ಭಾನುವಾರ, ಮಾರ್ಚ್ 7, 2021
31 °C

ಟೆಸ್ಟ್‌ ಚಾಂಪಿಯನ್‌ಷಿಪ್: ಅಗ್ರಸ್ಥಾನಕ್ಕೆ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ): ಬ್ರಿಸ್ಬೇನ್‌ನಲ್ಲಿ ಮಂಗಳವಾರ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯದಲ್ಲಿ ಮೂರು ವಿಕೆಟ್‌ಗಳಿಂದ ಗೆದ್ದ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

2–1ರಿಂದ ಸರಣಿ ಜಯ ಸಾಧಿಸಿದ ಭಾರತವು 430 ಅಂಕಗಳೊಂದಿಗೆ ಮೊದಲ ಸ್ಥಾನ ಗಳಿಸಿದೆ. ನ್ಯೂಜಿಲೆಂಡ್ (420) ಮತ್ತು ಆಸ್ಟ್ರೇಲಿಯಾ (332) ಕ್ರಮವಾಗಿ ಎರಡು ಹಾಗೂ ಮೂರನೇಸ್ಥಾನಗಳಲ್ಲಿವೆ. 

‘ಗಾಬಾ ಕ್ರೀಡಾಂಗಣದಲ್ಲಿ ಭಾರತವು ಕಠಿಣ ಹಾದಿಯಲ್ಲಿ ಹೋರಾಡಿ ಗೆದ್ದಿತು. ಇದರೊಂದಿಗೆ ವಿಶ್ವ ಚಾಂಪಿಯನ್‌ಷಿಪ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಜಾರಿತು’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟ್ವೀಟ್ ಮಾಡಿದೆ.

ಭಾರತ ತಂಡವು ಒಟ್ಟು ಐದು ಸರಣಿಗಳಲ್ಲಿ 13 ಪಂದ್ಯಗಳನ್ನು ಆಡಿದೆ. ಒಂಬತ್ತರಲ್ಲಿ ಜಯ ಸಾಧಿಸಿ, ಮೂರರಲ್ಲಿ ಸೋತಿದೆ. ಒಂದು ಡ್ರಾ ಆಗಿದೆ. ಒಟ್ಟು ಸರಾಸರಿಯಲ್ಲಿ ಶೇ 71.1ರ ಸಾಧನೆ ಮಾಡಿದೆ.

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

ಐಸಿಸಿಯ ತಂಡಗಳ ರ‍್ಯಾಂಕಿಂಗ್‌ ವಿಭಾಗದಲ್ಲಿ ನ್ಯೂಜಿಲೆಂಡ್‌, 118.44 ರೇಟಿಂಗ್ ಪಾಯಿಂಟ್ಸ್‌ ಕಲೆಹಾಕಿದ್ದು ಮೊದಲ ಸ್ಥಾನದಲ್ಲಿದೆ. 
ಭಾರತ (117.65) ಮತ್ತು ಆಸ್ಟ್ರೇಲಿಯಾ (113) ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ
ಸ್ಥಾನದಲ್ಲಿವೆ.

ತಂಡವು ಒಟ್ಟಾಗಿ  ಆಡಿದ್ದು ಈ ಸಫಲತೆಗೆ ಕಾರಣ

 ತಮ್ಮ ನಾಯಕತ್ವ ಯಶಸ್ವಿಯಾಗಲು ತಂಡದಲ್ಲಿ ಎಲ್ಲರೂ ಚೆನ್ನಾಗಿ ಆಡಿದ್ದು ಕಾರಣ ಎಂದು ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಹೇಳಿದರು.

‘ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು ದೊಡ್ಡ ಗೌರವ. ಆದರೆ ನನ್ನೊಬ್ಬನಿಂದ ಯಾವುದೂ ಸಾಧ್ಯವಿಲ್ಲ. ಆದರೆ ತಂಡವು ಒಟ್ಟಾಗಿ  ಆಡಿದ್ದು ಈ ಸಫಲತೆಗೆ ಕಾರಣವಾಗಿದೆ. ಹೋರಾಟದ ಛಲ ಮತ್ತು ತಂಡಸ್ಪೂರ್ತಿ ಬಹಳ ಮುಖ್ಯ’ ಎಂದು ಶಾಂತಸ್ವಭಾವದ ರಹಾನೆ ತಿಳಿಸಿದರು.

‘ಅಡಿಲೇಡ್ ಟೆಸ್ಟ್‌ನ ನಂತರ ಮರಳಿ ಗೆಲುವಿನ ಹಾದಿಗೆ ಬರುವುದು ದೊಡ್ಡ ಸವಾಲಾಗಿತ್ತು. ಫಲಿತಾಂಶದ ಕುರಿತು ಹೆಚ್ಚು ಯೋಚನೆ ಮಾಡದೇ ಉತ್ತಮವಾದ ಕ್ರಿಕೆಟ್ ಆಡಿದ್ದು ಫಲ ನೀಡಿತು’ ಎಂದು ಮುಂಬೈನ ರಹಾನೆ ಹೇಳಿದರು.

ತಂಡಕ್ಕೆ ₹5 ಕೋಟಿ ಬೋನಸ್: ಪ್ರಶಸ್ತಿ ವಿಜೇತ ಭಾರತ ತಂಡಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ₹ 5 ಕೋಟಿ ಬೋನಸ್ ಘೋಷಣೆ ಮಾಡಿದೆ.

‘ಆಸ್ಟ್ರೇಲಿಯಾದಲ್ಲಿ ಈ ರೀತಿ ಟೆಸ್ಟ್ ಸರಣಿ ಜಯಿಸುವುದು ಅದ್ಭುತವಾದದ್ದು. ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತದೆ. ಆಟಗಾರರ ಸಾಧನೆ ದೊಡ್ಡದು.  ತಂಡಕ್ಕೆ ₹5 ಕೋಟಿ ಬೋನಸ್‌ ನೀಡಲಾಗುವುದು’ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ.


Caption

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು