ಶನಿವಾರ, ಜುಲೈ 24, 2021
20 °C

ಇಂಗ್ಲೆಂಡ್‌ ವಿರುದ್ಧ ಡ್ರಾ ಆದ ಏಕೈಕ ಟೆಸ್ಟ್‌: ಶೆಫಾಲಿ ಆಟಕ್ಕೆ ಮಿಥಾಲಿ ಮೆಚ್ಚುಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ರಿಸ್ಟಲ್‌: ಟೆಸ್ಟ್‌ ಕ್ರಿಕೆಟ್‌ಗೆ ಅಮೋಘ ರೀತಿ ಪದಾರ್ಪಣೆ ಮಾಡಿದ ಶೆಫಾಲಿ ವರ್ಮಾ ಅವರು ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೂರೂ ಮಾದರಿಯಲ್ಲಿ ಈ ಉದಯೋನ್ಮುಖ  ಆಟಗಾರ್ತಿ ತಂಡದಲ್ಲಿ ಪ್ರಮುಖ ಶಕ್ತಿಯಾಗಬಲ್ಲರು ಎಂದು ಮಿಥಾಲಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ 96 ರನ್‌ ಬಾರಿಸಿದ್ದ ಮಿಥಾಲಿ, ಎರಡನೇ ಸರದಿಯಲ್ಲೂ ಪ್ರಬುದ್ಧ ಆಟವಾಡಿ 63 ರನ್‌ಗಳ ಕೊಡುಗೆ ನೀಡಿದ್ದರು. ಚೊಚ್ಚಲು ಟಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧ ಶತಕಗಳನ್ನು ಬಾರಿಸಿದ ಅತಿ ಕಿರಿಯ ಹಾಗೂ ಒಟ್ಟಾರೆ ನಾಲ್ಕನೇ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು. 17 ವರ್ಷದ ಆರಂಭ ಆಟಗಾರ್ತಿಗೆ ಅರ್ಹವಾಗಿ ಪಂದ್ಯದ ಆಟಗಾರ್ತಿ ಗೌರವವೂ ಪ್ರಾಪ್ತಿಯಾಗಿತ್ತು.

‘ಎಲ್ಲ ಮಾದರಿಯಲ್ಲಿ ಅವರು ಭಾರತದ ಬ್ಯಾಟಿಂಗ್‌ನಲ್ಲಿ ಗುರುತರ ಪಾತ್ರ ವಹಿಸಬಲ್ಲರು’ ಎಂದು ಮಿಥಾಲಿ ಆನ್‌ಲೈನ್‌ ಮಾಧ್ಯಮ ಸಂವಾದದಲ್ಲಿ ತಿಳಿಸಿದ್ದಾರೆ. ಏಕೈಕ ಟೆಸ್ಟ್‌ ಪಂದ್ಯವನ್ನು ಭಾರತ ಶನಿವಾರ ‘ಡ್ರಾ’ ಮಾಡಿಕೊಂಡ ನಂತರ ಅವರು ‘ವರ್ಚುವಲ್‌ ಸಂವಾದದಲ್ಲಿ’ ಭಾಗಿಯಾದರು.

‘ಟಿ–20 ರೀತಿಯಲ್ಲಿ ಆಡುವ ರೀತಿಯಲ್ಲಿ ಶೆಫಾಲಿ ಇಲ್ಲಿ ಆಡಲಿಲ್ಲ. ಹೊಸ ಚೆಂಡಿನ ಎದುರು ವಿವೇಚನೆಯಿಂದ ಆಡಿದರು. ಆಕೆಯ ಆಟದಲ್ಲಿ ಮೆಚ್ಚುವ ಸಂಗತಿ ಇದಾಗಿತ್ತು‘ ಎಂದು ಅನುಭವಿ ಆಟಗಾರ್ತಿ ಮಿತಾಲಿ ಹೇಳಿದರು.

ಶೆಫಾಲಿ ಅವರಿಗೆ ಇಂಗ್ಲೆಂಡ್‌ ವಿರುದ್ಧ ಪದಾರ್ಪಣೆ ಅವಕಾಶ ನೀಡಲು ಪ್ರೇರೇಪಣೆ ಏನು ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಮಿಥಾಲಿ ಉತ್ತರಿಸಿದ್ದು ಹೀಗೆ– ‘ಅವರ ಬತ್ತಳಿಕೆಯಲ್ಲಿ ಹೊಡೆತಗಳ ವೈವಿಧ್ಯವಿದೆ. ಇಂಥ ಮಾದರಿಯ ಪಂದ್ಯದಲ್ಲಿ ಕುದುರಿಕೊಂಡ ನಂತರ ಅವರು ಪರಿಣಾಮಕಾರಿ ಆಗಬಲ್ಲರು. ಲಯಕ್ಕೆ ಬಂದರೆ ನೋಡುವಷ್ಟರಲ್ಲಿ ಸ್ಕೋರ್‌ ಎಲ್ಲಿಗೊ ಹೋಗಿರುತ್ತದೆ.’

ಶೆಫಾಲಿ ಆಟ ಮೊದಲ ಇನಿಂಗ್ಸ್‌ಗಿಂತ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಗುಣಮಟ್ಟ ಹೊಂದಿತ್ತು ಎಂದು ಮಿಥಾಲಿ ರೇಟಿಂಗ್‌ ಕೊಟ್ಟಿದ್ದಾರೆ. ಎರಡನೇ ಇನಿಂಗ್ಸ್‌ನ ಆಟ ಹೆಚ್ಚು ವಿಶ್ವಾಸ ಮತ್ತು ಸ್ವಲ್ಪ ಅನುಭವದಿಂದ ಕೂಡಿತ್ತು ಎಂದಿದ್ದಾರೆ ಮಿಥಾಲಿ.‌

ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ವನಿತೆಯರು 9 ವಿಕೆಟ್‌ಗೆ 396 ರನ್‌ ಬಾರಿಸಿತ್ತು. ಭಾರತ ಇದಕ್ಕೆ ಉತ್ತರವಾಗಿ 231 ರನ್‌ ಗಳಿಸಲು ಮಾತ್ರ ಶಕ್ತವಾಗಿತ್ತು. ಏಳು ವರ್ಷಗಳ ನಂತರ ಆಡಿದ್ದರೂ, ಭಾರತ ಒಂದು ಹಂತದಲ್ಲಿ ವಿಕೆಟ್‌ ಕಳೆದುಕೊಳ್ಳದೇ 167 ರನ್ ಗಳಿಸಿ ಉತ್ತಮ ಆರಂಭ ಮಾಡಿತ್ತು. ನಂತರ ಎಂದಿನ ರೀತಿ ಕುಸಿತ ಕಂಡಿತು. ಫಾಲೊ ಆನ್‌ಗೆ ಒಳಗಾದ ನಂತರ ಎರಡನೇ ಇನಿಂಗ್ಸ್‌ನಲ್ಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಅರ್ಧ ಶತಕಗಳನ್ನು ಬಾರಿಸಿ ಮತ್ತೊಮ್ಮೆ ಉತ್ತಮ ಆರಂಭ ಒದಗಿಸಿದ್ದರು. ಮತ್ತೊಮ್ಮೆ ಕುಸಿತ ಕಂಡ ಭಾರತ ಸೋಲಿನತ್ತ ಮುಖ ಮಾಡಿತ್ತು. ಆದರೆ ವಿಕೆಟ್‌ ಕೀಪರ್‌ ತಾನಿಯಾ ಭಾಟಿಯಾ (44 ನಾಟೌಟ್‌) ಮತ್ತು ಪದಾರ್ಪಣೆ ಪಂದ್ಯವಾಡಿದ ಸ್ನೇಹ ರಾಣಾ (ಅಜೇಯ 80) ಜೋಡಿ ಆತಿಥೇಯ ಬೌಲರ್‌ಗಳನ್ನು ಸತಾಯಿಸಿ ಹತಾಶೆಗೊಳಿಸಿತ್ತು.

‘ಬ್ಯಾಟಿಂಗ್‌ ಸಾಮರ್ಥ್ಯದಿಂದಾಗಿ ನಾವು ಆಫ್‌ ಸ್ಪಿನ್ನರ್ ಸ್ನೇಹ ರಾಣಾ ಅವರಿಗೆ ಇಲ್ಲಿ ಪದಾರ್ಪಣೆ ಅವಕಾಶ ನೀಡಿದ್ದೆವು. ನಾವು ಕೆಳಕ್ರಮಾಂಕದವರೆಗೆ ಬ್ಯಾಟಿಂಗ್‌ ಬಲಗೊಳಿಸಲು ಮುಂದಾಗಿದ್ದೆವು’ ಎಂದು ಮಿಥಾಲಿ ಅವರು ಸ್ನೇಹಾ ಆಯ್ಕೆಗೆ ಕಾರಣ ನೀಡಿದ್ದಾರೆ.

ಐದು ಟೆಸ್ಟ್‌ಗಳ ಸರಣಿಯನ್ನು ಏರ್ಪಡಿಸಬೇಕೆಂಬ ಇಂಗ್ಲೆಂಡ್‌ ನಾಯಕಿ ಹೀದರ್‌ ನೈಟ್‌ ಅವರ ಸಲಹೆಯನ್ನೂ ಮಿಥಾಲಿ ಬೆಂಬಲಿಸಿದ್ದಾರೆ. ಐದು ಟೆಸ್ಟ್‌ಗಳ ಸರಣಿ ಉತ್ತಮ ಯೋಚನೆಯೇ. ಆದರೆ ಟೆಸ್ಟ್‌ ಪಂದ್ಯಗಳು ನಿಯಮಿತವಾಗಿ ನಡೆಯಬೇಕು ಎನ್ನುವ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಭಾರತ ಮಹಿಳೆಯರು ಈ ಪ್ರವಾಸದಲ್ಲಿ ಇನ್ನು ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದಾರೆ. ನಂತರ ಅಷ್ಟೇ ಸಂಖ್ಯೆಯಲ್ಲಿ ಟ್ವೆಂಟಿ–20 ಪಂದ್ಯಗಳನ್ನು ಆಡಲಿದ್ದಾರೆ. ಮೊದಲ ಏಕದಿನ ಪಂದ್ಯ ಜೂನ್‌ 27ರಂದು ನಿಗದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು