ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ಶ್ರೀಲಂಕಾ ಎದುರು ಜಯ ಅನಿವಾರ್ಯ

ಶ್ರೀಲಂಕಾ ವಿರುದ್ಧ ಗೆದ್ದರೆ ಸೆಮಿ ಪ್ರವೇಶ
Last Updated 4 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಸಿಡ್ನಿ: ಇಂಗ್ಲೆಂಡ್‌ ತಂಡ ಟಿ20 ವಿಶ್ವಕಪ್‌ ಟೂರ್ನಿಯ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಶನಿವಾರ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಲು ಜೋಸ್‌ ಬಟ್ಲರ್‌ ಬಳಗಕ್ಕೆ ಗೆಲುವು ಅನಿವಾರ್ಯ.

ಇಂಗ್ಲೆಂಡ್‌ ತಂಡ ಐದು ಪಾಯಿಂಟ್ಸ್‌ಗಳೊಂದಿಗೆ ‘ಗುಂಪು 1’ ರಲ್ಲಿ ಮೂರನೇ ಸ್ಥಾನದಲ್ಲಿದೆ. ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ನಾಲ್ಕರಘಟ್ಟ ಪ್ರವೇಶಿಸಲಿವೆ.

ಅಗ್ರಸ್ಥಾನ ಪಡೆದಿರುವ ನ್ಯೂಜಿಲೆಂಡ್‌ ಈಗಾಗಲೇ ಸೆಮಿಗೆ ಅರ್ಹತೆ ಗಳಿಸಿದೆ. ಆಸ್ಟ್ರೇಲಿಯಾ ಬಳಿ ಏಳು ಪಾಯಿಂಟ್ಸ್‌ ಇದೆ. ಶನಿವಾರ ಇಂಗ್ಲೆಂಡ್‌ ಗೆದ್ದರೆ ಪಾಯಿಂಟ್ಸ್‌ ಏಳು ಆಗಲಿದೆ. ಬಟ್ಲರ್‌ ಬಳಗವು ಆಸ್ಟ್ರೇಲಿಯಾಕ್ಕಿಂತ ಉತ್ತಮ ರನ್‌ರೇಟ್‌ ಹೊಂದಿರುವುದರಿಂದ ನಾಲ್ಕರಘಟ್ಟ ಪ್ರವೇಶಿಸಲಿದೆ.

ಶ್ರೀಲಂಕಾ ಜಯಿಸಿದರೆ ಇಂಗ್ಲೆಂಡ್‌ನ ಸೆಮಿ ಕನಸು ನುಚ್ಚುನೂರಾಗಲಿದೆ. ಆಸ್ಟ್ರೇಲಿಯಾ ತಂಡ ಅದೃಷ್ಟದ ಬಲದೊಂದಿಗೆ ನಾಲ್ಕರಘಟ್ಟಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.

‘ಗೆಲುವು ಅನಿವಾರ್ಯ ಎಂಬುದು ನಮಗೆ ತಿಳಿದಿದೆ. ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಂಡು ಕಣಕ್ಕಿಳಿಯುವೆವು’ ಎಂದು ಇಂಗ್ಲೆಂಡ್‌ ತಂಡದ ಬ್ಯಾಟರ್‌ ಅಲೆಕ್ಸ್‌ ಹೇಲ್ಸ್‌ ತಿಳಿಸಿದ್ದಾರೆ.

ಗೆದ್ದರೂ ಸೆಮಿ ಪ್ರವೇಶ ಸಾಧ್ಯವಿಲ್ಲ ಎಂಬುದು ಲಂಕಾಕ್ಕೆ ತಿಳಿದಿದೆ. ಆದರೆ ಏಷ್ಯಾ ಕಪ್‌ ಚಾಂಪಿಯನ್ನರು ಇಂಗ್ಲೆಂಡ್‌ನ ಸೆಮಿ ಹಾದಿಗೆ ತಡೆಯಾಗಿ ಪರಿಣಮಿಸುವರೇ ಎಂಬುದನ್ನು ನೋಡಬೇಕು.

ಪಂದ್ಯ ರದ್ದುಗೊಂಡರೆ?: ಶನಿವಾರದ ಪಂದ್ಯ ಮಳೆಯಿಂದ ರದ್ದುಗೊಂಡರೆ ಎರಡೂ ತಂಡಗಳು ತಲಾ ಒಂದು ಪಾಯಿಂಟ್ಸ್‌ ಗಳಿಸಲಿವೆ. ಹಾಗಾದಲ್ಲಿ ಇಂಗ್ಲೆಂಡ್‌ಗೆ ಆರು, ಶ್ರೀಲಂಕಾಕ್ಕೆ ಐದು ಪಾಯಿಂಟ್ಸ್‌ ಆಗಲಿವೆ. ಏಳು ಪಾಯಿಂಟ್ಸ್‌ ಹೊಂದಿರುವ ಆಸ್ಟ್ರೇಲಿಯಾ ಎರಡನೇ ತಂಡವಾಗಿ ಸೆಮಿ ಪ್ರವೇಶಿಸಲಿದೆ. ಹವಾಮಾನ ಇಲಾಖೆಯ ವರದಿ ಪ್ರಕಾರ ಸಿಡ್ನಿಯಲ್ಲಿ ಶನಿವಾರ ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌, ಹಾಟ್‌ಸ್ಟಾರ್‌ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT