ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲ್ಲರ್ ಬಲದಲ್ಲಿ ಥ್ರಿಲ್ಲರ್ ಪಂದ್ಯ ಗೆದ್ದ ಟೈಟನ್ಸ್‌

Last Updated 17 ಏಪ್ರಿಲ್ 2022, 18:31 IST
ಅಕ್ಷರ ಗಾತ್ರ

ಪುಣೆ: ಭರ್ಜರಿ ಸಿಕ್ಸರ್‌ಗಳ ಮೂಲಕ ಮಿಂಚಿದ ಡೇವಿಡ್ ಮಿಲ್ಲರ್ ಅವರು ಗುಜರಾತ್ ಟೈಟನ್ಸ್ ತಂಡಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ರೋಚಕ ಜಯ ಗಳಿಸಿಕೊಟ್ಟರು. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗುಜರಾತ್ 3 ವಿಕೆಟ್‌ಗಳಿಂದ ಮಣಿಸಿತು.

170 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಗುಜರಾತ್19.5 ಓವರ್‌ಗಳಲ್ಲಿ 7ಕ್ಕೆ 170 ರನ್ ಗಳಿಸಿತು. ತಂಡ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆರನೇ ಓವರ್‌ನಲ್ಲಿ 16ಕ್ಕೆ3 ಎಂಬ ಸ್ಥಿತಿಗೆ ತಲುಪಿತ್ತು. 87 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತ್ತು.

ಈ ಸಂದರ್ಭದಲ್ಲಿ ಮಿಲ್ಲರ್ (ಔಟಾಗದೆ 94; 51 ಎಸೆತ, 8 ಬೌಂಡರಿ, 6 ಸಿಕ್ಸರ್) ಮತ್ತು ಹಂಗಾಮಿ ನಾಯಕ ರಶೀದ್ ಖಾನ್ (40; 21 ಎ, 2 ಬೌಂ, 3 ಸಿ) ಸ್ಫೋಟಕ 70 ರನ್‌ಗಳನ್ನು ಸೇರಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ರಶೀದ್ ಔಟಾದ ನಂತರ ಕೊನೆಯ ಓವರ್‌ಗಳಲ್ಲಿ ಒತ್ತಡ ಮೆಟ್ಟಿನಿಂತ ಮಿಲ್ಲರ್ ಏಕಾಂಗಿಯಾಗಿ ತಂಡವನ್ನು ದಡ ಸೇರಿಸಿದರು.

ಋತುರಾಜ್, ಅಂಬಟಿ ರಾಯುಡು ಮಿಂಚಿನಾಟ

ಆರಂಭಿಕ ಬ್ಯಾಟರ್ ಋತುರಾಜ್ ಗಾಯಕವಾಡ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ವೈಭವ ಪ್ರದರ್ಶಿಸಿದರು. ಅವರಿಗೆ ಮಧ್ಯಮ ಕ್ರಮಾಂಕದ ಅಂಬಟಿ ರಾಯುಡು ಉತ್ತಮ ಜೊತೆ ನೀಡಿದರು. ಇವರಿಬ್ಬರ ಅಮೋಘ ಆಟದ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್‌ಗಳಿಗೆ 169 ರನ್ ಕಲೆ ಹಾಕಿತು.

ತೊಡೆಯಲ್ಲಿ ನೋವು ಕಾಣಿಸಿಕೊಂಡದ್ದರಿಂದ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಕಣಕ್ಕೆ ಇಳಿಯಲಿಲ್ಲ. ಹೀಗಾಗಿ ಗುಜರಾತ್ ತಂಡವನ್ನು ರಶೀದ್ ಖಾನ್ ಮುನ್ನಡೆಸಿದರು. ಟಾಸ್ ಗೆದ್ದ ಅವರು ರವೀಂದ್ರ ಜಡೇಜ ನೇತೃತ್ವದ ಚೆನ್ನೈ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.

ಹಿಂದಿನ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರಾಬಿನ್ ಉತ್ತಪ್ಪ ಮೂರನೇ ಓವರ್‌ನಲ್ಲಿ ಮೊಹಮ್ಮದ್ ಶಮಿ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದು ವಾಪಸಾದರು. ಆರನೇ ಓವರ್‌ನಲ್ಲಿ ಮೋಯಿನ್ ಅಲಿ ಕೂಡ ಔಟಾದರು. ಆಗ ಜೊತೆಗೂಡಿದ ಋತುರಾಜ್ (73; 48 ಎಸೆತ, 5 ಬೌಂಡರಿ, 5 ಸಿಕ್ಸರ್) ಮತ್ತು ಅಂಬಟಿ ರಾಯುಡು (46; 31 ಎ, 4 ಬೌಂ, 2 ಸಿ) ದಿಟ್ಟ ಆಟವಾಡಿದರು. ಮೂರನೇ ವಿಕೆಟ್‌ಗೆ ಇವರು 92 ರನ್ ಸೇರಿಸಿದರು.

ಅರ್ಧಶತಕದ ಅಂಚಿನಲ್ಲಿ ಅಂಬಟಿ ರಾಯುಡು ಎಡವಿದರು. ಅಲ್ಜರಿ ಜೋಸೆಫ್ ಹಾಕಿದ 15ನೇ ಓವರ್‌ನ ಮೂರನೇ ಎಸೆತ ಆಫ್‌ ಸ್ಟಂಪಿನಿಂದ ಆಚೆ ಸಾಗುತ್ತಿತ್ತು. ಅದನ್ನು ಕೆಣಕಿದ ರಾಯುಡು ಅವರಿಗೆ ಹೆಚ್ಚು ಬಲ ಹಾಕಲು ಸಾಧ್ಯವಾಗಲಿಲ್ಲ. ಚೆಂಡು ಸ್ವೀಪರ್ ಕವರ್‌ನಲ್ಲಿದ್ದ ವಿಜಯ್ ಶಂಕರ್ ಸುಲಭ ಕ್ಯಾಚ್ ಪಡೆದರು.

ಋತುರಾಜ್ ಬ್ಯಾಟಿಂಗ್ ವೈಭವ ಮುಂದುವರಿಸಿದರು. 12ನೇ ಓವರ್‌ನಲ್ಲೇ ಅರ್ಧಶತಕ ಪೂರೈಸಿದ್ದ ಅವರು 17ನೇ ಓವರ್‌ನಲ್ಲಿ ಯಶ್ ದಯಾಳ್‌ಗೆ ವಿಕೆಟ್ ಒಪ್ಪಿಸಿದರು. ಫುಲ್ ಟಾಸ್ ಎಸೆತವನ್ನು ಮೊಣಕಾಲೂರಿ ಹೊಡೆದ ಚೆಂಡು ಬ್ಯಾಕ್‌ವರ್ಡ್‌ ಸ್ಕ್ವೇರ್ ಲೆಗ್‌ನಲ್ಲಿದ್ದ ಅಭಿನವ್ ಮನೋಹರ್‌ಗೆ ಕ್ಯಾಚ್ ನೀಡಿದರು.

ನಂತರ ಶಿವಂ ದುಬೆ ಮತ್ತು ರವೀಂದ್ರ ಜಡೇಜ ಮಿಂಚಿದರು. 20ನೇ ಓವರ್‌ನ ಮೊದಲ ಎಸೆತವನ್ನು ದುಬೆ ಬೌಂಡರಿಗೆ ಅಟ್ಟಿದರು. 4 ಮತ್ತು 5ನೇ ಎಸೆತಗಳಲ್ಲಿ ಜಡೇಜ ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ ದುಬೆ ರನ್‌ ಔಟಾದರು.

ಸಂಕ್ಷಿಪ್ತ ಸ್ಕೋರು: 20 ಓವರ್‌ಗಳಲ್ಲಿ 5ಕ್ಕೆ 169 (ಋತುರಾಜ್ ಗಾಯಕವಾಡ್ 73, ಅಂಬಟಿ ರಾಯುಡು 46, ಶಿವಂ ದುಬೆ 19, ರವೀಂದ್ರ ಜಡೇಜ ಔಟಾಗದೆ 22; ಮೊಹಮ್ಮದ್ ಶಮಿ 20ಕ್ಕೆ1, ಯಶ್‌ ದಯಾಳ್ 40ಕ್ಕೆ1, ಅಲ್ಜರಿ ಜೋಸೆಫ್ 34ಕ್ಕೆ2);ಗುಜರಾತ್ ಟೈಟನ್ಸ್‌: 19.5 ಓವರ್‌ಗಳಲ್ಲಿ 7ಕ್ಕೆ 170 (ಡೇವಿಡ್ ಮಿಲ್ಲರ್ ಔಟಾಗದೆ 94, ರಶೀದ್ ಖಾನ್ 40; ಮುಕೇಶ್ ಚೌಧರಿ 18ಕ್ಕೆ1,
ಮಹೀಶ್ ತೀಕ್ಷಣ 24ಕ್ಕೆ2, ರವೀಂದ್ರ ಜಡೇಜ 25ಕ್ಕೆ1, ಡ್ವೇನ್ ಬ್ರಾವೊ 23ಕ್ಕೆ3). ಫಲಿತಾಂಶ: ಗುಜರಾತ್ ಟೈಟನ್ಸ್‌ಗೆ 7 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT