ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್: ವಿರಾಟ್ ಪಡೆಗೆ ಛಲದಾಟದ ಅಫ್ಗನ್ ಸವಾಲು

ಮೊದಲ ಗೆಲುವಿಗೆ ಹಾತೊರೆದಿರುವ ಭಾರತ ತಂಡ; ಅಶ್ವಿನ್‌ಗೆ ಸಿಗುವುದೇ ಅವಕಾಶ?
Last Updated 3 ನವೆಂಬರ್ 2021, 10:07 IST
ಅಕ್ಷರ ಗಾತ್ರ

ಅಬುಧಾಬಿ: ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಬುಧವಾರ ನಡೆಯಲಿರುವ ಅಫ್ಗಾನಿಸ್ತಾನ ಎದುರಿನ ಪಂದ್ಯದಲ್ಲಿ ಆಡುವ ಅವಕಾಶ ಲಭಿಸುವುದೇ?

ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿರುವ ಭಾರತ ತಂಡ ಉಳಿದಿರುವ ಮೂರು ಪಂದ್ಯಗಳಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಜಯಿಸುವ ಒತ್ತಡದಲ್ಲಿದೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಎದುರು ಸೋತ ಪಂದ್ಯಗಳಲ್ಲಿ ಅಶ್ವಿನ್‌ಗೆ ಕಣಕ್ಕಿಳಿಯುವ ಅವಕಾಶ ಕೊಟ್ಟಿರಲಿಲ್ಲ. ಯುವ ಸ್ಪಿನ್ನರ್ ವರುಣ್ ಚಕ್ರವರ್ತಿ ಮೇಲೆ ಇಟ್ಟ ನಿರೀಕ್ಷೆಯೂ ಹುಸಿಯಾಯಿತು.

ಆದ್ದರಿಂದ ಅಶ್ವಿನ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಆದರೆ, ಯುವ ಆಟಗಾರ ರಾಹುಲ್ ಚಾಹರ್ ಅವರಿಗೆ ಅವಕಾಶ ಕೊಟ್ಟರೆ ಅಶ್ವಿನ್‌ ಮತ್ತೆ ಬೆಂಚ್‌ ಕಾಯಬೇಕಾಗಬಹುದು. ಕಿವೀಸ್ ಎದುರಿನ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿಯೂ ಕೆಲವು ಬದಲಾವಣೆಗಳಾಗಿದ್ದವು. ರಾಹುಲ್ ಜೊತೆಗೆ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಿದ್ದರು. ರೋಹಿತ್ ಮೂರು ಮತ್ತು ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ, ನಿರೀಕ್ಷಿತ ಫಲ ಸಿಕ್ಕಿರಲಿಲ್ಲ. ರವೀಂದ್ರ ಜಡೇಜ ಬಿಟ್ಟರೆ ಉಳಿದವರೆಲ್ಲರ ಕಳಪೆ ಬ್ಯಾಟಿಂಗ್‌ನಿಂದಾಗಿ ಸಾಧಾರಣ ಮೊತ್ತ ಪೇರಿಸಿತು.

ಪಾಕ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಪಡೆ ವಿಫಲವಾಗಿತ್ತು. ಅದಕ್ಕಾಗಿ ಭುವನೇಶ್ವರ್ ಕುಮಾರ್ ಬದಲು ಶಾರ್ದೂಲ್ ಠಾಕೂರ್ ಎರಡನೇ ಪಂದ್ಯದಲ್ಲಿ ಆಡಿದ್ದರು. ಆದರೆ ಜಸ್‌ಪ್ರೀತ್ ಬೂಮ್ರಾ ಬಿಟ್ಟರೆ, ಉಳಿದವರು ವಿಕೆಟ್ ಗಳಿಸಿರಲಿಲ್ಲ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಅವಕಾಶ ಸಿಗುವುದೇ ನೋಡಬೇಕು.

ಆದರೆ, ಅಫ್ಗನ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಸ್ಕಾಟ್ಲೆಂಡ್ ಮತ್ತು ನಮಿಬಿಯಾ ವಿರುದ್ಧ ಗೆದ್ದಿರುವ ಮೊಹಮ್ಮದ್ ನಬಿ ಬಳಗವು, ಪಾಕ್‌ ಎದುರು ಸೋತಿದ್ದರೂ ದಿಟ್ಟ ಆಟವಾಡಿತ್ತು. ರಶೀದ್ ಖಾನ್ ಅವರಂತಹ ಅನುಭವಿ ಸ್ಪಿನ್ನರ್‌ ಇರುವ ಬೌಲಿಂಗ್ ಪಡೆಯು ಬ್ಯಾಟ್ಸ್‌ಮನ್‌ಗಳಿಗೆ ಒತ್ತಡಕ್ಕೆ ತಳ್ಳುವ ಸಾಮರ್ಥ್ಯ ಹೊಂದಿದೆ.

ಅಫ್ಗನ್ ತಂಡಕ್ಕೆ ಇನ್ನೆರಡು ಪಂದ್ಯಗಳು ಉಳಿದಿವೆ. ತಂಡವು ಭಾರತದ ಎದುರು ಸೋತು, ನ್ಯೂಜಿಲೆಂಡ್ ಎದುರು ಗೆದ್ದರೆ ವಿರಾಟ್ ಬಳಗಕ್ಕೆ ಸೆಮಿಫೈನಲ್‌ ಅವಕಾಶ ಸಿಗುವ ಸಾಧ್ಯತೆ ಇದೆ. ಅಲ್ಲಿಯೂ ಭಾರತವು ಉತ್ತಮವಾದ ನೆಟ್‌ ರನ್‌ರೇಟ್ ಹೊಂದಿರಬೇಕು.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ರಾಹುಲ್ ಚಾಹರ್, ವರುಣ್ ಚಕ್ರವರ್ತಿ, ಆರ್. ಅಶ್ವಿನ್.

ಅಫ್ಗಾನಿಸ್ತಾನ: ಮೊಹಮ್ಮದ್ ನಬಿ (ನಾಯಕ), ಹಜರತ್ ಉಲ್ಲಾ ಝಝೈ, ಅಹಮದ್ ಶೇಹಜಾದ್, ಗುಲ್ಬದೀನ್ ನೈಬ್, ನವೀನ್ ಉಲ್ ಹಕ್, ರಶೀದ್ ಖಾಮ್, ಹಮೀದ್ ಹಸನ್, ರೆಹಮಾನುಲ್ಲಾ ಗುರ್ಬಾಜ್, ನಜೀಬುಲ್ಲಾ ಜದ್ರಾನ್, ಕರೀಂ ಜನತ್, ಮುಜೀಬ್ ಉರ್ ರೆಹಮಾನ್, ಹಷ್ಮತ್‌ ಉಲ್ಲಾ ಶಹೀದಿ, ಫರೀದ್ ಅಹಮದ್, ಉಸ್ಮಾನ್ ಘಣಿ.

ಪಂದ್ಯ ಆಂರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT