‌ ರಜಪೂತ್‌, ವಿರಾಜ್‌ ಭೋಸ್ಲೆ (ವಿಕೆಟ್ ಕೀಪರ್‌, ಭಾರ್ಗವ ಭಟ್‌, ಲುಕ್ಮನ್‌ ಮೆರಿವಾಲಾ, ಅನುರೀತ್‌ ಸಿಂಗ್‌, ಗುರ್ಜಿಂದರ್‌ ಸಿಂಗ್‌ ಮಾನ್‌, ಪ್ರತ್ಯುಷ್‌ ಕುಮಾರ್‌, ಸೋಯೆಬ್‌ ಸೊಪಾರಿಯಾ, ಬಾಬಾಸಫಿಖಾನ್‌ ಪಠಾಣ್‌.

ಈ ಋತುವಿನಲ್ಲಿ ಕರ್ನಾಟಕ ಪರ ಅತಿ ಹೆಚ್ಚು ರನ್‌ ಗಳಿಸಿದವರು

ಕ್ರಮವಾಡಿ ಆಡಿರುವ ಪಂದ್ಯ, ಗಳಿಸಿದ ರನ್‌ಗಳು

ದೇವದತ್ತ ಪಡಿಕ್ಕಲ್‌ 7, 535

ಆರ್‌.ಸಮರ್ಥ್‌  6, 392

ಶ್ರೇಯಸ್‌ ಗೋಪಾಲ್‌ 7, 243

ಕರುಣ್‌ ನಾಯರ್‌ 6, 220

ಬರೋಡಾ

ವಿ.ಪಿ.ಸೋಳಂಕಿ 7, 412

ಕೇದಾರ್‌ ದೇವಧರ್‌ 7, 394

ದೀಪಕ್‌ ಹೂಡಾ 7, 257

ಯೂಸುಫ್‌ ಪಠಾಣ್‌ 7, 245

ರಣಜಿ ಪಂದ್ಯಗಳಲ್ಲಿ ಕರ್ನಾಟಕ ಸಾಧನೆ

ಪಂದ್ಯಗಳು  ಗೆಲುವು  ಸೋಲು   ಡ್ರಾ 

446       201      69     179

ಬರೋಡಾ ಸಾಧನೆ

396       99       89      208

ಆರಂಭ: ಬೆಳಿಗ್ಗೆ 9.30 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು