ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಸೈಫ್‌ ಅರ್ಧಶತಕ; ರೈಲ್ವೇಸ್‌ ಪ್ರತಿಹೋರಾಟ

ಕರ್ನಾಟಕಕ್ಕೆ ಅಲ್ಪ ಮುನ್ನಡೆ
Published 3 ಫೆಬ್ರುವರಿ 2024, 15:14 IST
Last Updated 3 ಫೆಬ್ರುವರಿ 2024, 15:14 IST
ಅಕ್ಷರ ಗಾತ್ರ

ಸೂರತ್‌ (ಪಿಟಿಐ): ಬ್ಯಾಟರ್ ಮೊಹಮ್ಮದ್ ಸೈಫ್ ಅವರ ಅಜೇಯ ಅರ್ಧ ಶತಕದ (51*, 107ಎ, 4x4, 6x1) ನೆರವಿನಿಂದ ರೈಲ್ವೇಸ್ ತಂಡ ರಣಜಿ ಟ್ರೋಫಿ ‘ಸಿ’ ಗುಂಪಿನ ಪಂದ್ಯದಲ್ಲಿ ಎರಡನೇ ದಿನ ಪ್ರತಿಹೋರಾಟ ತೋರಿದ್ದು ಪಂದ್ಯ ಕುತೂಹಲಕರವಾಗಿದೆ. ಇದಕ್ಕೆ ಮೊದಲು, ಕರ್ನಾಟಕ 19 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿತ್ತು.

ಶನಿವಾರ ದಿನದಾಟ ಮುಗಿದಾಗ ರೈಲ್ವೇಸ್ ಎರಡನೇ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 209 ರನ್ ಗಳಿಸಿದೆ. ಒಟ್ಟಾರೆ 190 ರನ್‌ಗಳ ಮುನ್ನಡೆ. ಆದರೆ ಉತ್ತಮ ಲಯದಲ್ಲಿರುವ ನಾಯಕ ಮಯಂಕ್ ಅಗರವಾಲ್ ಈ ಪಂದ್ಯದಲ್ಲಿ ಆಡದಿರುವ ಕಾರಣ, ಅಲ್ಪ ಸ್ಕೋರುಗಳ ಪಂದ್ಯದಲ್ಲಿ ಈ ಮೊತ್ತ ಕರ್ನಾಟಕಕ್ಕೆ ಸವಾಲಾಗುವ ಸಾಧ್ಯತೆಯಿದೆ.

ರೈಲ್ವೇಸ್‌ನ 155 ರನ್‌ಗಳಿಗೆ ಉತ್ತರವಾಗಿ ಶುಕ್ರವಾರ 6 ವಿಕೆಟ್‌ಗೆ 90 ರನ್‌ ಗಳಿಸಿದ್ದ ಕರ್ನಾಟಕ ಕೆಳಕ್ರಮಾಂಕದ ಆಟಗಾರರ ಪ್ರತಿರೋಧದಿಂದ ಅಲ್ಪ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು. ಒಂದು ಹಂತದಲ್ಲಿ 137 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡಿದ್ದ ಕರ್ನಾಟಕ ತಂಡಕ್ಕೆ ವಿಕೆಟ್‌ ಕೀಪರ್ ಶರತ್ ಶ್ರೀನಿವಾಸ್ (24, 44ಎ, 4x3) ಮತ್ತು ವೈಶಾಖ ವಿಜಯಕುಮಾರ್ (24, 26ಎ, 4x3) 30 ರನ್ ಸೇರಿಸಿ ನೆರವಿಗೆ ಬಂದರು.

ಎಡಗೈ ಸ್ಪಿನ್ನರ್‌ಗಳಾದ ಆಕಾಶ್ ಪಾಂಡೆ (63ಕ್ಕೆ5) ಮತ್ತು ಅಯಾನ್ ಚೌಧರಿ (39ಕ್ಕೆ4) ಅವರು ರೈಲ್ವೇಸ್ ಕಡೆ ಯಶಸ್ವಿ ಬೌಲರ್‌ಗಳೆನಿಸಿದರು.

ಆದರೆ ಕರ್ನಾಟಕ ಬೌಲರ್‌ಗಳ ಪಡೆ, ರೈಲ್ವೇಸ್‌ ತಂಡಕ್ಕೆ ತಕ್ಷಣ ತಿರುಗೇಟು ನೀಡಿತು. 13 ರನ್‌ಗಳಾಗುಷ್ಟರಲ್ಲಿ ತಂಡ ಆರಂಭ ಆಟಗಾರರನ್ನು ಕಳೆದುಕೊಂಡಿತ್ತು. ಆದರೆ ಗಾಯಾಳು ಆಗುವ ಮೊದಲು ಸೈಫ್‌ ಎರಡು ಉಪಯುಕ್ತ ಜೊತೆಯಾಟಗಳಿಂದ ತಂಡವನ್ನು ಕುಸಿತದಿಂದ ಕಾಪಾಡಿದರು.

ನಾಯಕ ಪ್ರಥಮ್ ಸಿಂಗ್ (33, 4x4, 6x1) ಮತ್ತು ಸೈಫ್‌ ನಡುವೆ ಮೂರನೇ ವಿಕೆಟ್‌ಗೆ ಬಂದ 69 ರನ್‌ಗಳಿಂದ ರೈಲ್ವೇಸ್‌ ಚೇತರಿಸಿಕೊಂಡಿತು. ಈ ಹಂತದಲ್ಲಿ ವೈಶಾಖ ಎದುರಾಳಿ ನಾಯಕನ ವಿಕೆಟ್‌ ಪಡೆದು ಜೊತೆಯಾಟ ಮುರಿದರು. ಆದರೆ ಸೈಫ್ ಮತ್ತು ಸಹಾಬ್ ಯುವರಾಜ್ ಸಿಂಗ್ (28) ನಾಲ್ಕನೇ ವಿಕೆಟ್‌ಗೆ 44 ರನ್‌ ಸೇರಿಸಿ ಹೋರಾಟ ಮುಂದುವರಿಸಿದರು. ವಿಕೆಟ್‌ ಕೀಪರ್ ಸೂರಜ್ ಅಹುಜಾ 68 ಎಸೆತಗಳಲ್ಲಿ 48 ರನ್ ಹೊಡೆದು ತಂಡದ ಸ್ಥಿತಿ ಉತ್ತಮಗೊಳಿಸಲು ಯತ್ನಿಸಿದರು. ಅಹುಜಾ ಕೂಡ ವೈಶಾಖ ಅವರ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಕರ್ನಾಟಕ ಕಡೆ ವೈಶಾಖ ವಿಜಯಕುಮಾರ್ 45 ರನ್ನಿಗೆ 3 ವಿಕೆಟ್ ಪಡೆದು ಯಶಸ್ವಿ ಎನಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ರೈಲ್ವೇಸ್‌: 155, ಕರ್ನಾಟಕ: 50.5 ಓವರುಗಳಲ್ಲಿ 174 (ಶರತ್‌ ಶ್ರೀನಿವಾಸ್ 24, ವೈಶಾಖ ವಿಜಯಕುಮರ್ 24; ಅಕ್ಷಯ್ ಪಾಂಡೆ 63ಕ್ಕೆ5, ಅಯಾನ್ ಚೌಧರಿ 39ಕ್ಕೆ4); ಎರಡನೇ ಇನಿಂಗ್ಸ್‌: ರೈಲ್ವೇಸ್‌: 62 ಓವರುಗಳಲ್ಲಿ 8 ವಿಕೆಟ್‌ಗೆ 209 (ಪ್ರಥಮ್ ಸಿಂಗ್‌ 33, ಮೊಹಮ್ಮದ್ ಸೈಫ್ ಬ್ಯಾಟಿಂಗ್ 51, ಸೂರಜ್ ಅಹುಜಾ 48, ಸಹಾಬ್ ಯುವರಾಜ್ ಸಿಂಗ್ 28; ವೈಶಾಖ ವಿಜಯಕುಮಾರ್ 45ಕ್ಕೆ3, ವಿದ್ವತ್ ಕಾವೇರಪ್ಪ 35ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT