ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 ವಿಶ್ವಕಪ್ | ಭಾರತ–ಪಾಕ್ ಮುಖಾಮುಖಿ ಇಂದು; ವಿರಾಟ್, ಬೂಮ್ರಾ ಮೇಲೆ ಕಣ್ಣು

ಅಮೆರಿಕದಲ್ಲಿ ಬದ್ಧ ಪ್ರತಿಸ್ಪರ್ಧಿಗಳ ಹಣಾಹಣಿ
Published 9 ಜೂನ್ 2024, 0:54 IST
Last Updated 9 ಜೂನ್ 2024, 0:54 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಅಮೆರಿಕದ ಅಂಗಳದಲ್ಲಿ ಭಾನುವಾರ ಕ್ರಿಕೆಟ್ ಅಂಗಳದ ಕಟ್ಟಾ ಎದುರಾಳಿಗಳ ಹಣಾಹಣಿ ನಡೆಯಲಿದೆ. 

ನಾಸೌ ಕೌಂಟಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ‘ವಾರಾಂತ್ಯ ರಜೆ’ಯಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹೈವೋಲ್ಟೇಜ್ ಪಂದ್ಯವೆಂದೇ ಇದು ಬಿಂಬಿತವಾಗಿದೆ. 

ಕ್ರಿಕೆಟ್ ಅಂಗಳದ ಎರಡು ಹಳೆಯ  ಪ್ರತಿಸ್ಪರ್ಧಿಗಳ ಪಂದ್ಯವೆಂದರೆ ಇಂದಿಗೂ ಕುತೂಹಲದ ಕಣಜವೇ ಆಗಿದೆ. ಉಭಯ ತಂಡಗಳು ಈ ಹಿಂದೆ ಪೈಪೋಟಿಯಾದಾಗಿನ ರೋಚಕ ಕತೆಗಳೂ ಸಾಕಷ್ಟಿವೆ.  ಆದರೆ ಇಲ್ಲಿ ತಮ್ಮ ಹಳೆಯ ಸಾಧನೆಗಳ ವಿಶ್ವಾಸದಲ್ಲಿಯೇ ಕಣಕ್ಕಿಳಿಯುವುದು ಸೂಕ್ತವಲ್ಲವೆಂಬುದು ಈಗಾಗಲೇ ಸಾಬೀತಾಗಿದೆ. ಇಲ್ಲಿಯ ‘ಹೊಸ ಪಿಚ್‌’ಗಳ ಆಟ ಬಲ್ಲವರು ಕಡಿಮೆ.

ಎ ಗುಂಪಿನಲ್ಲಿ ಪಾಕಿಸ್ತಾನ ತಂಡವು ಆತಿಥೇಯ ಅಮೆರಿಕದ ಎದುರು ಆಘಾತ ಅನುಭವಿಸಿದೆ. ಅದೇ ರೋಹಿತ್ ಶರ್ಮಾ ಬಳಗವು ತನ್ನ ಮೊದಲಪಂದ್ಯದಲ್ಲಿ ಐರ್ಲೆಂಡ್ ಎದುರು ಜಯಿಸಿತ್ತು. 

ಪಂದ್ಯದ ಮುನ್ನಾದಿನದ ನೆಟ್ಸ್‌ ಅಭ್ಯಾಸದಲ್ಲಿ ಭಾರತ ತಂಡದ ಮೂವರು ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಅವರು ಹೆಚ್ಚು ಹೊತ್ತು ಅಭ್ಯಾಸ ನಡೆಸಿದರು.  ಹೆಚ್ಚುವರಿ ಬ್ಯಾಟರ್‌ ಆಗಿ ಯಶಸ್ವಿ ಜೈಸ್ವಾಲ್ ಅವರನ್ನು ಆಡಿಸುವ ಸಾಧ್ಯತೆ ಇದೆ. ಅದಕ್ಕಾಗಿ ಶಿವಂ ದುಬೆ ಅವರನ್ನು ಕೈಬಿಡಬಹುದು. ಇದರಿಂದಾಗಿ ರೋಹಿತ್ ಶರ್ಮಾ ಅವರು ಜೈಸ್ವಾಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿ, ವಿರಾಟ್ ಕೊಹ್ಲಿ  ಮೂರನೇ ಕ್ರಮಾಂಕದಲ್ಲಿ ಆಡಬಹುದು. ನಂತರದ ಕ್ರಮಾಂಕಗಳಲ್ಲಿ ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಆಡುವುದು ಬಹುತೇಕ ಖಚಿತ. 

ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ ಅವರು ಪಂದ್ಯದ ಜಯವನ್ನು ನಮ್ಮಿಂದ ಕಸಿದು ತಮ್ಮ ತಂಡಕ್ಕೆ ನೀಡುವ ಸಮರ್ಥರು.
ಫವಾದ್ ಆಲಂ, ಪಾಕ್ ತಂಡದ ಆಟಗಾರ

ಐರ್ಲೆಂಡ್ ಎದುರಿನ ಪಂದ್ಯದಲ್ಲಿ ಪಾಂಡ್ಯ ಬೌಲಿಂಗ್‌ನಲ್ಲಿಯೂ ಮಿಂಚಿದ್ದರು. ಅದರಿಂದಾಗಿ ಇನ್ನುಳಿದ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ ಹಾಗೂ ಅಕ್ಷರ್ ಪಟೇಲ್ ಅವರಿಗೂ ಈ ಪಂದ್ಯದಲ್ಲಿ ಅವಕಾಶ ಸಿಗಬಹುದು. ಇದರಿಂದಾಗಿ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಈ ಸಂಯೋಜನೆಯಿಂದಾಗಿ 8ನೇ ಕ್ರಮಾಂಕದವರೆಗೂ ತಂಡದ ಬ್ಯಾಟಿಂಗ್‌ ಬಲ ಹೆಚ್ಚಲಿದೆ. ಆದರೂ ಈ ಪಿಚ್‌ಗಳಲ್ಲಿ ಈ ಸಾಮರ್ಥ್ಯ ಸಾಲದೇನೋ?

ಪಾಕ್ ತಂಡದ ಸಂಯೋಜನೆಯಲ್ಲಿ ಅಂತಹ ಗಂಭೀರ ಚಿಂತೆಯೇನಿಲ್ಲ. ವೇಗದ ಬೌಲಿಂಗ್ ಪಡೆ ಸಶಕ್ತವಾಗಿದೆ. ನಾಯಕ ಬಾಬರ್ ಆಜಂ ಹಾಗೂ ಶಾದಾಬ್ ಖಾನ್ ಉತ್ತಮ ಲಯದಲ್ಲಿದ್ದಾರೆ. ಇನ್ನುಳಿದ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಾದ ಒತ್ತಡವಿದೆ. ನಸೀಂ  ಶಾ, ಶಹೀನ್ ಶಹಾ ಆಫ್ರಿದಿ ಹಾಗೂ ಹ್ಯಾರಿಸ್ ರವೂಫ್ ಅವರ ಮುಂದೆ ವಿರಾಟ್, ರೋಹಿತ್ ಅವರ ಅಬ್ಬರಕ್ಕೆ ಕಡಿವಾಣ ಹಾಕುವ ಮಹತ್ವದ ಸವಾಲು ಇದೆ.

ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಪಾಕ್ ಎದುರಿನ ಪಂದ್ಯಗಳಲ್ಲಿ ಭಾರತ ಮೇಲುಗೈ ಸಾಧಿಸಿದ್ದೇ ಹೆಚ್ಚು. ಆ ಪರಂಪರೆಯನ್ನು ಅಮೆರಿಕದ ನೆಲದಲ್ಲಿಯೂ ಮುಂದುವರಿಸುವ ಛಲದಲ್ಲಿ ರೋಹಿತ್ ಬಳಗವಿದೆ.

ಬಲಾಬಲ (ಟಿ20 ಕ್ರಿಕೆಟ್)

ಪಂದ್ಯಗಳು;12

ಭಾರತ ಜಯ;8

ಪಾಕ್ ಜಯ;3

ಟೈ;1

ಬಲಾಬಲ (ಟಿ20 ವಿಶ್ವಕಪ್) 

ಪಂದ್ಯ: 7

ಭಾರತ ಜಯ;5

ಪಾಕ್ ಜಯ;1

ಟೈ;1

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯುಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್. 

ಪಾಕಿಸ್ತಾನ: ಬಾಬರ್ ಆಜಂ (ನಾಯಕ), ಅಬ್ರಾರ್ ಅಹಮದ್, ಆಜಂ ಖಾನ್, ಫಕಾರ್ ಜಮಾನ್, ಹ್ಯಾರಿಸ್ ರವೂಫ್, ಇಫ್ರಿಕಾರ್ ಅಹಮದ್, ಇಮಾದ್ ವಾಸೀಂ, ಮೊಹಮ್ಮದ್ ಅಬ್ಬಾಸ್ ಆಫ್ರಿದಿ, ಮೊಹಮ್ಮದ್ ಆಮಿರ್, ಮೊಹಮ್ಮದ್ ರಿಜ್ವಾನ್, ನಸೀಂ ಶಹಾ, ಸೈಮ್ ಆಯೂಬ್, ಶದಾಬ್ ಖಾನ್, ಶಹೀನ್ ಶಾಹ ಆಫ್ರಿದಿ, ಉಸ್ಮಾನ್ ಖಾನ್. 

ಪಂದ್ಯ ಆರಂಭ: ರಾತ್ರಿ 8ರಿಂದ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಡಿ ಸ್ಪೋರ್ಟ್ಸ್, ಹಾಟ್‌ಸ್ಟಾರ್ ಆ್ಯಪ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT