ಶುಕ್ರವಾರ, ಫೆಬ್ರವರಿ 26, 2021
18 °C
ಈಡನ್ ಗಾರ್ಡನ್ಸ್‌ನಲ್ಲಿ ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲು

ಐಪಿಎಲ್ ಕ್ರಿಕೆಟ್: ರಸೆಲ್‌–ರಬಾಡ ಕದನ ಕುತೂಹಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಬ್ಯಾಟಿಂಗ್‌ ಮೂಲಕ ಗುಡುಗುವ ಆ್ಯಂಡ್ರೆ ರಸೆಲ್ ಮತ್ತು ಯಾರ್ಕರ್‌ಗಳ ಮೂಲಕ ಎದೆ ಝಲ್ಲೆನಿಸುವ ಕಗಿಸೊ ರಬಾಡ ನಡುವಿನ ಹಣಾಹಣಿಗೆ ಸಾಕ್ಷಿಯಾಗಲು ಕ್ರಿಕೆಟ್ ಪ್ರಿಯರು ಕಾತರರಾಗಿದ್ದಾರೆ. ಶುಕ್ರವಾರ ರಾತ್ರಿ ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಕೋಲ್ಕತ್ತ ನೈಟ್ ರೈಡರ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಹಣಾಹಣಿಯಲ್ಲಿ ಈ ಇಬ್ಬರ ಮೇಲೆ ಎಲ್ಲರ ಕಣ್ಣು ಬೀಳಲಿದೆ.

ಆರು ಪಂದ್ಯಗಳ ಪೈಕಿ ನಾಲ್ಕನ್ನು ಗೆದ್ದಿರುವ ಕೋಲ್ಕತ್ತ ನೈಟ್‌ ರೈಡರ್ಸ್ ಈಗ ಪಾಯಿಂಟ್ ಪಟ್ಟಿಯ ಎರಡನೇ ಸ್ಥಾನದಲ್ಲಿದೆ. ಆರು ಪಂದ್ಯಗಳಲ್ಲಿ ಮೂರನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್‌ ಆರನೇ ಸ್ಥಾನದಲ್ಲಿದೆ. ನೈಟ್‌ ರೈಡರ್ಸ್‌ನ ಈ ವರೆಗಿನ ಹಾದಿಯಲ್ಲಿ ಆ್ಯಂಡ್ರೆ ರಸೆಲ್‌ ಮಿಂಚು ಹರಿಸಿದ್ದಾರೆ. ಐದು ಇನಿಂಗ್ಸ್‌ನಲ್ಲಿ ಅವರು ಒಟ್ಟು 257 ರನ್ ಕಲೆ ಹಾಕಿದ್ದಾರೆ. ಐ ಪೈಕಿ 150 ರನ್‌ ಸಿಕ್ಸರ್‌ಗಳ ಮೂಲಕವೇ ಬಂದಿದೆ ಎಂಬುದು ವಿಶೇಷ. ರಸೆಲ್ 128.50ರ ಸರಾಸರಿಯಲ್ಲಿ ರನ್‌ ಗಳಿಸಿದ್ದು ಸ್ಟ್ರೈಕ್‌ ರೇಟ್‌ 212.39 ಆಗಿದೆ. ಈ ಅಂಕಿಗಳು ಎದುರಾಳಿಗಳಲ್ಲಿ ಆತಂಕ ಸೃಷ್ಟಿಸಬಲ್ಲವು.

ಚೆನ್ನೈ ಸೂಪರ್‌ ಕಿಂಗ್ಸ್‌ನ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ರಸೆಲ್ ಅವರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಪಂದ್ಯದಲ್ಲಿ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಬಳಸಿಕೊಂಡ ಅವರು ರಸೆಲ್ ಸ್ಫೋಟಿಸದಂತೆ ಮಾಡಿದ್ದರು. ಕೆಕೆಆರ್ ತಂಡದ ವಿರುದ್ಧ ಏಳು ವಿಕೆಟ್‌ಗಳ ಗೆಲುವು ಸಾಧಿಸಿದ್ದರು.

ರಬಾಡ ದಾಳಿಗೆ ಉತ್ತರಿಸುವರೇ ರಸೆಲ್‌?: ಮೊದಲ ಸುತ್ತಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಕೆಕೆಆರ್ ಸೋತಿತ್ತು. ರೋಚಕ ಸೂಪರ್ ಓವರ್‌ನಲ್ಲಿ ಪರಿಣಾಮಕಾರಿ ಯಾರ್ಕರ್‌ಗಳ ಮೂಲಕ ರಸೆಲ್‌ ಅವರನ್ನು ನಿಯಂತ್ರಿಸಿದ್ದ ರಬಾಡ ಡೆಲ್ಲಿ ತಂಡಕ್ಕೆ ಜಯ ಗಳಿಸಿಕೊಟ್ಟಿದ್ದರು.

11 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಕೆಕೆಆರ್‌ನ ರಸೆಲ್‌ ಸೂಪರ್ ಓವರ್‌ನ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ್ದರು. ಆದರೆ ನಂತರ ರಬಾಡ ತಿರುಗೇಟು ನೀಡಿದ್ದರು. ಯಾರ್ಕರ್ ಮೂಲಕ ರಸೆಲ್ ವಿಕೆಟ್ ಉರುಳಿಸಿದ್ದರು. ಇದನ್ನು ಸೌರವ್ ಗಂಗೂಲಿ ಐಪಿಎಲ್‌ ಟೂರ್ನಿಯ ಶ್ರೇಷ್ಠ ಎಸೆತ ಎಂದು ಬಣ್ಣಿಸಿದ್ದರು. ಆ ಸೋಲಿಗೆ ಸೇಡು ತೀರಿಸಲು ಕೆಕೆಆರ್ ಶುಕ್ರವಾರ ಪ್ರಯತ್ನಿಸಲಿದೆ. ರಬಾಡ ಎಸೆತಗಳಿಗೆ ಉತ್ತರ ನೀಡಲು ರಸೆಲ್‌ಗೂ ಇದು ಉತ್ತಮ ಅವಕಾಶ.

ತಂಡಗಳು: ಕೋಲ್ಕತ್ತ ನೈಟ್ ರೈಡರ್ಸ್‌: ದಿನೇಶ್ ಕಾರ್ತಿಕ್‌ (ನಾಯಕ), ರಾಬಿನ್ ಉತ್ತಪ್ಪ, ಕ್ರಿಸ್ ಲಿನ್‌, ಶುಭಮನ್ ಗಿಲ್‌, ಆ್ಯಂಡ್ರೆ ರಸೆಲ್‌, ಕಾರ್ಲೋಸ್‌ ಬ್ರಾಥ್‌ವೇಟ್‌, ಸುನಿಲ್ ನಾರಾಯಣ್‌, ಪೀಯೂಷ್ ಚಾವ್ಲಾ, ಕುಲದೀಪ್ ಯಾದವ್‌, ನಿಖಿಲ್ ನಾಯಕ್‌, ಜೋ ಡೆನ್ಲಿ, ಶ್ರೀಕಾಂತ್‌ ಮುಂಢೆ, ನಿತೀಶ್ ರಾಣಾ, ಸಂದೀಪ್ ವಾರಿಯರ್‌, ಪ್ರಸಿದ್ಧ ಕೃಷ್ಣ, ಲೋಕಿ ಫರ್ಗುಸನ್‌, ಹ್ಯಾರಿ ಗರ್ನಿ, ಕೆ.ಸಿ.ಕಾರ್ಯಪ್ಪ, ಯಾರಾ ಪೃಥ್ವಿರಾಜ್‌.

ಡೆಲ್ಲಿ ಕ್ಯಾಪಿಟಲ್ಸ್‌: ಶ್ರೇಯಸ್ ಅಯ್ಯರ್‌ (ನಾಯಕ), ಪೃಥ್ವಿ ಶಾ, ಶಿಖರ್‌ ಧವನ್‌, ರಿಷಭ್ ಪಂತ್‌, ಕಾಲಿನ್ ಇಂಗ್ರಾಮ್‌, ಕೀಮೊ ಪೌಲ್‌, ಅಕ್ಷರ್ ಪಟೇಲ್‌, ರಾಹುಲ್ ತೇವತಿಯಾ, ಅಮಿತ್‌ ಮಿಶ್ರಾ, ಕಗಿಸೊ ರಬಾಡ, ಇಶಾಂತ್ ಶರ್ಮಾ, ಹನುಮ ವಿಹಾರಿ, ಅಂಕುಶ್‌ ಬೇನ್ಸ್‌, ಹರ್ಷಲ್ ಪಟೇಲ್‌, ಮನ್ಜೋತ್ ಕಾರ್ಲ, ಕ್ರಿಸ್ ಮಾರಿಸ್‌, ಶೆರ್ಫಾನೆ ರುಥರ್‌ಫಾರ್ಡ್‌, ಜಲಜ್ ಸಕ್ಸೇನ, ಸಂದೀಪ್‌ ಲಮಿಚಾನೆ, ಟ್ರೆಂಟ್ ಬೌಲ್ಟ್‌, ಆವೇಶ್ ಖಾನ್‌, ನಾಥು ಸಿಂಗ್‌, ಬಂಡಾರು ಅಯ್ಯಪ್ಪ, ಕಾಲಿನ್ ಮನ್ರೊ.

ನೋರ್ಜೆ ಬದಲಿಗೆ ಮ್ಯಾಟ್‌ ಕೆಲಿ

ಗಾಯಗೊಂಡಿರುವ ದಕ್ಷಿಣ ಆಫ್ರಿಕಾದ ಅನ್ರಿಚ್‌ ನೋರ್ಜೆ ಬದಲಿಗೆ ಆಸ್ಟ್ರೇಲಿಯಾದ ವೇಗಿ ಮ್ಯಾಟ್‌ ಕೆಲಿ ಅವರನ್ನು ಕೆಕೆಆರ್‌ ಕರೆಸಿಕೊಂಡಿದೆ. ತಂಡದ ಮುಂದಿನ ಪಂದ್ಯಗಳಿಗೆ ಕೆಲಿ ಲಭ್ಯರಾಗಲಿದ್ದಾರೆ ಎಂದು ಫ್ರಾಂಚೈಸ್‌ ಮೂಲಗಳು ತಿಳಿಸಿವೆ.

12 ಟ್ವೆಂಟಿ–20 ಪಂದ್ಯಗಳು, 16 ಪ್ರಥಮ ದರ್ಜೆ ಪಂದ್ಯಗಳು ಮತ್ತು ಐದು ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಕೆಲಿ ಇದೇ ಮೊದಲ ಬಾರಿ ಟ್ವೆಂಟಿ–20 ಲೀಗ್‌ಗೆ ಆಯ್ಕೆಯಾಗಿದ್ದಾರೆ.

ತವರಿನಲ್ಲಿ ಗಂಗೂಲಿ ಅತಿಥಿ

ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿರುವ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರ ಆಗಿರುವುದರಿಂದ ಶುಕ್ರವಾರ ಐಪಿಎಲ್ ಪಂದ್ಯದ ವೇಳೆ ತವರಿನಲ್ಲೇ ‘ಅತಿಥಿ’ಯಾಗಲಿದ್ದಾರೆ. ಹಿತಾಸಕ್ತಿ ಸಂಘರ್ಷದ ಆರೋಪ ಹೊತ್ತಿರುವ ಗಂಗೂಲಿ ಈ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡಗ್‌ಔಟ್‌ನಲ್ಲಿ ಕುಳಿತುಕೊಳ್ಳಬೇಕಾಗಿದೆ.

ಇಲ್ಲಿನ ಪಿಚ್‌ ಬಗ್ಗೆ ಚೆನ್ನಾಗಿ ತಿಳಿದಿರುವ ಗಂಗೂಲಿ ಅವರಿಗೆ ತಮ್ಮ ತಂಡದ ಬೌಲರ್‌ಗಳಿಗೆ ಸಲಹೆ ನೀಡಲು ಅನುಕೂಲ ಆಗಲಿದೆ. ಆದರೆ ಈ ವಿಷಯದ ಬಗ್ಗೆ ಚಿಂತಿಸಿಲ್ಲ ಎಂದು ಕೆಕೆಆರ್‌ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಿ ಮೈಸೂರು ಅವರು ಹೇಳಿದ್ದಾರೆ.

ಹರ್ಷಲ್ ಪಟೇಲ್‌ ಟೂರ್ನಿಯಿಂದ ಹೊರಗೆ

ಬಲಗೈಗೆ ಗಾಯವಾಗಿರುವ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್‌ ಅವರು ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ತಂಡದ ಕೋಚ್ ರಿಕಿ ಪಾಂಟಿಂಗ್‌ ಗುರುವಾರ ಈ ವಿಷಯ ತಿಳಿಸಿದರು.

‘ಏಪ್ರಿಲ್ ಒಂದರಂದು ನಡೆದ ಕಿಂಗ್ಸ್ ಇಲೆವನ್ ಎದುರಿನ ಪಂದ್ಯದಲ್ಲಿ ಅವರಿಗೆ ಗಾಯವಾಗಿತ್ತು. ಗಾಯ ಗಂಭೀರವಾಗಿದೆ ಎಂದು ಮನವರಿಕೆಯಾಗಲು ಕೆಲವು ದಿನಗಳು ಬೇಕಾದವು. ಎಕ್ಸ್‌ರೇ ವರದಿ ಬಂದ ನಂತರ ಮೂರರಿಂದ ನಾಲ್ಕು ವಾರಗಳ ವಿಶ್ರಾಂತಿ ಬೇಕು ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಪಾಂಟಿಂಗ್‌ ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು