ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಗ್ಗಜರ ವಿದಾಯಕ್ಕೊಂದು ಇರಲಿ ಗೌರವದ ಸೆಲ್ಯೂಟ್

Last Updated 19 ಏಪ್ರಿಲ್ 2020, 19:33 IST
ಅಕ್ಷರ ಗಾತ್ರ
ADVERTISEMENT
""

2008ರ ಆ ದಿನವನ್ನು ನಾಗಪುರದ ಜನ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಅಲ್ಲಿಯ ವಿದರ್ಭ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊಟ್ಟಮೊದಲ ಟಸ್ಟ್ ಪಂದ್ಯವದು. ಮಹೇಂದ್ರಸಿಂಗ್ ಧೋನಿ ನಾಯಕತ್ವ ವಹಿಸಿದ ಮೊದಲ ಟೆಸ್ಟ್ ಕೂಡ ಹೌದು.

ಆದರೆ ಇವೆರೆಡಕ್ಕಿಂತ ಮಹತ್ವದ ಸಂಗತಿ ಇನ್ನೊಂದಿದೆ. ಆಸ್ಟ್ರೇಲಿಯಾ ಎದುರಿನ ಆ ಪಂದ್ಯದಲ್ಲಿ ಭಾರತದ ಯಶಸ್ವಿ ನಾಯಕರಲ್ಲಿ ಒಬ್ಬರದ ಸೌರವ್ ಗಂಗೂಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಪಂದ್ಯದ ಕೊನೆಯ ದಿನವು ಭಾರತವು ಜಯದ ಹಾದಿಯಲ್ಲಿದ್ದಾಗ ಧೋನಿ ತಮ್ಮ ನಾಯಕತ್ವದ ಹೊಣೆಯನ್ನು ಗಂಗೂಲಿಗೆ ನೀಡಿದ್ದರು. ಅ ಮೂಲಕ ಗೌರವದ ವಿದಾಯ ಹೇಳಿದ್ದರು. ಕೆಲವು ಓವರ್‌ಗಳವರೆಗೆ ಗಂಗೂಲಿ ನಾಯಕತ್ವ ನೋಡುವ ಅವಕಾಶ ಕ್ರಿಕೆಟ್‌ಪ್ರಿಯರಿಗೆ ಲಭಿಸಿತ್ತು. ಆ ಸರಣಿಯಲ್ಲಿ ಭಾರತವು 2–0ಯಿಂದ ಗೆದ್ದು ಬಾರ್ಡರ್‌–ಗಾವಸ್ಕರ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.

ಅದೇ ಸರಣಿಯ ಮೂರನೇ ಪಂದ್ಯದಲ್ಲಿ ‘ಜಂಬೋ’ ಅನಿಲ್ ಕುಂಬ್ಳೆ ವಿದಾಯ ಹೇಳಿದ್ದರು. ಅದರಿಂದಾಗಿ ಉಪನಾಯಕ ಧೋನಿ ಬಡ್ತಿ ಪಡೆದಿದ್ದರು. ಆ ಅವಿಸ್ಮರಣೀಯ ಪಂದ್ಯಕ್ಕೆ 12 ವರ್ಷಗಳಾಗಿವೆ. ಕಾಲಚಕ್ರ ಒಂದು ಸುತ್ತು ಸುತ್ತಿದೆ. ಈಗ ಧೋನಿ ಕ್ರಿಕೆಟ್‌ ಕ್ಷೇತ್ರಕ್ಕೆ ವಿದಾಯ ಹೇಳುವ ಅಂಚಿನಲ್ಲಿ ಇದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿ ಗಂಗೂಲಿ ಇದ್ದಾರೆ.

ತಾವು ಆಡುವ ಸಮಯದಲ್ಲಿ ಹಲವಾರು ದಾಖಲೆಗಳ ಮಾಡಿ ಮೆರೆದಿದ್ದ ‘ಬಂಗಾಳದ ದಾದಾ’ ಈಗ ಧೋನಿ ನಿವೃತ್ತಿ ವಿಷಯವನ್ನು ಯಾವ ರೀತಿ ನಿಭಾಯಿಸುತ್ತಾರೆಂದು ಇಡೀ ಕ್ರಿಕೆಟ್‌ ಜಗತ್ತು ಕಾತುರದಿಂದ ನೋಡುತ್ತಿದೆ. ಏಕೆಂದರೆ, ಭಾರತ ಕ್ರಿಕೆಟ್‌ ಚರಿತ್ರೆಯ ಪುಸ್ತಕವನ್ನು ತಿರುವಿಹಾಕಿದರೆ ಹಲವು ದಿಗ್ಗಜರಿಗೆ ಕೈಕುಲುಕಿ ಬೀಳ್ಕೊಡದಿರುವ ಘಟನೆಗಳು ಹತ್ತಾರು ಇವೆ. ಇದರಲ್ಲಿ ಬಿಸಿಸಿಐ ಮತ್ತು ಆಯಾ ಆಟಗಾರರ ತವರು ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ಲೋಪಗಳೂ ಇವೆ.

2013ರಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಅಭೂತಪೂರ್ವ ವಿದಾಯ ಹೇಳಲಾಗಿತ್ತು. ಅವರದ್ದೇ ತವರಿನಂಗಳ ವಾಂಖೆಡೆ ಕ್ರೀಡಾಂಗಣದಲ್ಲಿ 200ನೇ ಪಂದ್ಯ ಆಡಿದ್ದ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು. ಅದರ ನಂತರ ಕ್ರಿಕೆಟ್‌ನಿಂದ ದೂರ ಸರಿದ ದಿಗ್ಗಜರಿಗೆ ವಿದಾಯದ ಪಂದ್ಯ ಆಡಿಸುವ ಗೋಜಿಗೆ ಬಿಸಿಸಿಐ ಹೋಗಿಲ್ಲ.

2011ರ ಏಕದಿನ ಕ್ರಿಕೆಟ್ ವಿಶ್ವಕಪ್‌ ಗೆಲುವಿನಲ್ಲಿ ಪರಾಕ್ರಮ ಮೆರೆದಿದ್ದ ಯುವರಾಜ್ ಸಿಂಗ್, ಗೌತಮ್ ಗಂಭೀರ್ ಮತ್ತು ಎಡಗೈ ಮಧ್ಯಮವೇಗಿ ಜಹೀರ್ ಖಾನ್ ಅವರು ಭಾರತ ತಂಡದಿಂದ ಹೊರಗಿದ್ದು ಬಹಳ ವರ್ಷ ಕಾದರು. ನಂತರ ತಾವಾಗಿಯೇ ಬೈ ಬೈ ಹೇಳಿದರು. ಆ ಸಾಲಿನಲ್ಲಿ ಮೊಹಮ್ಮದ್ ಕೈಫ್ ಅವರನ್ನು ಮರೆಯುವುದಾದರೂ ಹೇಗೆ? ‌‌

ನಾಟ್‌ವೆಸ್ಟ್ ಟ್ರೋಫಿ ಜಯದಲ್ಲಿ ಅವರು ಮತ್ತು ಯುವಿ ವೀರಾವೇಷದ ಜೊತೆಯಾಟ ಮರೆಯಲು ಸಾಧ್ಯವಿಲ್ಲ. ಪಾಕಿಸ್ತಾನದ ವಿರುದ್ಧ ಅದರದ್ದೇ ನೆಲದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಇರ್ಫಾನ್ ಪಠಾಣ್ ಅವರ ಅಮೋಘ ಆಟವೂ ಸದಾಕಾಲದ ನೆನಕೆಯಾಗಿಯೇ ಉಳಿಯುತ್ತದೆ. ಸಚಿನ್ ತೆಂಡೂಲ್ಕರ್ ವಿದಾಯದ ಪಂದ್ಯದಲ್ಲಿ ಅಮೋಘ ಬೌಲಿಂಗ್ ಮಾಡಿದ್ದ ಪ್ರಗ್ಯಾನ್ ಓಜಾ ಕೂಡ ಈಚೆಗೆ ನಿವೃತ್ತಿ ಘೋಷಿಸಿದರು. ಟೆಸ್ಟ್‌ನಲ್ಲಿ ಎರಡು ತ್ರಿಶತಕ, ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕದ ಸಾಧನೆ ಮಾಡಿದ ವೀರೇಂದ್ರ ಸೆಹ್ವಾಗ್ ಅವರಿಗೂ ಇದೇ ರೀತಿಯಾಯಿತು. ಆದರೆ, ಕೆಲಕಾಲದ ನಂತರ ಟೆಸ್ಟ್ ಪಂದ್ಯವೊಂದರಲ್ಲಿ ಅವರನ್ನುದೆಹಲಿಯ ಕ್ರಿಕೆಟ್ ಸಂಸ್ಥೆಯು ಕರೆದು ಸನ್ಮಾನಿಸಿತು

ಬಿಸಿಸಿಐ ಇವತ್ತು ಶ್ರೀಮಂತ ಕ್ರೀಡಾಸಂಸ್ಥೆಯಾಗಿ ಬೆಳೆಯಲು ಇಂತಹ ದಿಗ್ಗಜ ಆಟಗಾರರ ಶ್ರಮವಿದೆ. ಅವರ ತಾರಾ ವರ್ಚಸ್ಸಿನಿಂದಾಗಿ ಕ್ರಿಕೆಟ್ ಬೆಳೆಯುತ್ತದೆ. ಗಲ್ಲಿಗಲ್ಲಿಗಳಲ್ಲಿ ಅವರನ್ನು ಅನುಕರಿಸುತ್ತ ಕನಸು ಕಂಗಳ ಹುಡುಗರು ಬ್ಯಾಟ್, ಬಾಲ್ ಹಿಡಿದು ಮೈದಾನಕ್ಕಿಳಿಯುತ್ತಾರೆ. ಆದರೆ, ಅವರ ವೃತ್ತಿಜೀವನದ ಕೊನೆಗೆ ಕನಿಷ್ಠ ಬೀಳ್ಕೊಡುಗೆಯ ಪಂದ್ಯವನ್ನು ಆಡಿಸುವ ಸೌಜನ್ಯವನ್ನೂ ತೋರದಿದ್ದರೆ ಹೇಗೆ?

ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಲ್ಲಿಯೂ ಏರಿಳಿತ ಇರುತ್ತದೆ. ಆತನಿಗೆ ವಯಸ್ಸಾಗುತ್ತ, ಆಟದಲ್ಲಿನ ಸಾಮರ್ಥ್ಯ ಕುಸಿಯುತ್ತಿದ್ದರೆ ಬಿಸಿಸಿಐ ಪ್ರಮುಖರಾದವರು ಅವರೊಂದಿಗೆ ಮಾತನಾಡಬೇಕು. ಅವರಿಗೊಂದು ಕಾಲಮಿತಿ ನೀಡಬೇಕು. ಚೆನ್ನಾಗಿ ಆಡುವ ಮತ್ತೊಂದು ಅವಕಾಶ ಕೊಡಬೇಕು ಇಲ್ಲದಿದ್ದರೆ ನಿವೃತ್ತಿಯ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಬೇಕು. ಆದರೆ ಧೋನಿ ವಿಷಯದಲ್ಲಿ ಹೀಗಾಗುತ್ತಿಲ್ಲ. ಕಳೆದ ಎಂಟು ತಿಂಗಳಿಂದ ಅವರು ಯಾವುದೇ ಪಂದ್ಯದಲ್ಲಿ ಆಡಿಲ್ಲ. ಭಾರತ ತಂಡಕ್ಕೆ ಆಯ್ಕೆಯೂ ಆಗಿಲ್ಲ. ಆದರೂ ಇದುವರೆಗೆ ಅವರೊಂದಿಗೆ ಬಿಸಿಸಿಐನವರು ಮಾತನಾಡಿರುವ ಕುರಿತು ವರದಿಯಾಗಿಲ್ಲ.

ವಿದಾಯದ ವಿಷಯದಲ್ಲಿ ಧೋನಿ ಯಾರಿಂದಲೂ ಹೇಳಿಸಿಕೊಂಡವರಲ್ಲ. ಆರು ವರ್ಷಗಳ ಹಿಂದೆ. ಟೆಸ್ಟ್‌ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದ ಮಹಿ, ಮೂರು ವರ್ಷಗಳ ಹಿಂದೆ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವದಿಂದ ನಿರ್ಗಮಿಸಿದ್ದರು. ಅಂತಹ ಒಬ್ಬ ದಿಗ್ಗಜನಿಗೆ ಅರ್ಹ ಬೀಳ್ಕೊಡುಗೆ ನೀಡಿದರೆ ಬಿಸಿಸಿಐ ತನ್ನನ್ನು ತಾನೇ ಗೌರವಿಸಿಕೊಂಡಂತಾಗುವುದರಲ್ಲಿ ಸಂಶಯವಿಲ್ಲ. ಅವರಲ್ಲದೇ ಭಾರತ ತಂಡದ ಕೆಲವು ಮಹತ್ವದ ಗೆಲುವುಗಳ ರೂವಾರಿಗಳಾದ ಹರಭಜನ್ ಸಿಂಗ್, ಸುರೇಶ್ ರೈನಾ ಮತ್ತು ಯೂಸುಫ್ ಪಠಾಣ್ ಕೂಡ ಗೌರವಯುತ ಬೀಳ್ಕೊಡುಗೆಯನಿರೀಕ್ಷೆಯಲ್ಲಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT