ಅಮ್ಮನ ಮಾತೇ ಸಾಧನೆಗೆ ಸ್ಫೂರ್ತಿ

ಶುಕ್ರವಾರ, ಮಾರ್ಚ್ 22, 2019
21 °C
ಸೈಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌ ಟೂರ್ನಿಯ ಪ್ರಶಸ್ತಿ ರೂವಾರಿ ರೋಹನ್‌ ಕದಂ ಮನದಾಳ

ಅಮ್ಮನ ಮಾತೇ ಸಾಧನೆಗೆ ಸ್ಫೂರ್ತಿ

Published:
Updated:
Prajavani

ಹುಬ್ಬಳ್ಳಿ: ‘ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡುವುದನ್ನು ನೋಡಬೇಕು ಎಂಬು ದೇ ನನ್ನ ಜೀವನದ ಆಸೆ ಎಂದು ಅಮ್ಮ ಪದೇ ಪದೇ ಹೇಳುತ್ತಿದ್ದರು. ಅವರ ಮಾತುಗಳೇ ನನಗೆ ದೊಡ್ಡ ಸ್ಫೂರ್ತಿ...’ –ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ‌ಟೂರ್ನಿಯಲ್ಲಿ ಕರ್ನಾಟಕ ತಂಡ ಚೊಚ್ಚಲ ಪ್ರಶಸ್ತಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ ಬೆಳಗಾವಿಯ ರೋಹನ್‌ ಕದಂ ಅವರ ಮನದ ಮಾತುಗಳು ಇವು.

ಮೊದಲ ಬಾರಿಗೆ ರಾಜ್ಯ ಟ್ವೆಂಟಿ–20 ತಂಡದಲ್ಲಿ ಸ್ಥಾನ ಪಡೆದ ಅವರು ಟೂರ್ನಿಯಲ್ಲಿ ಒಟ್ಟು ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದ್ದಾರೆ. 12 ಪಂದ್ಯಗಳಿಂದ ಒಟ್ಟು 536 ರನ್ ಗಳಿಸಿದ್ದಾರೆ.

ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ 12 ವರ್ಷದವರಿದ್ದಾಗ ವೃತ್ತಿಪರ ತರಬೇತಿ ಆರಂಭಿಸಿದ ರೋಹನ್‌ ಅವಕಾಶ ಅರಸಿ 16ನೇ ವಯಸ್ಸಿನಲ್ಲಿ ಬೆಂಗಳೂರಿಗೆ ತೆರಳಿದರು. ಮೊದಲ ಬಾರಿಗೆ ರಾಜ್ಯ ತಂಡದಲ್ಲಿ ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಂಡರು.

ಚೊಚ್ಚಲ ಪ್ರಶಸ್ತಿಯ ಖುಷಿಯನ್ನು ಸಂಭ್ರಮದಿಂದಲೇ ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ರೋಹನ್‌ ‘ದೇಶಿ ಟೂರ್ನಿಯಲ್ಲಿ ನಮ್ಮ ತಂಡ ಬಲಿಷ್ಠವಾಗಿದೆ. ಉಳಿದ ಎಲ್ಲ ತಂಡಗಳ ಕಣ್ಣು ಕರ್ನಾಟಕದ ಮೇಲಿದೆ. ತಂಡದಲ್ಲಿ ಸ್ಥಾನ ಪಡೆಯುವುದೇ ಸಂತಸದ ವಿಷಯ. ಅದರಲ್ಲೂ ಚಾಂಪಿಯನ್ ತಂಡದ ಪಾಲುದಾರನಾಗಿರುವುದಕ್ಕೆ ಅತೀವ ಹೆಮ್ಮೆ ಎನಿಸುತ್ತಿದೆ. ಆದರೆ ಈ ಸಂತೋಷ ಹಂಚಿಕೊ ಳ್ಳಲು ಅಮ್ಮ ಇಲ್ಲ ಎನ್ನುವ ನೋವು ಕಾಡುತ್ತಿದೆ’ ಎಂದರು. ರೋಹನ್ ತಾಯಿ ಜಯಶ್ರೀ ಕದಂ ಕೆಲ ತಿಂಗಳ ಹಿಂದೆ ನಿಧನರಾಗಿದ್ದಾರೆ.

ಇದನ್ನು ನೆನೆದ ಅವರು ‘ಅಪ್ಪ ಪ್ರಮೋದ ಕದಂ ಹಾಗೂ ಅಮ್ಮನ ಪ್ರೋತ್ಸಾಹದ ಮಾತು ಕೇಳಿ ಬೆಂಗಳೂರಿಗೆ ಹೋದೆ. ಇಲ್ಲದಿದ್ದರೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ಇದರ ಎಲ್ಲ ಶ್ರೇಯ ಪೋಷಕರಿಗೆ ಸಲ್ಲಬೇಕು’ ಎಂದರು.

ಎಡಗೈ ಬ್ಯಾಟ್ಸ್‌ಮನ್ ರೋಹನ್‌ 2017ರಲ್ಲಿ ಹಿಂದೆ ರಾಜ್ಯ ತಂಡದ ಪರ ಲಿಸ್ಟ್‌ ‘ಎ’ ಪಂದ್ಯವಾಡಿದ್ದರು. ಆ ಬಳಿಕ ಅವರಿಗೆ ಒಮ್ಮೆಯೂ ಅವಕಾಶ ಸಿಕ್ಕಿರಲಿಲ್ಲ.

‘ಕಾಯುವ’ ದಿನಗಳನ್ನು ನೆನಪಿಸಿಕೊಂಡ ಕುಂದಾನಗರಿಯ ಪ್ರತಿಭೆ ‘ಅವಕಾಶ ಸಿಗದಿದ್ದಾಗ ಹತಾಶನಾಗಿರಲಿಲ್ಲ. ಪ್ರಯತ್ನ ಹಾಗೂ ಕಠಿಣ ಪರಿಶ್ರಮ ನಿರಂತರವಾಗಿತ್ತು. ಆಡಲು ಇಂದೇ ಅವಕಾಶ ಸಿಕ್ಕರೂ ಸಿದ್ಧನಿರಬೇಕು ಎಂದು ಮನಸ್ಸು ಗಟ್ಟಿಮಾಡಿಕೊಂಡಿದ್ದೆ. ಎರಡು ವರ್ಷಗಳ ಬಳಿಕ ರಾಜ್ಯ ಟ್ವೆಂಟಿ–20 ತಂಡದಲ್ಲಿ ಮೊದಲ ಸಲ ಅವಕಾಶ ಲಭಿಸಿತು’ ಎಂದರು.

‘ಐಪಿಎಲ್‌ನಲ್ಲಿ ಆಡುವ ಆಸೆಯಿದೆ. ಆದರೆ, ಈ ವರ್ಷದ ಟೂರ್ನಿಗೆ ಈಗಾಗಲೇ ಹರಾಜು ಪ್ರಕ್ರಿಯೆ ಮುಗಿದಿದೆ. ಅದೃಷ್ಟವಿದ್ದರೆ ಹೇಗಾದರೂ ಅವಕಾಶ ಸಿಗುತ್ತದೆ. ಇದಕ್ಕಾಗಿ ಈಗಾಗಲೇ ತಯಾರಿ ಆರಂಭಿಸಿದ್ದೇನೆ’ ಎಂದು ಮನದಾಸೆ ಹಂಚಿಕೊಂಡರು.

*
ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಚಾಂಪಿಯನ್‌ ಆದ ಕರ್ನಾಟಕ, ಮೊದಲ ಅವಕಾಶ ಬಳಸಿಕೊಂಡ ರೋಹನ್‌ ಇಬ್ಬರ ಸಾಧನೆಯೂ ಹೆಮ್ಮೆಪಡುವಂಥದ್ದು.
-ಪ್ರಮೋದ ಕದಂ, ರೋಹನ್ ತಂದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !