ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಮಿಯಂತಹ ಬೌಲರ್ ಮತ್ತೊಬ್ಬರಿಲ್ಲ.. ಕ್ರಿಕೆಟ್‌ ದಿಗ್ಗಜ ವಿವಿಯನ್ ರಿಚರ್ಡ್ಸ್ ಮಾತು

ವೆಸ್ಟ್ ಇಂಡೀಸ್ ಕ್ರಿಕೆಟ್‌ ದಿಗ್ಗಜ ವಿವಿಯನ್ ರಿಚರ್ಡ್ಸ್ ಮನದಾಳದ ಮಾತು
Published 17 ನವೆಂಬರ್ 2023, 20:49 IST
Last Updated 17 ನವೆಂಬರ್ 2023, 20:49 IST
ಅಕ್ಷರ ಗಾತ್ರ

ಬೆಂಗಳೂರು: ‘ಮೊಹಮ್ಮದ್ ಶಮಿ ಅದ್ಭುತ ಬೌಲರ್ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.
ನ್ಯೂಜಿಲೆಂಡ್ ಎದುರು ಅವರು ಏಳು ವಿಕೆಟ್ ಪಡೆದ ಇನಿಂಗ್ಸ್‌ ಅಂತೂ ಅತ್ಯದ್ಭುತ. ಅದನ್ನು ನಾನು ಕಣ್ಣಾರೆ ಕಂಡು ಚಕಿತನಾದೆ. ಅವರಷ್ಟು ಚೆನ್ನಾಗಿ ಚೆಂಡಿನ ಸೀಮ್ ಅನ್ನು ಪ್ರಯೋಗಿಸುವ ಮತ್ತೊಬ್ಬ ಬೌಲರ್‌ ಇಲ್ಲ. ಭಾರತ ತಂಡದ ವೇಗದ ಬೌಲಿಂಗ್‌ನ ಪ್ರಮುಖ ಶಕ್ತಿ ಅವರು....’

– ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಅವರು ಭಾರತ ಕ್ರಿಕೆಟ್ ತಂಡದ ವೇಗಿ ಶಮಿಯ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳಿವು. ಮುಂಬೈನಲ್ಲಿ ಈಚೆಗೆ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಪಂದ್ಯವನ್ನು ವೀಕ್ಷಿಸಿದ 71 ವರ್ಷದ ರಿಚರ್ಡ್ಸ್  ಶುಕ್ರವಾರ ಬೆಂಗಳೂರಿಗೆ ಬಂದಿದ್ದರು. ವರ್ಚಸ್ ಸ್ಪಿರಿಟ್ಸ್‌  ಪ್ರಚಾರ ರಾಯಭಾರಿಯಾಗಿ ನೇಮಕವಾಗಿರುವ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ನೀಡಿದ ಸಂದರ್ಶನದ ಸಾರಾಂಶ ಇಲ್ಲಿದೆ.

‘ವಿರಾಟ್ ಕೊಹ್ಲಿ ಐವತ್ತನೇ ಶತಕ ಅಮೋಘ ಸಾಧನೆ. ಅವರ ಆಟದ ವೈಖರಿ ಮತ್ತು ವ್ಯಕ್ತಿತ್ವ ವಿಶೇಷವಾದದ್ದು. ಅವರೊಬ್ಬ ಬೇರೆಯೇ ಲೋಕದಿಂದ ಇಳಿದು ಬಂದಿರುವ ಆಟಗಾರ. ಕೆಲಕಾಲದ ಹಿಂದೆ ಅವರು ಫಾರ್ಮ್ ಕಳೆದುಕೊಂಡು ಪರದಾಡುತ್ತಿದ್ದರು. ಹಲವಾರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಒತ್ತಡದಲ್ಲಿದ್ದರು. ತಂಡದಿಂದ ಸ್ಥಾನ ಕಳೆದುಕೊಳ್ಳುವ ಆತಂಕವೂ ಇತ್ತು. ಆದರೆ ಆ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನೆರವು ಸಿಬ್ಬಂದಿ ಅವರಿಗೆ ಬೆಂಬಲವಾಗಿ ನಿಂತರು. ಅವರ ಸಾಮರ್ಥ್ಯದಲ್ಲಿ ವಿಶ್ವಾಸವಿಟ್ಟರು. ಈಗ ಅದರ ಫಲ ತಂಡಕ್ಕೆ ದೊರೆಯುತ್ತಿದೆ. ಇನ್ನೂ ದೊಡ್ಡ ಸಾಧನೆ ಮಾಡುವ ಸಾಮರ್ಥ್ಯ ಅವರಿಗೆ ಇದೆ’ ಎಂದರು.

’ಭಾರತವು ಅದೃಷ್ಟಶಾಲಿಯಾಗಿದೆ. ಏಕಕಾಲಕ್ಕೆ ಎರಡು ಕ್ರಿಕೆಟ್ ತಂಡಗಳನ್ನು ಆಡಿಸುವಷ್ಟು ಆಟಗಾರರು ಇಲ್ಲಿದ್ದಾರೆ. ಆದರೆ ಇಲ್ಲಿಯ ಆಟಗಾರರನ್ನು ಪರಸ್ಪರ ಹೋಲಿಕೆ ಮಾಡುವುದನ್ನು ನಾನು ಒಪ್ಪುವುದಿಲ್ಲ. ಎಲ್ಲರೂ ಅವರವರ ಮಟ್ಟಿಗೆ ಶ್ರೇಷ್ಠರು. ನಾನು ಆಡುವ ಸಂದರ್ಭದಲ್ಲಿ ಸುನಿಲ್ ಗಾವಸ್ಕರ್ ಇದ್ದರು. ಅವರು ಭಾರತದ ಬ್ಯಾಟಿಂಗ್ ಪರಂಪರೆಯ ಗಾಡ್‌ಫಾದರ್ ಎನ್ನಬಲ್ಲೆ. ಅವರ ನಂತರ ಸಚಿನ್ ತೆಂಡೂಲ್ಕರ್ ಮತ್ತು ಈಗ ಕೊಹ್ಲಿ ಇದ್ದಾರೆ’ ಎಂದರು.

‘ನಾಯಕತ್ವಕ್ಕೆ ರೋಹಿತ್ ಶರ್ಮಾ ಹೊಸ ವ್ಯಾಖ್ಯಾನ ಬರೆದಿದ್ದಾರೆ. ತಾವೇ ಮುಂದೆ ನಿಂತು ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ. ಉತ್ತಮ ಆರಂಭ ನೀಡುತ್ತಿದ್ದಾರೆ. ತಾವು ಚೆನ್ನಾಗಿ ಆಡಿ ಉಳಿದ ಆಟಗಾರರಲ್ಲಿ ವಿಶ್ವಾಸ ತುಂಬುತ್ತಿದ್ದಾರೆ. ಅದಕ್ಕೆ ದೊಡ್ಡ ಮೊತ್ತ ಸಾಧ್ಯವಾಗುತ್ತಿದೆ’ ಎಂದು ಶ್ಲಾಘಿಸಿದರು.

’ಏಕದಿನ ಕ್ರಿಕೆಟ್ ಮಾದರಿ ನಶಿಸುವುದಿಲ್ಲ. ಟಿ20 ಮಾದರಿಯಲ್ಲಿ ಇರದ ಹತ್ತಾರು ಗುಣಗಳು ಈ ಮಾದರಿಯಲ್ಲಿವೆ. ಇದು ಆಟಗಾರರ ಸಾಮರ್ಥ್ಯವನ್ನು ಬೆಳೆಸಲು ಸಹಕಾರಿ ಯಾಗಿದೆ. ಆಟಗಾರರ ಮತ್ತು ಬೆಳವ ಣಿಗೆಗೆ ಏಕದಿನ ಮಾದರಿ ಅವಶ್ಯ. ಟೆಸ್ಟ್ ಮಾದರಿಯ ದಿನಗಳನ್ನು ಕಡಿತ ಗೊಳಿಸುವ ಬಗ್ಗೆ ನಾನು ಯಾವುದೇ ಸಲಹೆ ಕೊಡುವುದಿಲ್ಲ. ಅದನ್ನು ಐಸಿಸಿ ನಿರ್ಧರಿಸುತ್ತದೆ’ ಎಂದರು.

‘ಮುಂದಿನ ವರ್ಷ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಟಿ20 ವಿಶ್ವಕಪ್ ನಡೆಯ
ಲಿರುವುದು ಸ್ವಾಗತಾರ್ಹ. ಸದ್ಯದ ಏಕದಿನ ವಿಶ್ವಕಪ್ ಟೂರ್ನಿಯ ವಿಜೃಂಭ ಣೆಯನ್ನು ನೋಡಿ ವಿಂಡೀಸ್‌ನಲ್ಲಿ ಅಸೂಯೆ  ಹುಟ್ಟಿರಬಹುದು. ಆದ್ದರಿಂದ ಮುಂದಿನ ಬಾರಿ ಭಾರತಕ್ಕೆ ಪೈಪೋಟಿ ನೀಡಿ ಉತ್ತಮವಾಗಿ ಆಯೋಜಿಸುವ ನಿರೀಕ್ಷೆ ಇದೆ. ಅಲ್ಲದೇ ವಿಂಡೀಸ್ ಬೆಳವಣಿಗೆಗೂ ಇದು ಮುನ್ನುಡಿಯಾಗಬಹುದು’ ಎಂದರು.

ಈ ಬಾರಿಯ ವಿಶ್ವಕಪ್ ಟೂರ್ನಿಗೆ ವಿಂಡೀಸ್ ಅರ್ಹತೆ ಗಿಟ್ಟಿಸದೇ ಇರುವುದಕ್ಕೆ ಬೇಸರವೂ ಅವರ ಮಾತುಗಳಲ್ಲಿ ವ್ಯಕ್ತವಾಯಿತು.

ಭಾನುವಾರ ನಡೆಯಲಿರುವ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಜಯದ ಸಾಧ್ಯತೆ ಹೆಚ್ಚಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT