ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಪಂದ್ಯ: ಲಯಕ್ಕೆ ಮರಳಿದ ಆಸ್ಟ್ರೇಲಿಯಾಕ್ಕೆ ಡಚ್‌ ಸವಾಲು

ದೆಹಲಿಯಲ್ಲಿ ಮುಖಾಮುಖಿ
Published 24 ಅಕ್ಟೋಬರ್ 2023, 11:00 IST
Last Updated 24 ಅಕ್ಟೋಬರ್ 2023, 11:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎಂದಿನ ಬ್ಯಾಟಿಂಗ್‌ ಲಹರಿಗೆ ಮರಳಿರುವ ಆಸ್ಟ್ರೇಲಿಯಾ ತಂಡ ಬುಧವಾರ ನಡೆಯುವ ವಿಶ್ವಕಪ್‌ ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡದ ಎದುರೂ ಅಂಥದ್ದೇ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಆದರೆ ಇದುವರೆಗಿನ ಪಂದ್ಯಗಳನ್ನು ಗಮನಿಸಿದರೆ, ನೆದರ್ಲೆಂಡ್ಸ್‌ ತಂಡ ಸುಲಭಕ್ಕೆ ಬಗ್ಗದ ತಂಡವಲ್ಲವೆಂಬುದನ್ನು ಸಾಬೀತುಪಡಿಸಿದೆ.

ನಿರಾಶಾದಾಯಕ ರೀತಿಯಲ್ಲಿ ವಿಶ್ವಕಪ್‌ ಅಭಿಯಾನ ಆರಂಭಿಸಿದ್ದ ಐದು ಬಾರಿಯ ಚಾಂಪಿಯನ್ನರು ಕಳೆದ ಎರಡು ಪಂದ್ಯಗಳಲ್ಲಿ– ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ– ಅಧಿಕಾರಯುತ ಪ್ರದರ್ಶನ ನೀಡಿದ್ದಾರೆ. ಆದರೆ, ಕೆಲವು ಅನಿರೀಕ್ಷಿತ ಫಲಿತಾಂಶಗಳನ್ನು ಕಂಡ ಈ ಕೂಟದಲ್ಲಿ ಡಚ್‌ ತಂಡವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂಬುದು ಕಾಂಗರೂ ಪಡೆಗೆ ಗೊತ್ತೇ ಇದೆ.

ನೆದರ್ಲೆಂಡ್ಸ್ ತಂಡ ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಪರಾಕ್ರಮ ಮೆರೆದಿತ್ತು. ಸೋಮವಾರ, ಪಾಕ್‌ ತಂಡವನ್ನು ಅಫ್ಗಾನಿಸ್ತಾನ ಮಣಿಸಿದ್ದು, ಆ ತಂಡಕ್ಕೆ ಮತ್ತಷ್ಟು ಪ್ರೇರಣೆ ನೀಡಬಲ್ಲದು.

ಆದರೆ, ಪಾಕಿಸ್ತಾನ ತಂಡದ ಮೇಲೆ ಅಧಿಕಾರಯುತ ಗೆಲುವು ಆಸ್ಟ್ರೇಲಿಯಾಕ್ಕೆ ಬಲ ತುಂಬಿದೆ. ಅಗ್ರ ಕ್ರಮಾಂಕದ ಆಟಗಾರರು ಲಯಕ್ಕೆ ಮರಳಿದ್ದಾರೆ. ಸ್ಪಿನ್ನರ್‌ ಆ್ಯಡಂ ಜಂಪಾ ಅವರೂ ಮೊನಚು ಕಂಡುಕೊಂಡಿದ್ದಾರೆ. ವೇಗಿಗಳಾದ ಜೋಶ್ ಹ್ಯಾಜಲ್‌ವುಡ್‌ ಮತ್ತು ಮಿಚೆಲ್ ಸ್ಟಾರ್ಕ್ ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಹ್ಯಾಜಲ್‌ವುಡ್ ಎರಡು ಬಾರಿ ನಾಲ್ಕು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಆದರೆ ನಾಯಕ ಕಮಿನ್ಸ್‌ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ.

ಎದುರಾಳಿ ಬೌಲಿಂಗ್ ಮೇಲೆ ದಂಡೆತ್ತಿ ಹೋಗಬಲ್ಲ ವಾರ್ನರ್ ಮತ್ತು ಮಿಚೆಲ್‌ ಮಾರ್ಷ್ ಅವರು ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಶುಭಸುದ್ದಿ. ಮಾರ್ಷ್ 108ರ ಸ್ಟ್ರೈಕ್‌ರೇಟ್‌ನಲ್ಲಿ 351 ರನ್ ಪೇರಿಸಿದ್ದಾರೆ. ಟ್ರಾವಿಸ್ ಹೆಡ್‌ ಜಾಗಕ್ಕೆ ಬಂದ ಅವರು ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಸ್ಟೀವ್ ಸ್ಮಿತ್ ಮತ್ತು ಲಾಬುಷೇನ್ ಅವರು ಪರದಾಟ ಮುಂದುವರಿದಿದೆ. ನಾಲ್ಕು ಇನಿಂಗ್ಸ್‌ಗಳಲ್ಲಿ ಸ್ಮಿತ್‌ ಒಮ್ಮೆ ಮಾತ್ರ 30ರ ಗಡಿ ದಾಟಿದ್ದಾರೆ. ಲಾಬುಷೇನ್ ಒಮ್ಮೆಯೂ ಅರ್ಧ ಶತಕ ಗಳಿಸಿಲ್ಲ. ಮ್ಯಾಕ್ಸ್‌ವೆಲ್ ಮತ್ತು ಮಾರ್ಕಸ್ ಸ್ಟೊಯಿನಿಸ್ ತಮ್ಮ ಪಾತ್ರದಲ್ಲಿ ಇದುವರೆಗೆ ಮಿಂಚಿಲ್ಲ. ಆದರೆ ವಿಕೆಟ್‌ ಕೀಪರ್ ಜೋಶ್ ಇಂಗ್ಲಿಷ್‌ ನಿರ್ಣಾಯಕ ಸಂದರ್ಭದಲ್ಲಿ ಎರಡು ಅರ್ಧಶತಕ ಗಳಿಸಿದ್ದಾರೆ.

ಆದರೆ ಆಲ್‌ರೌಂಡರ್‌ಗಳ ಪಡೆ ಹೊಂದಿರುವ ಡಚ್‌ ಪಡೆ, ಯೋಜನೆ ಕಾರ್ಯಗತ ಮಾಡುವಲ್ಲಿ ಹಿಂದೆಬೀಳುತ್ತಿದೆ. ವಿಶೇಷವಾಗಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಯಶಸ್ವಿ ಆಗುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಯಾರಾದರೊಬ್ಬರು ಆಡುತ್ತಿರುವ ಕಾರಣ ತಂಡ ಕುಸಿಯುತ್ತಿಲ್ಲ. ಬೌಲಿಂಗ್ ಮತ್ತು ಕ್ಷೇತ್ರ ರಕ್ಷಣೆ ವಿಭಾಗದಲ್ಲೂ ಅದು ಎಡವುತ್ತಿದೆ. ಬಾಸ್‌ ಡಿ ಲೀಡ್, ಆರ್ಯನ್ ದತ್‌, ವಾನ್‌ ಮೀಕೆರೆನ್ ವಿವಿಧ ಸಂದರ್ಭಗಳಲ್ಲಿ ಯಶಸ್ವಿ ಆದರೂ ಇತರ ಬೌಲರ್‌ಗಳಿಂದ ಬೆಂಬಲ ಸಿಗುತ್ತಿಲ್ಲ.

ನೆದರ್ಲೆಂಡ್ಸ್ –ಆಸ್ಟ್ರೇಲಿಯಾ ವಿಶ್ವಕಪ್‌ನಲ್ಲಿ (2003 ಮತ್ತು 2007) ಮಾತ್ರ ಮುಖಾಮುಖಿ ಆಗಿದ್ದು ಎರಡೂ ಬಾರಿ ಆಸ್ಟ್ರೇಲಿಯಾ ಜಯಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT