ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿಗೆ ಮತ್ತೊಂದು ಗೆಲುವಿನ ಆಸೆ

ಕೋಲ್ಕತ್ತದಲ್ಲಿ ಕೆಕೆಆರ್‌ ವಿರುದ್ಧ ಕೊಹ್ಲಿ ಬಳಗದ ಹಣಾಹಣಿ: ಡೇಲ್ ಸ್ಟೇನ್‌ ಕಣಕ್ಕೆ ಇಳಿಯುವ ಸಾಧ್ಯತೆ
Last Updated 18 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಎಂಟು ಪಂದ್ಯಗಳಲ್ಲಿ ಏಕೈಕ ಜಯ ಗಳಿಸಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಈಗ ಮತ್ತೊಂದು ಜಯದ ಮೇಲೆ ಆಸೆ, ಮತ್ತೊಮ್ಮೆ ಗೆಲುವಿನ ಕೇಕೆ ಹಾಕುವ ಕಾತರ.

ಈಡನ್‌ ಗಾರ್ಡನ್ಸ್‌ನಲ್ಲಿ ಶುಕ್ರವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಆತಿಥೇಯ ಕೋಲ್ಕತ್ತ ನೈಟ್‌ ರೈಡರ್ಸ್ ಎದುರು ಸೆಣಸಲಿದ್ದು ಗೌರವ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಸತತ ಮೂರು ಪಂದ್ಯಗಳಲ್ಲಿ ಸೋತು ಭರವಸೆ ಕಳೆದುಕೊಂಡಿರುವ ನೈಟ್‌ ರೈಡರ್ಸ್‌ ಜಯದ ಲಯಕ್ಕೆ ಮರಳುವ ಪ್ರಯತ್ನ ಮಾಡಲಿದೆ.

ಟೂರ್ನಿಯ ಆರಂಭದಲ್ಲಿ ಉತ್ತಮ ಸಾಮರ್ಥ್ಯ ತೋರಿದ ನೈಟ್‌ ರೈಡರ್ಸ್‌ ತಂಡ ಪಾಯಿಂಟ್ ಪಟ್ಟಿಯ ಎರಡನೇ ಸ್ಥಾನಕ್ಕೇರಿತ್ತು. ಆದರೆ ನಂತರ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಎಂಟು ಪಂದ್ಯಗಳಲ್ಲಿ ನಾಲ್ಕನ್ನು ಸೋತಿರುವ ತಂಡ ಈಗ ಪಾಯಿಂಟ್ ಪಟ್ಟಿಯ ಆರನೇ ಸ್ಥಾನಕ್ಕೆ ಕುಸಿದಿದೆ. ತಂಡ ಗೆದ್ದ ಪಂದ್ಯಗಳಲ್ಲಿ ಗುಡುಗಿದ್ದ ಆ್ಯಂಡ್ರೆ ರಸೆಲ್‌ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದರು. ಚೇತರಿಸಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದ್ದಂತೆ ಅಭ್ಯಾಸದ ವೇಳೆ ಭುಜಕ್ಕೆ ಪೆಟ್ಟು ಬಿದ್ದು ಕಂಗಾಲಾಗಿದ್ದಾರೆ. ಆದ್ದರಿಂದ ಶುಕ್ರವಾರ ಕಣಕ್ಕೆ ಇಳಿಯುವುದು ಅನುಮಾನ. ಇದು ಆರ್‌ಸಿಬಿ ಪಾಳಯದಲ್ಲಿ ಸಮಾಧಾನ ಮೂಡಿಸಿದೆ.

ಮೊದಲ ಸುತ್ತಿನಲ್ಲಿ ಆರ್‌ಸಿಬಿ ಎದುರು ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ರಸೆಲ್‌ 13 ಎಸೆತಗಳಲ್ಲಿ 48 ರನ್ ಗಳಿಸಿದ್ದರು. 206 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ತಂಡ ರಸೆಲ್ ಅಬ್ಬರದ ನೆರವಿನಿಂದ ಗೆಲುವಿನ ದಡ ಸೇರಿತ್ತು. ಹೀಗಾಗಿ ಶುಕ್ರವಾರ ರಸೆಲ್ ಗುಣಮುಖರಾಗದೇ ಇದ್ದರೆ ನೈಟ್ ರೈಡರ್ಸ್‌ ಸಂಕಷ್ಟಕ್ಕೆ ಈಡಾಗಲಿದೆ.

ಪ್ಲೇ ಆಫ್‌ ಹಂತಕ್ಕೇರಬೇಕಾದರೆ ನೈಟ್ ರೈಡರ್ಸ್‌ ಉಳಿದಿರುವ ಆರು ಪಂದ್ಯಗಳ ಪೈಕಿ ಕನಿಷ್ಠ ನಾಲ್ಕನ್ನು ಗೆಲ್ಲಬೇಕು. ಆರ್‌ಸಿಬಿ ಎದುರಿನ ಪಂದ್ಯ ಗೆದ್ದು ಮುಂದಿನ ಹಾದಿ ಸುಗಮಗೊಳಿಸುವುದು ತಂಡದ ಉದ್ದೇಶ.

ಮತ್ತೆ ಕೊಹ್ಲಿ–ಡಿವಿಲಿಯರ್ಸ್‌ ಮೇಲೆ ಅವಲಂಬನೆ?: ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್ ಹೆಚ್ಚಿನ ಎಲ್ಲ ಪಂದ್ಯಗಳಲ್ಲೂ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಆದರೆ ಉಳಿದವರಿಗೆ ನಿರೀಕ್ಷೆಗೆ ತಕ್ಕಂತೆ ಆಡಲು ಆಗಲಿಲ್ಲ. ಈ ಪಂದ್ಯದಲ್ಲೂ ತಂಡದ ಈ ಚಾಳಿ ಮುಂದುವರಿಯುವುದು ಬೇಡ ಎಂಬ ಆಶಯ ಅಭಿಮಾನಿಗಳದು.

ತಂಡದ ಬೌಲಿಂಗ್ ವಿಭಾಗ ನಿರಾಸೆ ಮೂಡಿಸಿದೆ. ಅನುಭವಿ ಮಧ್ಯಮ ವೇಗಿ ಉಮೇಶ್ ಯಾದವ್‌ ಮೊನಚು ಕಳೆದುಕೊಂಡಿದ್ದಾರೆ. ಯುವ ಬೌಲರ್ ನವದೀಪ್ ಸೈನಿ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ. ನೇಥನ್ ಕಾಲ್ಟರ್‌ನೈಲ್ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿರುವ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್‌ ನೈಟ್‌ ರೈಡರ್ಸ್ ಎದುರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಸ್ಪಿನ್ನರ್‌ಗಳು ಸ್ಥಿರ ಪ್ರದರ್ಶನ ತೋರಲು ವಿಫಲರಾಗುತ್ತಿರುವುದು ನೈಟ್‌ರೈಡರ್ಸ್‌ ತಂಡಕ್ಕೆ ಸವಾಲಾಗಿ ಪರಿಣಮಿಸಿದೆ. ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಳಿಸಿರುವ ನಾಯಕ ದಿನೇಶ್‌ ಕಾರ್ತಿಕ್ ಈ ಪಂದ್ಯದಲ್ಲಿ ಗಮನ ಸೆಳೆಯಲಿದ್ದಾರೆ. ಈ ವರೆಗೆ ಕೇವಲ ಒಂದು ಅರ್ಧಶತಕ ಗಳಿಸಿರುವ ಕಾರ್ತಿಕ್‌ 18.50 ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಆರ್‌ಸಿಬಿ ಎದುರಿನ ಪಂದ್ಯ ಅವರಿಗೂ ಸವಾಲಿನದ್ದಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT