ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌-ಹೈದರಾಬಾದ್: ನೊಂದವರ ಹಣಾಹಣಿ

Last Updated 24 ಸೆಪ್ಟೆಂಬರ್ 2021, 11:47 IST
ಅಕ್ಷರ ಗಾತ್ರ

ಶಾರ್ಜಾ: ಗೆಲುವಿನತ್ತ ಹೆಜ್ಜೆ ಹಾಕಿದ್ದರೂ ಕೊನೆಯ ಓವರ್‌ಗಳಲ್ಲಿ ಮುಗ್ಗರಿಸಿ ಸೋಲೊಪ್ಪಿಕೊಂಡಿರುವ ಪಂಜಾಬ್ ಕಿಂಗ್ಸ್‌ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಸನ್‌ರೈಸರ್ಸ್ ಹೈದರಾಬಾದ್ ವಿರುಧ ಸೆಣಸಲಿದೆ. ಆಡಿದ ಎಂಟು ಪಂದ್ಯಗಳ ಪೈಕಿ ಏಳನ್ನು ಸೋತಿರುವ ಸನ್‌ರೈಸರ್ಸ್‌ ಗೆಲುವಿನ ಹಾದಿಗೆ ಮರಳಲು ಸರ್ವ ಪ್ರಯತ್ನವನ್ನೂ ಮಾಡಲಿದೆ.

ಆರಂಭದ ಕೆಲವು ಪಂದ್ಯಗಳ ನಂತರ ಹೈದರಾಬಾದ್ ಸತತವಾಗಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಒಂಬತ್ತು ಪಂದ್ಯಗಳ ಪೈಕಿ ಮೂರನ್ನಷ್ಟೇ ಗೆದ್ದಿರುವ ಪಂಜಾಬ್ ಕಿಂಗ್ಸ್ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಆದ್ದರಿಂದ ಇವೆರಡೂ ನೊಂದಿರುವ ತಂಡಗಳು. ಹೀಗಾಗಿ ಎರಡೂ ಕಡೆಯವರಿಗೆ ಮರುಜೀವ ಪಡೆದುಕೊಳ್ಳಲು ಜಯ ಅನಿವಾರ್ಯವಾಗಿದೆ.

ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಣಿಯುವ ಮೂಲಕ ಸನ್‌ರೈಸರ್ಸ್ ತಂಡದ ಪ್ಲೇ ಆಫ್‌ ಹಂತಕ್ಕೇರುವ ಕನಸು ಕಮರಿ ಹೋಗಿದೆ. ಕೊನೆಯ ಹಂತದಲ್ಲಿ ಮುಗ್ಗರಿಸುವುದು ಪಂಜಾಬ್‌ ಕಿಂಗ್ಸ್‌ಗೆ ಪರಿಪಾಠದಂತಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ತಂಡದ ಮುಂದಿರುವ ಬಹುದೊಡ್ಡ ಸವಾಲು. ಭಾರತದ ವಿದೇಶದ ಅತ್ಯುತ್ತಮ ಆಟಗಾರರನ್ನು ಹೊಂದಿದ್ದರೂ ತಂಡಕ್ಕೆ ಸೋಲಿನ ಸುಳಿಯಲ್ಲಿ ಸಿಲುಕುವುದು ಸಾಮಾನ್ಯವಾಗಿದೆ.

ನಾಯಕರು ಮತ್ತು ಕೋಚ್‌ಗಳನ್ನು ಪದೇ ಪದೇ ಬದಲಿಸುತ್ತಿರುವುದರಿಂದ ತಂಡಕ್ಕೆ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಕೂಡ ಕೇಳಿಬಂದಿದೆ. ತಂಡ ಕಣಕ್ಕೆ ಇಳಿಸುವ 11 ಆಟಗಾರರ ಆಯ್ಕೆಯಲ್ಲೂ ಎಡವುತ್ತಿದೆ ಎಂದು ಮಾಜಿ ಪೋಷಕ ವೀರೇಂದ್ರ ಸೆಹ್ವಾಗ್ ಅವರೇ ಹೇಳಿಕೊಂಡಿದ್ದಾರೆ. ಐಪಿಎಲ್‌ನ ಅತ್ಯುತ್ತಮ ಆರಂಭಿಕ ಜೋಡಿಗಳಲ್ಲಿ ಒಂದು ಎಂದು ಹೇಳಲಾಗುವ ಕೆ.ಎಲ್‌.ರಾಹುಲ್ ಮತ್ತು ಮಯಂಕ್ ಅಗರವಾಲ್ ಉತ್ತಮ ಲಯದಲ್ಲಿದ್ದಾರೆ. ರಾಜಸ್ಥಾನ್ ಎದುರಿನ ಕಳೆದ ಪಂದ್ಯದಲ್ಲಿ ಇವರಿಬ್ಬರು 71 ಎಸೆತಗಳಲ್ಲಿ 120 ರನ್ ಕಲೆಹಾಕಿದ್ದರು.

41ರ ಹರೆಯದಲ್ಲೂ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಕ್ರಿಸ್ ಗೇಲ್ ಅವರನ್ನು ಹಿಂದಿನ ಪಂದ್ಯದಲ್ಲಿ ಅಂತಿಮ 11ರಿಂದ ಕೈಬಿಡಲಾಗಿತ್ತು. ಟೂರ್ನಿಯ ಮೊದಲ ಹಂತದಲ್ಲಿ ಅಮೋಘ ಆಟವಾಡಿದ ನಿಕೋಲಸ್ ಪೂರನ್ ಹಿಂದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ಭರವಸೆ ಮೂಡಿಸಿದ್ದಾರೆ. ಮೊಹಮ್ಮದ್ ಶಮಿ ಅವರನ್ನು ಒಳಗೊಂಡ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ.

ಮುಂದಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿ ಈ ಬಾರಿಯ ಟೂರ್ನಿಗೆ ವಿದಾಯ ಹೇಳುವುದಷ್ಟೇ ಸನ್‌ರೈಸರ್ಸ್‌ಗೆ ಉಳಿದಿರುವ ದಾರಿ. ಕೇನ್ ವಿಲಿಯಮ್ಸನ್‌, ಮನೀಷ್ ಪಾಂಡೆ, ವೃದ್ಧಿಮಾನ್ ಸಹಾ, ರಶೀದ್ ಖಾನ್, ಖಲೀಲ್ ಅಹಮ್ಮದ್, ಭುವನೇಶ್ವರ್ ಕುಮಾರ್ ಮುಂತಾದವರು ಈ ಕನಸು ನನಸು ಮಾಡಲು ಸಮರ್ಥರಾಗುವರೇ ಎಂಬುದನ್ನು ಕಾದುನೋಡಬೇಕು.

ಡೆಲ್ಲಿ–ರಾಜಸ್ಥಾನ ಕದನ

ಶನಿವಾರ ಎರಡು ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಸೆಣಸಲಿವೆ. ರಿಷಭ್ ಪಂತ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಹಂತದಲ್ಲಿ ಅಮೋಘ ಸಾಮರ್ಥ್ಯ ತೋರಿತ್ತು. ಎರಡನೇ ಹಂತದ ಮೊದಲ ಪಂದ್ಯದಲ್ಲೂ ಅದೇ ಲಯದಲ್ಲಿ ಆಡಿ ಎಂಟು ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.

ಮೊದಲ ಹಂತದಲ್ಲಿ ಸೋಲು–ಗಲುವಿನ ಹಾವು–ಏಣಿ ಆಟವಾಡಿದ್ದ ರಾಜಸ್ಥಾನ್ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಎರಡು ರನ್‌ಗಳ ಜಯ ಗಳಿಸುವ ಮೂಲಕ ಭರವಸೆಯ ಪಥದಲ್ಲಿದೆ. ಡೆಲ್ಲಿ ವಿರುದ್ಧ ಜಯ ಗಳಿಸಿದರೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲಿದ್ದು ಪ್ಲೇ ಆಫ್‌ ಹಂತಕ್ಕೇರುವ ಹಾದಿ ಸುಗಮವಾಗಲಿದೆ.

ಮುಖಾಮುಖಿ

ಪಂಜಾಬ್‌ – ಹೈದರಾಬಾದ್

ಪಂದ್ಯಗಳು 17

ಹೈದರಾಬಾದ್ ಜಯ 5

ಪಂಜಾಬ್ ಗೆಲುವು 12

ಗರಿಷ್ಠ ಮೊತ್ತ

ಹೈದರಾಬಾದ್ ಜಯ 212

ಪಂಜಾಬ್ ಗೆಲುವು 211

ಕನಿಷ್ಠ ಮೊತ್ತ

ಪಂಜಾಬ್ ಗೆಲುವು 119

ಹೈದರಾಬಾದ್ ಜಯ 114

ಡೆಲ್ಲಿ – ರಾಜಸ್ಥಾನ

ಪಂದ್ಯಗಳು 23

ರಾಜಸ್ಥಾನ ಜಯ 12

ಡೆಲ್ಲಿ ಗೆಲುವು 11

ಮುಖಾಮುಖಿಯಲ್ಲಿ ಗರಿಷ್ಠ ರನ್

ರಾಜಸ್ಥಾನ 201

ಡೆಲ್ಲಿ 196

ಕನಿಷ್ಠ ಮೊತ್ತ

ರಾಜಸ್ಥಾನ 115

ಡೆಲ್ಲಿ 60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT