ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಕದಿನ ರ‍್ಯಾಂಕಿಂಗ್‌: ರೋಹಿತ್‌ ಶರ್ಮಾಗೆ ಬಡ್ತಿ

Published 14 ಆಗಸ್ಟ್ 2024, 16:17 IST
Last Updated 14 ಆಗಸ್ಟ್ 2024, 16:17 IST
ಅಕ್ಷರ ಗಾತ್ರ

ದುಬೈ: ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಮಾಡಿದ್ದ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಮಂಗಳವಾರ ಪ್ರಕಟಗೊಂಡ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಬಡ್ತಿಯೊಂದಿಗೆ ಎರಡನೇ ಸ್ಥಾನಕ್ಕೆ ಏರಿದ್ದಾರೆ.

ಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಭಾರತ ತಂಡವು 0-2ರಿಂದ ಕಳೆದುಕೊಂಡಿತ್ತು. ಆದರೆ, ರೋಹಿತ್ 52.33ರ ಸರಾಸರಿಯಲ್ಲಿ ಎರಡು ಅರ್ಧಶತಕ ಒಳಗೊಂಡಂತೆ 157 ರನ್ ಗಳಿಸಿದ್ದರು. ಸರಣಿಯ ಮೊದಲ ಪಂದ್ಯ ಟೈ ಆಗಿತ್ತು.

ಎರಡನೇ ಸ್ಥಾನದಲ್ಲಿದ್ದ ಶುಭಮನ್‌ ಗಿಲ್‌ ಒಂದು ಸ್ಥಾನ ಕಳೆದುಕೊಂಡಿದ್ದಾರೆ. ಭಾರತದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿಸಿದ್ದಾರೆ. ಪಾಕಿಸ್ತಾನದ ಬಾಬರ್‌ ಅಜಂ 824 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ರೋಹಿತ್‌ 765 ಅಂಕ ಗಳಿಸಿದ್ದಾರೆ. ಶ್ರೇಯಸ್‌ ಅಯ್ಯರ್‌ ಮತ್ತು ಕೆ.ಎನ್‌. ರಾಹುಲ್‌ ಅವರು ಕ್ರಮವಾಗಿ 16ನೇ ಮತ್ತು 21ನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಭಾರತದ ಎಡಗೈ ಸ್ಪಿನ್ನರ್‌ ಕುಲದೀಪ್‌ ಯಾದವ್‌ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್‌ ಮಹಾರಾಜ್‌, ಆಸ್ಟ್ರೇಲಿಯಾದ ಜೋಷ್ ಹ್ಯಾಜಲ್‌ವುಡ್ ಮತ್ತು ಆ್ಯಡಂ ಜಂಪಾ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ.

ಜಸ್‌ಪ್ರೀತ್‌ ಮೂಮ್ರಾ ಎಂಟನೇ ಸ್ಥಾನದಲ್ಲಿದ್ದರೆ, ಐದು ಸ್ಥಾನಗಳನ್ನು ಕಳೆದುಕೊಂಡಿರುವ ಮೊಹಮ್ಮದ್ ಸಿರಾಜ್ ಅವರು ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಅವರೊಂದಿಗೆ ಜಂಟಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಲಂಕಾ ವಿರುದ್ಧದ ಸರಣಿಯಲ್ಲಿ ಭಾರತದ ಪರ (3 ಪಂದ್ಯ, ಐದು ವಿಕೆಟ್‌) ಉತ್ತಮ ಪ್ರದರ್ಶನ ನೀಡಿದ ವಾಷಿಂಗ್ಟನ್‌ ಸುಂದರ್ ಅವರು 10 ಸ್ಥಾನಗಳ ಬಡ್ತಿಯೊಂದಿಗೆ 87ನೇ ಸ್ಥಾನಕ್ಕೆ ಏರಿದ್ದಾರೆ.

ಹಿರಿಯ ವೇಗಿ ಮೊಹಮ್ಮದ್ ಶಮಿ 12ನೇ ಸ್ಥಾನದಲ್ಲಿದ್ದಾರೆ. 33 ವರ್ಷ ವಯಸ್ಸಿನ ಶಮಿ ಪಾದದ ಶಸ್ತ್ರಚಿಕಿತ್ಸೆಯ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪುನರ್ವಸತಿ ಶಿಬಿರದಲ್ಲಿದ್ದಾರೆ. ಮುಂದಿನ ತಿಂಗಳು ನಡೆಯುವ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮರಳುವ ನಿರೀಕ್ಷೆಯಿದೆ.

ಆಲ್‌ರೌಂಡ್‌ ವಿಭಾಗದಲ್ಲಿ ರವೀಂದ್ರ ಜಡೇಜಾ ಮತ್ತು ಹಾರ್ದಿಕ್‌ ಪಾಂಡ್ಯ ಕ್ರಮವಾಗಿ 16 ಮತ್ತು 26ನೇ ಸ್ಥಾನದಲ್ಲಿದ್ದಾರೆ.

ಭಾರತ ತಂಡವು 118 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ (116) ಮತ್ತು ದಕ್ಷಿಣ ಆಫ್ರಿಕಾ (112) ನಂತರದ ಸ್ಥಾನದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT