ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 World Cup: ಶ್ರೀಲಂಕೆಗೆ ದಕ್ಷಿಣ ಆಫ್ರಿಕಾ ‘ಪವರ್‌ ಪ್ಲೇ’ ಸವಾಲು

ಏಡನ್ ಮರ್ಕರಂ ಪಡೆ–ಹಸರಂಗಾ ಬಳಗ ಮುಖಾಮುಖಿ ಇಂದು
Published 2 ಜೂನ್ 2024, 16:23 IST
Last Updated 2 ಜೂನ್ 2024, 16:23 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್‌ನಿಂದ ಬೌಲರ್‌ಗಳ ನಿದ್ದೆಗೆಡಿಸಿದ ಬ್ಯಾಟರ್‌ಗಳಿರುವ ದಕ್ಷಿಣ ಆಫ್ರಿಕಾ ತಂಡವನ್ನು ಸೋಮವಾರ ನಡೆಯುವ ಪಂದ್ಯದಲ್ಲಿ ಶ್ರೀಲಂಕಾ ಎದುರಿಸಲಿದೆ. 

ನಾಸೌ ಕೌಂಟಿ ಕ್ಲಬ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಡಿ ಗುಂಪಿನ ಪಂದ್ಯವು ಲಂಕಾ ಬೌಲರ್‌ಗಳಿಗೆ ಕಠಿಣ ಪರೀಕ್ಷೆಯೊಡ್ಡುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ತಂಡದ ನಾಯಕ ಏಡನ್ ಮರ್ಕರಂ, ವಿಕೆಟ್‌ಕೀಪರ್–ಬ್ಯಾಟರ್ ಹೆನ್ರಿಚ್ ಕ್ಲಾಸೆನ್, ಕ್ವಿಂಟನ್ ಡಿಕಾಕ್, ಡೇವಿಡ್ ಮಿಲ್ಲರ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಅವರನ್ನು ಕಟ್ಟಿಹಾಕುವುದು ಸುಲಭದ ಮಾತಲ್ಲ. ‌

ಈಚೆಗೆ ಮುಗಿದ ಐಪಿಎಲ್‌ನಲ್ಲಿ ಕ್ಲಾಸೆನ್ 16 ಪಂದ್ಯಗಳಿಂದ 471 ರನ್‌ಗಳನ್ನು 171ರ ಸ್ಟ್ರೈಕ್‌ರೇಟ್‌ನಲ್ಲಿ ಗಳಿಸಿದ್ದರು. ಅವರು ಪ್ರತಿನಿಧಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಫೈನಲ್‌ ಪ್ರವೇಶಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿದ್ದ ಸ್ಟಬ್ಸ್‌ 14 ಪಂದ್ಯಗಳಲ್ಲಿ 190ರ ಸ್ಟ್ರೈಕ್‌ರೇಟ್‌ನಲ್ಲಿ 378 ರನ್‌ ಗಳಿಸಿದ್ದರು. 

ಲಂಕಾ ತಂಡವು ಪ್ರಮುಖ ಸ್ಪಿನ್ನರ್‌ಗಳಾದ ನಾಯಕ ವನಿಂದು ಹಸರಂಗಾ ಮತ್ತು ಮಹೀಷ ತೀಕ್ಷಣ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಒಂದೊಮ್ಮೆ ಇವರು ವೈಫೈಲ್ಯ ಅನುಭವಿಸಿದರೆ ವೇಗಿಗಳಾದ ಮಥೀಷ ಪಥಿರಾಣ, ಮಧುಶಂಕಾ ಹಾಗೂ ನುವಾನ್ ತುಷಾರ ಅವರ ಮೇಲೆ ಒತ್ತಡ ಹೆಚ್ಚಲಿದೆ. 

ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಕಗಿಸೊ ರಬಾಡ, ನಾಕಿಯಾ ಹಾಗೂ ಎಡಗೈ ಸ್ಪಿನ್ನರ್ ತಬ್ರೆಜ್ ಶಮ್ಸಿ ಅವರ ಪರಿಣಾಮಕಾರಿ ದಾಳಿಯನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯವನ್ನು ಲಂಕಾ ಬ್ಯಾಟಿಂಗ್ ಪಡೆ ತೋರಬೇಕಿದೆ. ಪಥುಮ್ ನಿಸಾಂಕ, ಚರಿತ ಅಸಲಂಕಾ, ಅನುಭವಿ ಏಂಜೆಲೊ ಮ್ಯಾಥ್ಯೂಸ್ ಅವರ ಮೇಲೆ ನಿರೀಕ್ಷೆಯ ಭಾರವಿದೆ. 

ಇಲ್ಲಿಯ ಪಿಚ್‌ ಇನಿಂಗ್ಸ್‌ನ ಆರಂಭದಲ್ಲಿ ವೇಗಿಗಳಿಗೆ ಹಾಗೂ ನಂತರದ ಬಹುತೇಕ ಅವಧಿಯಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವ ಸಾಧ್ಯತೆ ಇದೆ. 

ತಂಡಗಳು: ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ (ನಾಯಕ) ಒಟಿನಿಲ್ ಬಾರ್ತ್‌ಮನ್ ಗೆರಾಲ್ಡ್ ಕೊಝಿ ಕ್ವಿಂಟನ್ ಡಿಕಾಕ್ ಬಿಜಾರ್ನ್ ಫಾರ್ಚೂನ್ ರೀಝಾ ಹೆನ್ರಿಕ್ಸ್ ಮಾರ್ಕೊ ಯಾನ್ಸೆನ್ ಹೆನ್ರಿಚ್ ಕ್ಲಾಸೆನ್ ಕೇಶವ್ ಮಹಾರಾಜ್ ಡೇವಿಡ್ ಮಿಲ್ಲರ್ ಎನ್ರಿಚ್ ನಾಕಿಯಾ ಕಗಿಸೊ ರಬಾಡ ರಿಯಾನ್ ರಿಕೆಲ್ಟನ್ ತಬ್ರೇಜ್ ಶಮ್ಸಿ ಟ್ರಿಸ್ಟನ್ ಸ್ಟಬ್ಸ್.

ಶ್ರೀಲಂಕಾ: ವನಿಂದು ಹಸರಂಗಾ (ನಾಯಕ) ಚರಿತ ಅಸಲಂಕಾ ಕುಶಾಲ ಮೆಂಡಿಸ್ ಪಥುಮ್ ನಿಸಾಂಕ ಕಮಿಂದು ಮೆಂಡಿಸ್ ಸದೀರಾ ಸಮರವಿಕ್ರಮ ಏಂಜೆಲೊ ಮ್ಯಾಥ್ಯೂಸ್ ದಸುನ್ ಶನಾಕ ಧನಂಜಯ ಡಿಸಿಲ್ವಾ ಮಹೀಷ ತೀಕ್ಷಣ ದುನಿತ್ ವೆಲಾಳಗೆ ದುಷ್ಮಂತ ಚಮೀರಾ ನುವಾನ ತುಷಾರ ಮಥೀಷ ಪಥಿರಾಣ ದಿಲ್ಶಾನ್ ಮಧುಶಂಕಾ.  ಪಂದ್ಯ ಆರಂಭ: ರಾತ್ರಿ 8 (ಭಾರತೀಯ ಕಾಲಮಾನ) ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT