ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವುದೇ ಇಂಗ್ಲೆಂಡ್ ಆಟಗಾರರ ಗೈರು?

ರಾಜಸ್ಥಾನ್ ರಾಯಲ್ಸ್‌ಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸವಾಲು
Last Updated 26 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಇಂಗ್ಲೆಂಡ್‌ನ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಶನಿವಾರದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಸನ್‌ರೈಸರ್ಸ್‌ಗಿಂತ ರಾಜಸ್ಥಾನ್ ರಾಯಲ್ಸ್‌ಗೆ ವಿದೇಶಿ ಆಟಗಾರರ ಅನುಪಸ್ಥಿತಿಯ ಸಮಸ್ಯೆ ತೀವ್ರವಾಗಿ ಕಾಡಲಿದೆ. ಇಂಗ್ಲೆಂಡ್‌ನ ವಿಶ್ವಕಪ್‌ ತಂಡದಲ್ಲಿರುವ ರಾಯಲ್ಸ್‌ನ ಬೆನ್ ಸ್ಟೋಕ್ಸ್‌, ಜೋಸ್ ಬಟ್ಲರ್‌ ಮತ್ತು ಜೊಫ್ರಾ ಆರ್ಚರ್‌ ತವರಿಗೆ ಮರಳಿದ್ದಾರೆ. ಸನ್‌ರೈಸರ್ಸ್‌ ಜಾನಿ ಬೇಸ್ಟೊ ಅವರನ್ನು ಕಳೆದುಕೊಂಡಿದೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರೊಂದಿಗೆ ಅಮೋಘ ಜೊತೆಯಾಟಗಳನ್ನು ನೀಡಿರುವ ಬೇಸ್ಟೊ ವಾಪಸಾಗಿರುವುದು ಸನ್‌ರೈಸರ್ಸ್‌ ಪಾಲಿಗೆ ಭಾರಿ ನಷ್ಟವಾಗಲಿದೆ.

ಮುಂದಿನ ವಾರ ಡೇವಿಡ್‌ ವಾರ್ನರ್‌ ಮತ್ತು ರಾಯಲ್ಸ್‌ ನಾಯಕ ಸ್ಟೀವ್ ಸ್ಮಿತ್ ಕೂಡ ತವರಿಗೆ ಮರಳಲಿದ್ದಾರೆ. ಆಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಆದ್ದರಿಂದ ಶನಿವಾರದ ಪಂದ್ಯದಲ್ಲಿ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಮೇಲೇರಲು ಉಭಯ ತಂಡಗಳು ಪ್ರಯತ್ನಿಸಲಿವೆ.

ಸನ್‌ರೈಸರ್ಸ್‌ ಈ ವರೆಗೆ ಆಡಿರುವ 10 ಪಂದ್ಯಗಳ ಪೈಕಿ ಐದನ್ನು ಗೆದ್ದಿದ್ದು ಪಾಯಿಂಟ್ ಪಟ್ಟಿಯ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಿದೆ. ಆದರೆ ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ನಾಲ್ಕನ್ನಷ್ಟೇ ಗೆದ್ದು ಏಳನೇ ಸ್ಥಾನಕ್ಕೆ ಕುಸಿದಿದೆ. ಆದರೂ ಪ್ಲೇ ಆಫ್‌ ಹಂತಕ್ಕೇರುವ ಭರವಸೆಯಲ್ಲಿದೆ. ಆದ್ದರಿಂದ ಶನಿವಾರದ ಪಂದ್ಯದಲ್ಲಿ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ.

ಅಜಿಂಕ್ಯ ರಹಾನೆ ಭರವಸೆ: ಪ್ರಮುಖರ ಅನುಪಸ್ಥಿತಿಯ ನಡುವೆಯೂ ರಾಯಲ್ಸ್ ತಂಡ ಸ್ಟೀವ್ ಸ್ಮಿತ್‌, ಅಜಿಂಕ್ಯ ರಹಾನೆ ಮತ್ತು ರಿಯಾನ್ ಪರಾಗ್ ಅವರ ಮೇಲೆ ಭರವಸೆ ಇರಿಸಿಕೊಂಡು ಕಣಕ್ಕೆ ಇಳಿಯಲಿದೆ. ಅಸ್ಸಾಂನ 17 ವರ್ಷದ ರಿಯಾನ್‌ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ಎದುರಿನ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ನಲ್ಲೂ ರಾಹುಲ್ ತ್ರಿಪಾಠಿ ಬೌಲಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಿದ್ದಾರೆ. ಆ್ಯಶ್ಟನ್ ಟರ್ನರ್‌ ಮತ್ತು ಲಿಯಾಮ್‌ ಲಿವಿಂಗ್‌ಸ್ಟೋನ್ ಇನ್ನೂ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಒಶಾನೆ ಥಾಮಸ್ ಮತ್ತು ಧವಳ್ ಕುಲಕರ್ಣಿ ತಂಡದ ಬೌಲಿಂಗ್ ವಿಭಾಗಕ್ಕೆ ಬಲ ತುಂಬುತ್ತಿದ್ದಾರೆ.

ಡೇವಿಡ್ ವಾರ್ನರ್‌ ತಮ್ಮ ಕೊನೆಯ ಪಂದ್ಯದಲ್ಲಿ ಮತ್ತೊಮ್ಮೆ ಮಿಂಚು ಹರಿಸಲು ಸಜ್ಜಾಗಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರ ಬದಲಿಗೆ ಮಾರ್ಟಿನ್ ಗಪ್ಟಿಲ್ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT