ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿದೆ ಟೀಂ ಇಂಡಿಯಾದ ಕಿತ್ತಳೆ ಬಣ್ಣದ ಜೆರ್ಸಿ

ವಿಶ್ವಕಪ್‌ ಕ್ರಿಕೆಟ್‌
Last Updated 28 ಜೂನ್ 2019, 15:59 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ತಂಡ ಧರಿಸಲಿರುವ ಕಿತ್ತಳೆ ಬಣ್ಣದ ಜೆರ್ಸಿ ಕುರಿತು ಈಗಾಗಲೇ ರಾಜಕೀಯ ಅಂಗಳದಲ್ಲಿ ಜಗ್ಗಾಟ ನಡೆದಿದ್ದು, ಇದೀಗ ಪೋಷಾಕಿನ ಅಧಿಕೃತ ಚಿತ್ರಗಳು ಬಿಡುಗಡೆಯಾಗಿವೆ.

ಜೆರ್ಸಿ ಹೇಗಿರಲಿದೆ ಎಂಬ ಕುತೂಹಲಕ್ಕೆ ಶುಕ್ರವಾರ ತೆರೆಬಿದ್ದಿದೆ. ಬಿಸಿಸಿಐ ಪೋಷಾಕುಗಳ ಪ್ರಾಯೋಜಕತ್ವ ಹೊಂದಿರುವ ನೈಕಿ ಇಂಡಿಯಾ ಕಿತ್ತಳೆ ಬಣ್ಣದ ಜೆರ್ಸಿ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಜೂನ್ 30ರಂದು ನಡೆಯುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಇಂಥದ್ದೇಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ.

ಜೆರ್ಸಿಯ ಮುಂಭಾಗ ಮತ್ತು ಕುತ್ತಿಗೆಯ ಭಾಗ ಗಾಢ ನೀಲಿ ಬಣ್ಣ ಹಾಗೂ ಉಳಿದಂತೆ ಕಿತ್ತಳೆ ಬಣ್ಣದಿಂದ ಕೂಡಿದೆ. ಕೇಸರಿ ಬಣ್ಣದ ಜೆರ್ಸಿ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು.

ಹೊಸ ತಲೆಮಾರಿನ ಯುವಜನರ ಉತ್ಸಾಹದ ಪ್ರತೀಕವಾಗಿರುವ ಈ ಜೆರ್ಸಿ ತಂಡದ ಆಟಗಾರರಲ್ಲಿ ಧೈರ್ಯ ಮತ್ತು ಸಾಹಸ ಮನೋಭಾವ ತುಂಬಲಿದೆ ಎಂಬ ವಿಶ್ವಾಸವಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಜೆರ್ಸಿಯನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದ್ದು ಇದನ್ನು ಧರಿಸಿ ಆಡುವುದು ಹೆಚ್ಚು ಆರಾಮದಾಯಕವಾಗಿರುತ್ತದೆ. ಹೀಗಾಗಿ ಅಂಗಣದಲ್ಲಿ ಹೆಚ್ಚು ಉಲ್ಲಾಸದಿಂದ ಇರಲು ಸಾಧ್ಯ ಎಂದು ಹೇಳಲಾಗಿದ್ದು ನೈಕಿ ಉತ್ಪನ್ನಗಳ ಅಧಿಕೃತ ಮಾರಾಟಗಾರರಾದ ಮೈಂತ್ರಾ ಮತ್ತು ಜಬಾಂಗ್‌ ಮಳಿಗೆಗಳಲ್ಲಿ ಇವುಗಳ ಮಾದರಿಗಳು ಖರೀದಿಗೆ ಲಭ್ಯವಿವೆ ಎಂದು ತಿಳಿಸಲಾಗಿದೆ.

ಜೂನ್ 30ರಂದು ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಯಥಾಪ್ರಕಾರ ತನ್ನ ನೀಲಿ ವರ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಭಾರತ ತಂಡದ ಪೋಷಾಕು ಕೂಡ ಗಾಢನೀಲಿ ಬಣ್ಣದಾಗಿದೆ. ಆದರೆ, ನಿಯಮದ ಪ್ರಕಾರ ಎರಡೂ ತಂಡಗಳು ಒಂದೇ ವರ್ಣದ ಪೋಷಾಕನ್ನು ಧರಿಸಿ ಆಡುವಂತಿಲ್ಲ. ಆದ್ದರಿಂದ ಭಾರತವು ವಿಭಿನ್ನ ಬಣ್ಣದ ಪೋಷಾಕು ಧರಿಸಬೇಕಾಗಿದೆ. ಕಿತ್ತಳೆ ವರ್ಣದ ಜೆರ್ಸಿ ಧರಿಸಲಿದೆ.

ನರೇಂದ್ರ ಮೋದಿ ಕೈವಾಡ: ‘ಭಾರತೀಯ ಜನತಾಪಕ್ಷದ (ಬಿಜೆಪಿ)ನೇತೃತ್ವದ ಕೇಂದ್ರ ಸರ್ಕಾರವು ದೇಶವನ್ನು ಕೆಸರೀಕರಣ ಗೊಳಿಸುತ್ತಿದೆ. ಭಾರತವು ಈ ಪೋಷಾಕು ಧರಿಸುವಂತೆ ಬಿಸಿಸಿಐ ಸೂಚಿಸಿರುವ ಹಿಂದೆ ನರೇಂದ್ರ ಮೋದಿ ಸರ್ಕಾರದ ಕೈವಾಡವಿದೆ’ ಎಂದು ಸಮಾಜವಾದಿ ಪಕ್ಷದ ಶಾಸಕ ಅಬು ಆಜ್ಮಿ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT