ಶನಿವಾರ, ಏಪ್ರಿಲ್ 1, 2023
29 °C

T20 WC: ಬಾಂಗ್ಲಾದೇಶಕ್ಕೆ ಸತತ 4ನೇ ಸೋಲು; ಸೆಮಿಫೈನಲ್ ಸನಿಹ ದಕ್ಷಿಣ ಆಫ್ರಿಕಾ

ಪಿಟಿಐ Updated:

ಅಕ್ಷರ ಗಾತ್ರ : | |

ಅಬುಧಾಬಿ: ‘ವೇಗದ ಜೋಡಿ’ ಕಗಿಸೊ ರಬಾಡ ಮತ್ತು ಎನ್ರಿಚ್ ನಾರ್ಕಿಯಾ ಅವರ ದಾಳಿಗೆ ಬಾಂಗ್ಲಾದೇಶ ತಂಡವು ತಲೆಬಾಗಿತು.

ಮಂಗಳವಾರ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ದಕ್ಷಿಣ ಆಫ್ರಿಕಾ ತಂಡವು 6 ವಿಕೆಟ್‌ಗಳಿಂದ ಬಾಂಗ್ಲಾ ಎದುರು ಜಯಿಸಿತು. ಸೂಪರ್ 12 ಹಂತದಲ್ಲಿ ನಾಲ್ಕು ಪಂದ್ಯಗಳನ್ನಾಡಿರುವ ದಕ್ಷಿಣ ಆಫ್ರಿಕಾಕ್ಕೆ ಇದು ಮೂರನೇ ಜಯ. ಒಟ್ಟು ಆರು ಅಂಕ ಗಳಿಸಿರುವ ತಂಡವು ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದೆ.

ತೆಂಬಾ ಬವುಮಾ ನಾಯಕತ್ವದ ಪಡೆಯು ತನ್ನ ಕೊನೆಯ ಪಂದ್ಯದಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್ ತಂಡವನ್ನು ಇದೇ 6ರಂದು ಎದುರಿಸಲಿದೆ.

ಬಾಂಗ್ಲಾ ಎದುರಿನ ಪಂದ್ಯದಲ್ಲಿ ಟಾಸ್ ಗೆದ್ದ ಬವುಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ತಮ್ಮ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡ ಬೌಲಿಂಗ್ ಪಡೆಯು ಬಾಂಗ್ಲಾ ತಂಡವನ್ನು 84 ರನ್‌ಗಳಿಗೆ ಕಟ್ಟಿಹಾಕಿತು. ‌ಬವುಮಾ ಪಡೆಯು 13.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 86 ರನ್ ಗಳಿಸಿ ಜಯಿಸಿತು.

ಬಾಂಗ್ಲಾದ ಇನಿಂಗ್ಸ್‌ನ ಆರಂಭದಲ್ಲಿಯೇ ರಬಾಡ ಪೆಟ್ಟುಕೊಟ್ಟರು. ನಾಲ್ಕನೇ ಓವರ್‌ನಲ್ಲಿ ನೈಮ್ ಮತ್ತು ಸೌಮ್ಯ ಸರ್ಕಾರ್ ವಿಕೆಟ್‌ಗಳನ್ನು ಕಿತ್ತ ಅವರು, ಆರನೇ ಓವರ್‌ನಲ್ಲಿ ಮುಷ್ಫಿಕುರ್ ರಹೀಮ್‌ಗೂ ಡಗ್‌ಔಟ್‌ ದಾರಿ ತೋರಿಸಿದರು.

ಇನ್ನೊಂದೆಡೆ ಎನ್ರಿಚ್ ನಾರ್ಕಿಯಾ (8ಕ್ಕೆ3) ಉತ್ತಮ ಬೌಲಿಂಗ್ ಮಾಡುವ ಮೂಲಕ ಬಾಂಗ್ಲಾದ ಮಧ್ಯಮಕ್ರಮಾಂಕವನ್ನು ಕಾಡಿದರು. ಬಾಂಗ್ಲಾದ ಆರಂಭಿಕ ಬ್ಯಾಟ್ಸ್‌ಮನ್ ಲಿಟನ್ ದಾಸ್ (24; 36ಎಸೆತ) ಮತ್ತು ಕೊನೆಯ ಹಂತದಲ್ಲಿ ಮೆಹದಿ ಹಸನ್ (27; 25ಎಸೆತ) ಅವರಿಬ್ಬರು ಮಾತ್ರ ವೈಯಕ್ತಿಕವಾಗಿ 20ಕ್ಕಿಂತ ಹೆಚ್ಚು ರನ್ ಗಳಿಸಿದರು.

19ನೇ  ಓವರ್‌ನಲ್ಲಿ ನಸುಮ್ ಅಹಮದ್ ಅವರು ನಾರ್ಕಿಯಾ ಬೌಲಿಂಗ್‌ನಲ್ಲಿ ಹಿಟ್‌ವಿಕೆಟ್ ಆಗುವ ಮೂಲಕ ಬಾಂಗ್ಲಾ ಇನಿಂಗ್ಸ್‌ಗೆ ತೆರೆ ಬಿದ್ದಿತು. 

ಆದರೆ, ದಕ್ಷಿಣ ಆಫ್ರಿಕಾ ತಂಡವು ಈ ಅಲ್ಪಮೊತ್ತದ ಗುರಿಯನ್ನು ಸಾಧಿಸಲು ತುಸು ಬೆವರು ಹರಿಸಬೇಕಾಯಿತು. ತಸ್ಕೀನ್ ಅಹಮದ್ (18ಕ್ಕೆ2), ಮೆಹದಿ ಹಸನ್ (19ಕ್ಕೆ1) ಮತ್ತು ನಸುಮ್ ಅಹಮದ್ (22ಕ್ಕೆ1) ಅವರ ಉತ್ತಮ ಬೌಲಿಂಗ್‌ನಿಂದಾಗಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕಾಯಿತು. ತೆಂಬಾ (31; 28ಎಸೆತ) ತಂಡವನ್ನು ಗೆಲುವಿನ ಗುರಿ ಮುಟ್ಟಿಸುವಲ್ಲಿ ಸಫಲರಾದರು.

ಇವನ್ನೂ ಓದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು