ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮಹಿಳೆಯರಿಗೆ ಇಂಗ್ಲೆಂಡ್‌ ‘ಟೆಸ್ಟ್’

ಏಳು ವರ್ಷಗಳ ಬಳಿಕ ಮಿಥಾಲಿ ರಾಜ್ ಸಾರಥ್ಯದ ತಂಡ ಕಣಕ್ಕೆ
Last Updated 15 ಜೂನ್ 2021, 12:09 IST
ಅಕ್ಷರ ಗಾತ್ರ

ಬ್ರಿಸ್ಟಲ್‌: ಏಳು ವರ್ಷಗಳ ಬಳಿಕ ಭಾರತ ಮಹಿಳಾ ತಂಡವು ಟೆಸ್ಟ್‌ ಕ್ರಿಕೆಟ್‌ನಲ್ಲಿ ಕಣಕ್ಕಿಳಿಯುತ್ತಿದ್ದು, ಬುಧವಾರಆತಿಥೇಯ ಇಂಗ್ಲೆಂಡ್ ಸವಾಲಿಗೆ ಸಜ್ಜಾಗಿದೆ. ಸೂಕ್ತ ತಾಲೀಮಿನ ಕೊರತೆ ಕಾಡುತ್ತಿದ್ದರೂ, ಇಂಗ್ಲೆಂಡ್‌ ನೆಲದಲ್ಲಿನ ದಾಖಲೆಗಳು ಹಾಗೂ ಸಕಾರಾತ್ಮಕ ಮನಸ್ಥಿತಿಯ ಬಲ ಪ್ರವಾಸಿ ತಂಡಕ್ಕಿದೆ.

ನವೆಂಬರ್ 2014ರ ಬಳಿಕ ಕೆಂಡುಚೆಂಡಿನ ಪ‍ಂದ್ಯದಲ್ಲಿ ಆಡಲಿರುವ ಮಿಥಾಲಿ ರಾಜ್ ನಾಯಕತ್ವದ ಭಾರತ ತಂಡ, ತವರು ಹಾಗೂ ಇಂಗ್ಲೆಂಡ್‌ನಲ್ಲಿ ಕ್ವಾರಂಟೈನ್‌ಗಳನ್ನು ಪೂರ್ಣಗೊಳಿಸಿದೆ. ತಂಡದ ಅಭ್ಯಾಸಕ್ಕೆ ಕೇವಲ ಒಂದು ವಾರ ಸಮಯ ಸಿಕ್ಕಿತ್ತು.

2014ರಲ್ಲಿ ಮೈಸೂರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪ‍ಂದ್ಯವನ್ನು ಭಾರತ ಗೆದ್ದುಕೊಂಡಿತ್ತು. ಆಗ ಮಿಥಾಲಿ ಸೇರಿದಂತೆ ಈಗಿರುವ ತಂಡದ ಏಳು ಮಂದಿ ಸದಸ್ಯರು ಆಡಿದ್ದರು.

ಅನುಭವಿ ಆಟಗಾರ್ತಿಯರಾದ ಮಿಥಾಲಿ, ಹರ್ಮನ್‌ಪ್ರೀತ್ ಕೌರ್‌, ಸ್ಮೃತಿ ಮಂದಾನ ಹಾಗೂ ಜೂಲನ್ ಗೋಸ್ವಾಮಿ ಮತ್ತು ಇತ್ತೀಚೆಗೆ ಯಾವುದೇ ಪ್ರಥಮ ದರ್ಜೆ ಪಂದ್ಯಗಳಲ್ಲೂ ಆಡದ ಯುವ ಆಟಗಾರ್ತಿಯರಿಗೆ ನಾಲ್ಕು ದಿನಗಳ ಈ ಪಂದ್ಯವು ಹೆಚ್ಚಿನ ಸವಾಲಾಗುವ ಸಾಧ್ಯತೆಯಿದೆ.

‘ಆಟಗಾರ್ತಿಯರು ಉತ್ತಮ ಲಯದಲ್ಲಿದ್ದಾರೆ.ಉತ್ತಮ ತರಬೇತಿಯೂ ಅವರಿಗೆ ಸಿಕ್ಕಿದೆ. ಆದರೆ ಪಂದ್ಯದ ತಾಲೀಮಿಗೆ ಪರ್ಯಾಯ ಯಾವುದೂ ಆಗಲಾರದು‘ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಈ ಟೆಸ್ಟ್ ಪಂದ್ಯಕ್ಕೆ ಸಜ್ಜುಗೊಳ್ಳಲು ನಮಗೆ ಸಿಕ್ಕ ಸಮಯ ಕಡಿಮೆ. ಆದರೆ ಮಾನಸಿಕ ಸಿದ್ಧತೆಯೊಂದಿಗೆ ನಾವು ಇಂಗ್ಲೆಂಡ್‌ಅನ್ನು ಎದುರಿಸಲಿದ್ದೇವೆ. ಪುರುಷರ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರಿಂದ ಅಮೂಲ್ಯ ಸಲಹೆಗಳನ್ನು ಪಡೆದಿದ್ದೇವೆ‘ ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.

17ರ ಹರಯದ ಶೆಫಾಲಿ ವರ್ಮಾ ಅವರು ಸ್ಮೃತಿ ಮಂದಾನ ಜೊತೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಮಿಥಾಲಿ, ಹರ್ಮನ್‌ಪ್ರೀತ್‌, ಪೂನಂ ರಾವತ್ ಮೇಲೆ ನಿರೀಕ್ಷೆಯಿದೆ. ಜೂಲನ್ ಗೋಸ್ವಾಮಿ ಮತ್ತು ಶಿಖಾ ಪಾಂಡೆ ಅವರು ದೀರ್ಘ ಬೌಲಿಂಗ್ ಸ್ಪೆಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ತಂಡಗಳು: ಮಿಥಾಲಿ ರಾಜ್‌ (ನಾಯಕಿ), ಸ್ಮೃತಿ ಮಂದಾನ, ಹರ್ಮನ್‌ಪ್ರೀತ್ ಕೌರ್‌ (ಉಪನಾಯಕಿ), ಪೂನಮ್ ರಾವತ್‌, ಪ್ರಿಯಾ ಪೂನಿಯಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್‌, ಶೆಫಾಲಿ ವರ್ಮಾ, ಸ್ನೇಹ್ ರಾಣಾ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್‌), ಇಂದ್ರಾಣಿ ರಾಯ್‌, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಕರ್‌, ಅರುಂಧತಿ ರೆಡ್ಡಿ, ಪೂನಂ ಯಾದವ್‌, ಏಕ್ತಾ ಬಿಸ್ಟ್‌, ರಾಧಾ ಯಾದವ್‌.

ಇಂಗ್ಲೆಂಡ್‌: ಹೀದರ್‌ ನೈಟ್‌ (ನಾಯಕಿ), ನ್ಯಾಟ್‌ ಸ್ಕಿವರ್‌ (ಉಪನಾಯಕಿ), ಎಮಿಲಿ ಅರ್ಲಾಟ್‌, ಟಾಮಿ ಬೀಮೊಂಟ್‌, ಕ್ಯಾಥರೀನ್ ಬ್ರಂಟ್‌, ಕೇಟ್‌ ಕ್ರಾಸ್‌, ಫ್ರೆಯಾ ಡೇವಿಸ್‌, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟೋನ್‌, ಜಾರ್ಜಿಯಾ ಎಲ್ವಿಸ್‌, ತಾಷ್‌ ಫರಂಟ್‌, ಸಾರಾ ಗ್ಲೆನ್‌, ಆ್ಯಮಿ ಜೋನ್ಸ್, ಅನ್ಯಾ ಶ್ರಬ್‌ಸೋಲ್‌, ಮ್ಯಾಡಿ ವಿಲಿಯರ್ಸ್, ಫ್ರಾನ್ ವಿಲ್ಸನ್‌, ಲಾರೆನ್‌ ವಿನ್‌ಫೀಲ್ಡ್‌ ಹಿಲ್‌.

ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT