ಮಂಗಳವಾರ, ಅಕ್ಟೋಬರ್ 26, 2021
21 °C

ಸ್ಮೃತಿ ಮಂದಾನ ಭವಿಷ್ಯದ ನಾಯಕಿ: ಮಾಜಿ ಕ್ರಿಕೆಟಿಗ ರಾಮನ್ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಟೂರ್ನಿ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ತಂಡದ ನಾಯಕತ್ವವನ್ನು ಬದಲಿಸುವುದು ಸೂಕ್ತವಲ್ಲ.ಒಂದೊಮ್ಮೆ ವಿಶ್ವಕಪ್ ಟೂರ್ನಿ ಮುಗಿದ ನಂತರ ಫಲಿತಾಂಶ ಏನೇ ಇದ್ದರೂ ನಾಯಕತ್ವ ಬದಲಾವಣೆ ಮಾಡಬೇಕು. ಭಾರತ ಮಹಿಳಾ ತಂಡದ ಭವಿಷ್ಯದ ನಾಯಕಿಯಾಗಲು ಸ್ಮೃತಿ ಮಂದಾನ ಸೂಕ್ತ ಆಟಗಾರ್ತಿ ಎಂದು ಮಾಜಿ ಕ್ರಿಕೆಟಿಗ ಡಬ್ಲ್ಯು. ವಿ. ರಾಮನ್ ಹೇಳಿದ್ದಾರೆ.

ಮಂಗಳವಾರ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.


ಡಬ್ಲ್ಯು.ವಿ. ರಾಮನ್

‘ನಾಯಕತ್ವಕ್ಕೆ ವಯಸ್ಸಿನ ಹಂಗಿಲ್ಲ. ಯುವ ಆಟಗಾರ್ತಿ ಮಂದಾನ ಅವರಿಗೆ ನಾಯಕಿಯಾಗಿ ಕಾರ್ಯನಿರ್ವಹಿಸುವ ಎಲ್ಲ ಗುಣಗಳೂ ಇವೆ. ಅವರು ಉತ್ತಮ ಬ್ಯಾಟರ್‌ ಆಗಿರುವುದರ ಜೊತೆಗೆ ಪಂದ್ಯದ ಪ್ರತಿ ಮಜಲುಗಳನ್ನು ಸೂಕ್ಷ್ಮವಾಗಿ ಅವಲೋಕಿಸಬಲ್ಲ ಚಾಕಚಕ್ಯತೆ ಹೊಂದಿದ್ದಾರೆ. ಅಷ್ಟೇ ಅಲ್ಲ. ಕಳೆದ ಕೆಲವು ವರ್ಷಗಳಿಂದ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿರುವ ಅನುಭವ ಹೊಂದಿದ್ದಾರೆ’ ಎಂದು ರಾಮನ್ ಹೇಳಿದರು.

ಸ್ಮೃತಿ 2013ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 25 ವರ್ಷದ ಮಂದಾನ ಈಚೆಗೆ ಆಸ್ಟ್ರೇಲಿಯಾ ಎದುರಿನ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು.

ಆಸ್ಟ್ರೇಲಿಯಾ ಎದುರು ನಡೆಯಲಿರುವ ಟಿ20 ಕ್ರಿಕೆಟ್ ಸರಣಿಯಲ್ಲಿ ಅವರು ತಂಡದ ಉಪನಾಯಕಿಯಾಗಿದ್ದಾರೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ತಂಡಕ್ಕೆ 38 ವರ್ಷದ ಮಿಥಾಲಿ ರಾಜ್ ಮತ್ತು ಚುಟುಕು ಕ್ರಿಕೆಟ್ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ನಾಯಕತ್ವ ವಹಿಸಿದ್ದಾರೆ.

‘ಹರ್ಮನ್‌ಪ್ರೀತ್ ಕೌರ್ ತಂಡಕ್ಕೆ ಮರಳಿರುವುದು ಉತ್ತಮ ಸಂಗತಿ. ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯಲ್ಲಿ ಅವರು ತಂಡವನ್ನು ಉತ್ತಮ ನಡೆಸುವ ವಿಶ್ವಾಸವಿದೆ. ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳುವ ನಿರೀಕ್ಷೆಯೂ ಇದೆ’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು