ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಗ್ ಸ್ಪಿನ್ನರ್ ರಶೀದ್ ಖಾನ್‌ಗೆ ತಾಯಿಯೇ ದೊಡ್ಡ ಅಭಿಮಾನಿಯಂತೆ

Last Updated 30 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ತಾಯಿಗಿಂತ ಬಂಧುವಿಲ್ಲ ಎಂಬ ನುಡಿ ವಾತ್ಸಲ್ಯ, ಮಮತೆ, ಆತ್ಮೀಯತೆ, ಸಮರ್ಪಣಾ ಭಾವದ ಮೂರ್ತರೂಪವಾದ ಅಮ್ಮನ ಮಹಾಗುಣವನ್ನು ಎರಡೇ ಪದಗಳಲ್ಲಿ ಹಿಡಿದಿರಿಸಿದೆ. ಇಂಥ ತಾಯಿ ಕ್ರಿಕೆಟ್ ಪ್ರೇಮಿಯೂ ಆಟಗಾರನ ಅಭಿಮಾನಿಯೂ ಆಗಬಲ್ಲರು ಎಂಬುದಕ್ಕೆ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರ ಅಮ್ಮನೇ ಸಾಕ್ಷಿ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಂಗಳವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಜಯ ಗಳಿಸಲು ಪ್ರಮುಖ ಕಾರಣರಾದ ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಭಾವುಕರಾಗಿ ತಾಯಿಯನ್ನು ನೆನೆದುಕೊಂಡರು. ಈ ಹಿಂದೆ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದಾಗಲೆಲ್ಲ ಕರೆ ಮಾಡಿ ಕೆಲ ಕಾಲ ಮಾತನಾಡುತ್ತಿದ್ದ ತಾಯಿ ಮಗನ ಅಂದಿನ ಪ್ರದರ್ಶನದ ಬಗ್ಗೆ ಚರ್ಚಿಸುತ್ತಿದ್ದರು. ಆದರೆ ಈ ಬಾರಿ ಹಾಗೆ ಮಾತನಾಡಲು ಅವರು ಇಲ್ಲ. ಮೂರು ತಿಂಗಳ ಹಿಂದೆ ಅವರು ತೀರಿಹೋಗಿದ್ದರು. ಒಂದೂವರೆ ವರ್ಷದ ಹಿಂದೆ ರಶೀದ್ ಖಾನ್ ತಂದೆಯನ್ನೂ ಕಳೆದುಕೊಂಡಿದ್ದರು.

‘ಕ್ರಿಕೆಟ್ ಬಗ್ಗೆ ಅಮ್ಮನಿಗೆ ತುಂಬ ಆಸಕ್ತಿ ಇತ್ತು. ಐಪಿಎಲ್‌ ವೀಕ್ಷಿಸುವುದೆಂದರೆ ಅವರಿಗೆ ಅಚ್ಚುಮೆಚ್ಚು. ಕ್ರಿಕೆಟ್ ಜಗತ್ತಿನಲ್ಲಿ ನನಗೆ ಎಷ್ಟೋ ಅಭಿಮಾನಿಗಳಿದ್ದಾರೆ. ಆದರೆ ಅಮ್ಮ, ನನ್ನ ಬಹುದೊಡ್ಡ ಅಭಿಮಾನಿ. ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದರೆ ಕರೆ ಮಾಡಿ ತುಂಬ ಮಾತನಾಡುತ್ತಿದ್ದರು. ಈಗ ಅವರೇ ಇಲ್ಲ. ಹೀಗಾಗಿ ಮಾನಸಿಕವಾಗಿ ಕುಗ್ಗಿದ್ದೇನೆ’ ಎಂದು ಹೇಳುತ್ತಾರೆ ರಶೀದ್.

ಅಪ್ಗಾನಿಸ್ತಾನದ ಪೂರ್ವಪ್ರಾಂತದ, ಕಾಬೂಲ್‌ ಗಡಿಗೆ ಹೊಂದಿಕೊಂಡಿರುವ ನಂಗರಹರ್‌ನಲ್ಲಿ 1998ರಲ್ಲಿ ಜನಿಸಿದ ರಶೀದ್ ಖಾನ್ ಅವರ ಬಾಲ್ಯ ಸಂಕಷ್ಟಮಯವೂ ಸವಾಲಿನದ್ದೂ ಅಗಿತ್ತು. ರಶೀದ್ ಮೂರು ವರ್ಷದ ಬಾಲಕನಾಗಿದ್ದಾಗ ನಡೆದ ಯುದ್ಧದಿಂದಾಗಿ ಕುಟುಂಬ ಪಾಕಿಸ್ತಾನಕ್ಕೆ ಪಲಾಯನ ಮಾಡಿತ್ತು. ಪರಿಸ್ಥಿತಿ ಶಾಂತವಾದಾಗ ವಾಪಸಾಗಿತ್ತು. ಅಫ್ಗಾನ್‌ಗೆ ಮರಳಿದ ನಂತರವೇ ರಶೀದ್ ಶಾಲೆಗೆ ಹೋಗಲು ಅರಂಭಿಸಿದ್ದು.

ಕ್ರಿಕೆಟ್‌ ಬಗ್ಗೆ ಸಣ್ಣ ವಯಸ್ಸಿನಲ್ಲೇ ಆಸಕ್ತಿ ಇದ್ದ ರಶೀದ್ ಪಾಕಿಸ್ತಾನದಲ್ಲಿದ್ದಾಗ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಅವರ ಆಟಕ್ಕೆ ಮಾರುಹೋಗಿದ್ದರು. ಹೀಗಾಗಿ ಬೌಲಿಂಗ್‌ನಲ್ಲಿ ಅವರ ಶೈಲಿಯನ್ನೇ ಅನುಸರಿಸಲು ನಿರ್ಧರಿಸಿದರು. ಸೌಲಭ್ಯಗಳ ಕೊರತೆ, ರಾಜಕೀಯ ಅಸ್ಥಿತರತೆಯ ನಡುವೆಯೂ ಕ್ರಿಕೆಟ್ ಅಭ್ಯಾಸ ಮಾಡಿದ ರಶೀದ್ 17ನೇ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 2015ರಲ್ಲಿ ನಡೆದ ಜಿಂಬಾಬ್ವೆ ಎದುರಿನ ಏಕದಿನ ಪಂದ್ಯದಲ್ಲಿ ದೇಶದ ಸೀನಿಯರ್ ತಂಡದ ಪರವಾಗಿ ಮೊದಲು ಕಣಕ್ಕೆ ಇಳಿದ ಅವರು ಅದೇ ವರ್ಷ ಮೊದಲ ಟ್ವೆಂಟಿ–20 ಪಂದ್ಯವನ್ನೂ ಜಿಂಬಾಬ್ವೆ ವಿರುದ್ಧವೇ ಆಡಿದರು. ಮೊದಲ ಟೆಸ್ಟ್‌ ಆಡಿದ್ದು 2018ರಲ್ಲಿ, ಭಾರತದ ವಿರುದ್ಧ.

ನಾಲ್ಕು ಟೆಸ್ಟ್, 71 ಏಕದಿನ, 48 ಅಂತರರಾಷ್ಟ್ರೀಯ ಟ್ವೆಂಟಿ–20 ಮತ್ತು 221 ಇತರ ಟ್ವೆಂಟಿ–20 ಪಂದ್ಯಗಳನ್ನು ಆಡಿರುವ ರಶೀದ್ ಟೆಸ್ಟ್‌ನಲ್ಲಿ 106, ಏಕದಿನ ಪಂದ್ಯಗಳಲ್ಲಿ 905, ಟ್ವೆಂಟಿ–20 ಕ್ರಿಕೆಟ್‌ನಲ್ಲಿ 163 ಹಾಗೂ ಇತರೆ ಟ್ವೆಂಟಿ–20 ಟೂರ್ನಿಗಳಲ್ಲಿ 969 ರನ್ ಕಲೆ ಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಮತ್ತು ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕು ಅರ್ಧಶತಕ ಗಳಿಸಿದ್ದಾರೆ. ಟ್ವೆಂಟಿ–20 ಲೀಗ್‌ಗಳಲ್ಲಿ ಒಂದು ಅರ್ಧಶತಕ ಅವರ ಖಾತೆಗೆ ಸೇರಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 23 ವಿಕೆಟ್ ಉರುಳಿಸಿರುವ ಅವರು ಏಕದಿನ ಪಂದ್ಯಗಳಲ್ಲಿ 133 ವಿಕೆಟ್ ಕಬಳಿಸಿದ್ದಾರೆ. ಟ್ವೆಂಟಿ–29 ಕ್ರಿಕೆಟ್‌ನಲ್ಲಿ 89 ವಿಕೆಟ್ ಮತ್ತು ಟ್ವೆಂಟಿ–20 ಲೀಗ್‌ಗಳಲ್ಲಿ 307 ವಿಕಟ್ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಟೆಸ್ಟ್‌ನಲ್ಲಿ ಮೂರು ಬಾರಿ ಐದು ವಿಕೆಟ್ ಮತ್ತು ಒಂದು ಬಾರಿ 10 ವಿಕೆಟ್‌ಗಳ ಗೊಂಚಲು ಅವರ ಪಾಲಾಗಿದೆ. ಏಕದಿನದಲ್ಲಿ ನಾಲ್ಕು ಮತ್ತು ಟ್ವೆಂಟಿ–20ಯಲ್ಲಿ ಎರಡು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT