ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಮುಡಿಯೇರಿದ ವಿಜಯ್‌ ಹಜಾರೆ ಟ್ರೋಫಿ

ಮಾಧವ್ ಕೌಶಿಕ್‌, ಆದಿತ್ಯ ತರೆಗೆ ಶತಕ; ಪೃಥ್ವಿ ಶಾ ಸ್ಫೋಟಕ ಅರ್ಧಶತಕ; ಉತ್ತರ ಪ್ರದೇಶ ತಂಡಕ್ಕೆ ನಿರಾಸೆ
Last Updated 14 ಮಾರ್ಚ್ 2021, 13:46 IST
ಅಕ್ಷರ ಗಾತ್ರ

ದೆಹಲಿ: ನಾಯಕ ಪೃಥ್ವಿ ಶಾ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ವೈಭವ ಪ್ರದರ್ಶಿಸಿದರು. ಟೂರ್ನಿಯಲ್ಲಿ ಐದನೇ ಶತಕ ಗಳಿಸಲು ಸಾಧ್ಯವಾಗದೇ ಇದ್ದರೂ 39 ಎಸೆತಗಳಲ್ಲಿ 73 ರನ್ (10 ಬೌಂಡರಿ, 4 ಸಿಕ್ಸರ್) ಸಿಡಿಸಿ ಮಿಂಚಿದರು. ಮೂರನೇ ಕ್ರಮಾಂಕದ ಆದಿತ್ಯ ತರೆ (118; 107 ಎಸೆತ, 18 ಬೌಂ) ಅಮೋಘ ಬ್ಯಾಟಿಂಗ್ ಮಾಡಿ ಎದುರಾಳಿಗಳನ್ನು ಕಂಗೆಡಿಸಿದರು.

ಇವರಿಬ್ಬರ ಭರ್ಜರಿ ಆಟದ ನೆರವಿನಿಂದ ಉತ್ತರ ಪ್ರದೇಶವನ್ನು ಸುಲಭವಾಗಿ ಮಣಿಸಿದ ಮುಂಬೈ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ಆರಂಭಿಕ ಬ್ಯಾಟ್ಸ್‌ಮನ್ ಮಾಧವ್ ಕೌಶಿಕ್ (158; 156 ಎ, 15 ಬೌಂ, 4 ಸಿ) ಅವರ ದಾಖಲೆಯ ಶತಕ, ಸಮರ್ಥ್ ಸಿಂಗ್ ಮತ್ತು ಅಕ್ಷದೀಪ್ ನಾಥ್ ಅವರ ಅರ್ಧಶತಕಗಳ ನೆರವಿನಿಂದ ಉತ್ತರ ಪ್ರದೇಶ 312 ರನ್ ಕಲೆ ಹಾಕಿತ್ತು. ಕಠಿಣ ಗುರಿ ಬೆನ್ನತ್ತಿದ ಮುಂಬೈ 51 ಎಸೆತಗಳು ಬಾಕಿ ಇರುವಾಗಲೇ ನಾಲ್ಕು ವಿಕೆಟ್ ಕಳೆದುಕೊಂಡು ದಡ ಸೇರಿತು. ಈ ಮೂಲಕ ನಾಲ್ಕನೇ ಬಾರಿ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿತು. ಒಟ್ಟು 827 ರನ್ ಗಳಿಸಿದ ಪೃಥ್ವಿ ಶಾ ಟೂರ್ನಿಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು.

ಪೃಥ್ವಿ ಶಾ ಮತ್ತು ಯಶಸ್ವಿ ಜೈಸ್ವಾಲ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಹೀಗಾಗಿ 9.1 ಓವರ್‌ಗಳಲ್ಲಿ 89 ರನ್‌ಗಳು ಮುಂಬೈ ಖಾತೆಗೆ ಸೇರಿದವು. ಮಧ್ಯಮ ವೇಗಿ ಯಶ್‌ ದಯಾಳ್ ಅವರ ಎಸೆತವನ್ನು ಕವರ್ ಡ್ರೈವ್ ಮೂಲಕ ಬೌಂಡರಿಗೆ ಅಟ್ಟಿ ರನ್ ಗಳಿಕೆ ಆರಂಭಿಸಿದ ಶಾ ಐದು ರನ್ ಗಳಿಸಿದ್ದಾಗ ಕರಣ್ ಶರ್ಮಾ ಅವರಿಂದ ಜೀವದಾನ ಪಡೆದರು. ಎರಡನೇ ಓವರ್‌ನಲ್ಲಿ ಅಕೀಬ್ ಖಾನ್ ಅವರನ್ನು ಮೂರು ಬಾರಿ ಬೌಂಡರಿಗೆ ಅಟ್ಟಿದರು. ನಂತರ ಯಶ್‌ ದಯಾಳ್ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಪುಲ್‌ ಶಾಟ್ ಮೂಲಕ ಮಿಡ್‌ವಿಕೆಟ್ ಮೇಲಿಂದ ಸಿಕ್ಸರ್ ಸಿಡಿಸಿ ಮೂರು ಓವರ್‌ಗಳಲ್ಲಿ ರನ್‌ 32 ಆಗುವಂತೆ ಮಾಡಿದರು. ಸಿಕ್ಸರ್‌ನೊಂದಿಗೆ 30 ಎಸೆತಗಳಲ್ಲಿ ಅರ್ಧಶತಕ ದಾಟಿದ ಅವರು ಔಟಾದ ನಂತರ ಜೈಸ್ವಾಲ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.

ನಂತರ ಆದಿತ್ಯ ತರೆ ಇನಿಂಗ್ಸ್ ಕಳೆಗಟ್ಟಿತು. ಶಮ್ಸ್ ಮುಲಾನಿ ಜೊತೆಗೂಡಿ ಮೊತ್ತವನ್ನು ಹೆಚ್ಚಿಸುತ್ತ ಸಾಗಿದ ಅವರು 30 ಓವರ್‌ಗಳಲ್ಲಿ ತಂಡವನ್ನು 200ರ ಗಡಿ ದಾಟಿಸಿದರು. 31ನೇ ಓವರ್‌ನಲ್ಲಿ ಮುಲಾನಿ ಔಟಾದಾಗ ತಂಡದ ಜಯಕ್ಕೆ 98 ರನ್‌ ಬೇಕಾಗಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಶಿವಂ ದುಬೆ (42; 28 ಎ, 6 ಬೌಂ, 1 ಸಿ) ಸ್ಫೋಟಕ ಬ್ಯಾಟಿಂಗ್ ಮಾಡಿ ಸುಲಭ ಜಯದತ್ತ ಮುನ್ನಡೆಸಿದರು.

91 ಎಸೆತಗಳಲ್ಲಿ ತರೆ ಶತಕ ಪೂರೈಸಿದರು. ಇದು, ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಅವರ ಮೊದಲ ಶತಕವಾಗಿದೆ. ದುಬೆ ಜೊತೆ ನಾಲ್ಕನೇ ವಿಕೆಟ್‌ಗೆ ಅವರು 88 ರನ್ ಸೇರಿಸಿದರು. ಸರ್ಫರಾಜ್ ಖಾನ್ ಕ್ರೀಸ್‌ಗೆ ಬರುವಾಗ ಗೆಲುವಿನ ಔಪಚಾರಿಕತೆ ಮಾತ್ರ ಬಾಕಿ ಇತ್ತು. ತರೆ, ಬ್ಯಾಕ್ ಕಟ್ ಮಾಡಿ ಪಾಯಿಂಟ್ ಮತ್ತು ಶಾರ್ಟ್ ಥರ್ಡ್‌ ಮ್ಯಾನ್ ಕಡೆಯಿಂದ ಚೆಂಡನ್ನು ಅಟ್ಟುತ್ತಿದ್ದಂತೆ ಮುಂಬೈ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತು.

ಮಯಂಕ್ ದಾಖಲೆ ಹಿಂದಿಕ್ಕಿದ ಕೌಶಿಕ್

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಉತ್ತರಪ್ರದೇಶಕ್ಕ ಮಾಧವ್‌ ಕೌಶಿಕ್ ಮತ್ತು ಸಮರ್ಥ್ ಸಿಂಗ್ (55; 73 ಎ, 4 ಬೌಂ, 3 ಸಿ) ಅಮೋಘ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 122 ರನ್ ಸೇರಿಸಿದರು. ನಾಯಕ ಕರಣ್ ಶರ್ಮಾ ಶೂನ್ಯಕ್ಕೆ ಔಟಾದರೂ ಕೌಶಿಕ್ ಮತ್ತು ಪ್ರಿಯಂ ಗಾರ್ಗ್‌ 38 ರನ್ ಸೇರಿದರು. ಗಾರ್ಗ್ ಮರಳಿದ ನಂತರ ಕೌಶಿಕ್ ಜೊತೆಗೂಡಿದ ಅಕ್ಷದೀಪ್ ನಾಥ್ (55; 40 ಎ, 4 ಬೌಂ, 3 ಸಿ) 128 ರನ್‌ಗಳನ್ನು ಸೇರಿಸಿ ತಂಡವನ್ನು 300ರ ಸನಿಹ ತಲುಪಿಸಿ ಔಟಾದರು. ಪೃಥ್ವಿ ಶಾ ಅವರ ನೇರ ಎಸೆತಕ್ಕೆ ಅಕ್ಷದೀಪ್ ರನೌಟ್ ಆದರು. ಕೊನೆಯ 10 ಎಸೆತಗಳಲ್ಲಿ ಕೌಶಿಕ್ ಮತ್ತು ಉಪೇಂದ್ರ ಯಾದವ್ 23 ರನ್‌ ಕಲೆ ಹಾಕಿದರು.

ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದ ಆಟಗಾರ ಎಂಬ ದಾಖಲೆ ಕೌಶಿಕ್ ಪಾಲಾಯಿತು. 2014ರಲ್ಲಿ ಪಂಜಾಬ್ ವಿರುದ್ಧ 125 ರನ್ ಗಳಿಸಿದ್ದ ಕರ್ನಾಟಕದ ಮಯಂಕ್ ಅಗರವಾಲ್ ಅವರ ಹೆಸರಿನಲ್ಲಿ ಇಲ್ಲಿಯವರೆಗೆ ಈ ದಾಖಲೆ ಇತ್ತು.

ಸಂಕ್ಷಿಪ್ತ ಸ್ಕೋರು: ಉತ್ತರ ಪ್ರದೇಶ: 50 ಓವರ್‌ಗಳಲ್ಲಿ 4ಕ್ಕೆ 312 (ಮಾಧವ ಕೌಶಿಕ್ ಔಟಾಗದೆ 158, ಸಮರ್ಥ್ ಸಿಂಗ್ 55, ಪ್ರಿಯಂ ಗಾರ್ಗ್ 21, ಅಕ್ಷದೀಪ್ ನಾಥ್ 55; ತನುಷ್ ಕೋಟ್ಯಾನ್ 54ಕ್ಕೆ2, ಪ್ರಶಾಂತ್ ಸೋಳಂಕಿ 71ಕ್ಕೆ1); ಮುಂಬೈ:41.3 ಓವರ್‌ಗಳಲ್ಲಿ 4ಕ್ಕೆ 315 (ಪೃಥ್ವಿ ಶಾ 73, ಯಶಸ್ವಿ ಜೈಸ್ವಾಲ್ 29, ಆದಿತ್ಯ ತರೆ ಔಟಾಗದೆ 118, ಶಂಸ್ ಮುಲಾನಿ 36, ಶಿವಂ ದುಬೆ 42; ಯಶ್‌ ದಯಾಳ್ 71ಕ್ಕೆ 1, ಶಿವಂ ಮಾವಿ 63ಕ್ಕೆ1, ಶಿವಂ ಶರ್ಮಾ 71ಕ್ಕೆ1, ಸಮೀರ್ ಚೌಧರಿ 43ಕ್ಕೆ1). ಫಲಿತಾಂಶ: ಮುಂಬೈಗೆ 6 ವಿಕೆಟ್‌ಗಳ ಜಯ; ಪ್ರಶಸ್ತಿ. ಪಂದ್ಯಶ್ರೇಷ್ಠ: ಆದಿತ್ಯ ತರೆ.

ಪೃಥ್ವಿ ಶಾಗೆ ಗಾಯ

ಫೀಲ್ಡಿಂಗ್ ಮಾಡುತ್ತಿದ್ದಾಗ ಮೊಣಕಾಲಿನ ಕೆಳಭಾಗದ ಮೂಳೆಗೆ ಚೆಂಡು ತಾಗಿ ಗಂಭೀರ ಗಾಯಗೊಂಡ ಮುಂಬೈ ತಂಡದ ನಾಯಕ ಪೃಥ್ವಿ ಶಾ ಅವರನ್ನು ಸಹ ಆಟಗಾರರು ಅಂಗಣದಿಂದ ಎತ್ತಿಕೊಂಡು ಹೋದರು.

ಉತ್ತರಪ್ರದೇಶ ಇನಿಂಗ್ಸ್‌ನಲ್ಲಿ ಪೃಥ್ವಿ ಮೊದಲ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಯುವ ಲೆಗ್‌ ಸ್ಪಿನ್ನರ್ ಪ್ರಶಾಂತ್ ಸೋಳಂಕಿ ಹಾಕಿದ 24ನೇ ಓವರ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಮಾಧವ್ ಕೌಶಿಕ್ ಸ್ಲ್ಯಾಪ್ ಮಾಡಿದ ಚೆಂಡು ಪೃಥ್ವಿಗೆ ಬಡಿಯಿತು. ನೋವಿನಿಂದ ಬಳಲಿದ ಅವರು ಬಿದ್ದು ಹೊರಳಾಡಿದರು. ಫಿಜಿಯೊ ಮತ್ತು ಸಹ ಆಟಗಾರರು ಅವರನ್ನು ಎತ್ತಿಕೊಂಡು ಹೋದರು. ನಂತರ ಮುಂಬೈ ಪರ ಇನಿಂಗ್ಸ್ ಆರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT