ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಆರ್‌ಸಿಬಿಗೆ ಜಯದ ಹಾದಿಗೆ ಮರಳುವ ತವಕ

ವಿರಾಟ್ ಕೊಹ್ಲಿ–ರೋಹಿತ್ ಶರ್ಮಾ ಮುಖಾಮುಖಿ; ಮುಂಬೈ ಇಂಡಿಯನ್ಸ್‌ಗೆ –ಫಫ್ ಡುಪ್ಲೆಸಿ ಬಳಗದ ಸವಾಲು
Published 10 ಏಪ್ರಿಲ್ 2024, 16:10 IST
Last Updated 10 ಏಪ್ರಿಲ್ 2024, 16:10 IST
ಅಕ್ಷರ ಗಾತ್ರ

ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರ ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯಲಿದೆ.

ಈ ಬಾರಿಯ ಟೂರ್ನಿಯಲ್ಲಿ ಒಟ್ಟು ಐದು ಪಂದ್ಯಗಳನ್ನು ಅಡಿರುವ ಆರ್‌ಸಿಬಿ ತಂಡವು ನಾಲ್ಕರಲ್ಲಿ ಸೋತಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋತಿತ್ತು. ಎರಡನೇ ಪಂದ್ಯದಲ್ಲಿ  ಪಂಜಾಬ್ ಕಿಂಗ್ಸ್ ವಿರುದ್ಧ ಜಯಿಸಿತ್ತು. ಅದರ ನಂತರ ಮೂರು ಹಣಾಹಣಿಗಳಲ್ಲಿ ಸತತ ಸೋಲಿನ ಕಹಿ ಅನುಭವಿಸಿದೆ. 

ಆರಂಭದಿಂದಲೂ ಬೌಲಿಂಗ್ ವಿಭಾಗದ ದೌರ್ಬಲ್ಯವು ತಂಡವನ್ನು ಕಾಡಿದೆ. ಇದೀಗ ಬ್ಯಾಟಿಂಗ್ ವಿಭಾಗದ ಲೋಪಗಳೂ ಬಹಿರಂಗವಾಗಿವೆ. ವಿರಾಟ್ ಕೊಹ್ಲಿ  (316 ರನ್) ಬಿಟ್ಟರೆ ಉಳಿದವರು ರನ್‌ ಗಳಿಸುತ್ತಿಲ್ಲ. ನಾಯಕ ಫಫ್ ಡುಪ್ಲೆಸಿ (109 ರನ್), ಗ್ಲೆನ್ ಮ್ಯಾಕ್ಸ್‌ವೆಲ್ (32 ರನ್) ಮತ್ತು ಕ್ಯಾಮರಾನ್ ಗ್ರೀನ್ (68 ರನ್) ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಲ್ಲ. ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಕೊಹ್ಲಿ ಶತಕ ಗಳಿಸಿದ್ದರು. ಆದರೆ ಆ ಪಂದ್ಯದಲ್ಲಿಯೂ ಬೌಲರ್‌ಗಳು ವಿಫಲರಾದರು.

ಹೋದ ವರ್ಷ ವಾಂಖೆಡೆ ಕ್ರೀಡಾಂಗಣದಲ್ಲಿ  ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ವಿರಾಟ್ ಶತಕ ಬಾರಿಸಿದ್ದರು. ಅದು ಅವರು ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿದ್ದ 50ನೇ ಶತಕವಾಗಿತ್ತು. ತಮ್ಮ ಅದೃಷ್ಟದ ಅಂಗಳದಲ್ಲಿ ಮತ್ತೆ ಮಿಂಚುವ ನಿರೀಕ್ಷೆಯನ್ನು ಅವರು ಹುಟ್ಟುಹಾಕಿದ್ದಾರೆ. ಅನುಭವಿ ಬೌಲರ್ ಮೊಹಮ್ಮದ್ ಸಿರಾಜ್ ಮತ್ತು ಇತರ ಬೌಲರ್‌ಗಳು ಎದುರಾಳಿ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗುತ್ತಿಲ್ಲ. ಇದರಿಂದಾಗಿ ತಂಡವು ಸೋಲುತ್ತಿದೆ. ಅಲ್ಜರಿ ಜೋಸೆಫ್, ರೀಸ್ ಟಾಪ್ಲಿ ಕೂಡ ಮಂಕಾಗಿದ್ದಾರೆ.

ಇತ್ತ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ತಂಡದ ಸ್ಥಿತಿ ಕೂಡ ಭಿನ್ನವೇನಿಲ್ಲ. ಆರಂಭದ ಮೂರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದ್ದ ತಂಡವು ಕಳೆದ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಗೆದ್ದಿತ್ತು. ಈಗ ಅದೇ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲು ಸಿದ್ಧವಾಗಿದೆ. 

ಕಳೆದ ಪಂದ್ಯದಲ್ಲಿ  ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ನೀಡಿದ್ದರು. ಕೊನೆಯ ಹಂತದಲ್ಲಿ ರೊಮೆರಿಯೊ ಶೆಫರ್ಡ್ 10 ಎಸೆತಗಳಲ್ಲಿ 39 ರನ್‌ ಗಳಿಸಿದ್ದರು. ಟಿಮ್ ಡೇವಿಡ್ ಕೂಡ ಮಿಂಚಿದ್ದರು. ಇದರಿಂದಾಗಿ ಬೃಹತ್ ಮೊತ್ತ ಸೇರಿತ್ತು.  ಇವರನ್ನು ಕಟ್ಟಿಹಾಕುವ ಸವಾಲು  ಬೆಂಗಳೂರು ಬೌಲರ್‌ಗಳ ಮುಂದಿದೆ. 

ಮುಂಬೈ ತಂಡದ ಜಸ್‌ಪ್ರೀತ್ ಬೂಮ್ರಾ, ಗೆರಾಲ್ಡ್‌ ಕೋಝಿ, ಆಕಾಶ್ ಮದ್ವಾಲ್, ಪಿಯೂಷ್ ಚಾವ್ಲಾ ಅವರು ಫಫ್ ಬಳಗಕ್ಕೆ ಕಠಿಣ ಸವಾಲೊಡ್ಡಬಲ್ಲವರಾಗಿದ್ದಾರೆ. ಪಾಯಿಂಟ್ ಪಟ್ಟಿಯಲ್ಲಿ ಕೆಳಹಂತದಲ್ಲಿರುವ ಉಭಯ ತಂಡಗಳಿಗೂ ಮುಂಬರುವ ಪಂದ್ಯಗಳಲ್ಲಿ ಗೆಲ್ಲುವುದು ಮಹತ್ವದ್ದಾಗಲಿದೆ. ಆದ್ದರಿಂದ ತುರುಸಿನ ಪೈಪೋಟಿ ನಡೆಯುವ ಎಲ್ಲ ಲಕ್ಷಣಗಳೂ ಇವೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

Mumbai: Mumbai Indians player Rohit Sharma during a practice session ahead of the IPL match against Rajasthan Royals in Mumbai Sunday March 31 2024. (PTI Photo/Shashank Parade)(PTI03_31_2024_000313A)
Mumbai: Mumbai Indians player Rohit Sharma during a practice session ahead of the IPL match against Rajasthan Royals in Mumbai Sunday March 31 2024. (PTI Photo/Shashank Parade)(PTI03_31_2024_000313A)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT