ಬೆಂಗಳೂರು: ಯುವಪ್ರತಿಭೆ ಸಮಿತ್ ದ್ರಾವಿಡ್ ಸೇರಿದಂತೆ ಕರ್ನಾಟಕದ ನಾಲ್ವರು ಆಟಗಾರರು 19 ವರ್ಷದೊಳಗಿನವರ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಸಮಿತ್ ಅವರೊಂದಿಗೆ ಹಾರ್ದಿಕ್ ರಾಜ್, ಕೆ.ಪಿ. ಕಾರ್ತಿಕೇಯ ಮತ್ತು ಸಮರ್ಥ್ ನಟರಾಜ್ ಅವರು ಆಯ್ಕೆಯಾಗಿದ್ದಾರೆ.
ಇದೇ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಎದುರಿನ ಸರಣಿಗಳಲ್ಲಿ ಅವರು ಆಡಲಿದ್ದಾರೆ. ಪುದುಚೇರಿಯಲ್ಲಿ ಸೆಪ್ಟೆಂಬರ್ 21, 23 ಮತ್ತು 26ರಂದು ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಸೆ 30ರಿಂದ ಮತ್ತು ಅ. 7ರಿಂದ ಎರಡು ದೀರ್ಘ ಮಾದರಿ (ನಾಲ್ಕು ದಿನಗಳ ಅವಧಿ) ಪಂದ್ಯಗಳು ನಡೆಯಲಿವೆ. ಏಕದಿನ ಸರಣಿಗೆ ಉತ್ತರ ಪ್ರದೇಶದ ಮೊಹಮ್ಮದ್ ಅಮನ್ ಮತ್ತು ದೀರ್ಘ ಮಾದರಿ ಪಂದ್ಯಗಳ ಸರಣಿಗೆ ಮಧ್ಯಪ್ರದೇಶದ ಸೋಹಮ್ ಪಟವರ್ಧನ್ ಅವರು ನಾಯಕತ್ವ ವಹಿಸಲಿದ್ದಾರೆ.
ಸಮಿತ್ ಅವರು ಮಧ್ಯಮವೇಗದ ಬೌಲಿಂಗ್ ಆಲ್‌ರೌಂಡರ್. ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಏಳು ಇನಿಂಗ್ಸ್‌ಗಳಲ್ಲಿ 82 ರನ್ ಗಳಿಸಿದ್ದಾರೆ. ಅದರಲ್ಲಿ 33 ಅವರ ವೈಯಕ್ತಿಕ ಶ್ರೇಷ್ಠ ಸ್ಕೋರ್.
18 ವರ್ಷದ ಸಮಿತ್ ಈಚೆಗೆ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ತಂಡವು ಇದೇ ಮೊದಲ ಬಾರಿ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿತು. ಅದರಲ್ಲಿ ಅವರು ಒಟ್ಟು 362 ರನ್ ಗಳಿಸಿದ್ದರು. ಜಮ್ಮು ಮತ್ತು ಕಾಶ್ಮೀರ ತಂಡದ ಎದುರಿನ ಪಂದ್ಯದಲ್ಲಿ 98 ರನ್ ಗಳಿಸಿದ್ದರು. ಆ ಟೂರ್ನಿಯಲ್ಲಿ ಅವರು ಎಂಟು ಪಂದ್ಯಗಳಿಂದ 16 ವಿಕೆಟ್ ಗಳಿಸಿದ್ದರು. ಅದರಲ್ಲಿ ಫೈನಲ್ ಪಂದ್ಯದಲ್ಲಿ ಮುಂಬೈ ಎದುರು ಎರಡು ವಿಕೆಟ್ ಗಳಿಸಿ ಮಿಂಚಿದ್ದರು.
ಸಮಿತ್ ಅವರ ತಂದೆ ರಾಹುಲ್ ದ್ರಾವಿಡ್ ಅವರು ಭಾರತ ಕ್ರಿಕೆಟ್ ತಂಡದ ನಾಯಕ, ವಿಕೆಟ್‌ಕೀಪರ್, ಬ್ಯಾಟರ್ ಮತ್ತು ಮುಖ್ಯ ಕೋಚ್ ಆಗಿದ್ದವರು. ಇತ್ತೀಚೆಗೆ ಅವರ ಮಾರ್ಗದರ್ಶನದ ಭಾರತ ತಂಡವು ಟಿ20 ವಿಶ್ವಕಪ್ ಜಯಿಸಿತ್ತು. ಕೆಲವು ವರ್ಷಗಳ ಹಿಂದೆ ಅವರು ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ 19 ವರ್ಷದೊಳಗಿನವರ ತಂಡವು ವಿಶ್ವಕಪ್ ಜಯಿಸಿತ್ತು.
ತಂಡಗಳು:
ಏಕದಿನ ಸರಣಿ: ಮೊಹಮ್ಮದ್ ಅಮನ್ (ನಾಯಕ), ರುದ್ರಾ ಪಟೇಲ್, ಸಾಹಿಲ್ ಪರಾಕ್, ಕೆ.ಪಿ. ಕಾರ್ತಿಕೇಯ, ಕಿರಣ ಚೋರಮಲೆ, ಅಭಿಗ್ಯಾನ ಕುಂದು (ವಿಕೆಟ್‌ಕೀಪರ್), ಹರವಂಶ್ ಸಿಂಗ್ ಪಂಗಾಲಿಯಾ (ವಿಕೆಟ್‌ಕೀಪರ್), ಸಮಿತ್ ದ್ರಾವಿಡ್, ಯುದ್ಧಜೀತ್ ಗುಹಾ, ಎನ್. ಸಮರ್ಥ್, ನಿಖಿಲ್ ಕುಮಾರ್, ಚೇತನ್ ಶರ್ಮಾ, ಹಾರ್ದಿಕ್ ರಾಜ್, ರೋಹಿತ್ ರಾಜಾವತ್, ಮೊಹಮ್ಮದ್ ಇನಾನ್.
ಚತುರ್ದಿನ ಪಂದ್ಯಗಳ ಸರಣಿ: ಸೋಹಂ ಪಟವರ್ಧನ್ (ನಾಯಕ), ವೈಭವ್ ಸೂರ್ಯವಂಶಿ, ನಿತ್ಯ ಪಾಂಡ್ಯ, ವಿಹಾನ್ ಮಲ್ಹೋತ್ರಾ, ಕೆ.ಪಿ. ಕಾರ್ತಿಕೇಯ, ಸಮಿತ್ ದ್ರಾವಿಡ್, ಅಭಿಗ್ಯಾನ ಕುಂದು, ಹರವಂಶ್ ಸಿಂಗ್ ಪಂಗಾಲಿಯಾ (ಇಬ್ಬರೂ ವಿಕೆಟ್‌ಕೀಪರ್), ಚೇತನ್ ಶರ್ಮಾ, ಎನ್. ಸಮರ್ಥ್, ಆದಿತ್ಯ ರಾವತ್, ನಿಖಿಲ್ ಕುಮಾರ್, ಅನ್ಮೋಲ್‌ಜೀತ್ ಸಿಂಗ್, ಆದಿತ್ಯ ಸಿಂಗ್. ಮೊಹಮ್ಮದ್ ಇನಾನ್.
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.