ಸೋಮವಾರ, ಆಗಸ್ಟ್ 26, 2019
20 °C
ಕ್ರಿಕೆಟ್‌: ಫೈನಲ್‌ನಲ್ಲಿ ನಿರಾಸೆ ಕಂಡ ಛತ್ತೀಸಗಡ

ಆಂಧ್ರ ತಂಡಕ್ಕೆ ತಿಮ್ಮಪ್ಪಯ್ಯ ಟ್ರೋಫಿ

Published:
Updated:
Prajavani

ಬೆಂಗಳೂರು: ಆಂಧ್ರ ಕ್ರಿಕೆಟ್‌ ಸಂಸ್ಥೆ ತಂಡವು ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಂಧ್ರ ಮತ್ತು ಛತ್ತೀಸಗಡ ರಾಜ್ಯ ಕ್ರಿಕೆಟ್‌ ಸಂಘ ನಡುವಣ ಫೈನಲ್‌ ಪಂದ್ಯ ಡ್ರಾ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಆಂಧ್ರ ಟ್ರೋಫಿಗೆ ಮುತ್ತಿಕ್ಕಿತು.

7 ವಿಕೆಟ್‌ಗೆ 139ರನ್‌ಗಳಿಂದ ಮಂಗಳವಾರ ಎರಡನೇ ಇನಿಂಗ್ಸ್‌ನ ಆಟ ಮುಂದುವರಿಸಿದ ಆಂಧ್ರ ತಂಡ ಈ ಮೊತ್ತಕ್ಕೆ 53ರನ್‌ ಸೇರಿಸಿ ಆಲೌಟ್‌ ಆಯಿತು.

ಶೋಯಬ್‌ ಮೊಹಮ್ಮದ್‌ ಖಾನ್‌ (33; 68ಎ, 2ಬೌಂ) ಮತ್ತು ಡಿ.ಸ್ವರೂಪ್‌ ಕುಮಾರ್‌ (24; 84ಎ, 4ಬೌಂ) ಅಂತಿಮ ದಿನದಾಟದ ಮೊದಲ ಅವಧಿಯಲ್ಲಿ ಜಿಗುಟು ಆಟ ಆಡಿದರು. ಛತ್ತೀಸಗಡ ಬೌಲರ್‌ಗಳ ತಾಳ್ಮೆಗೂ ಸವಾಲಾದರು.

ಎಂಟನೇ ವಿಕೆಟ್‌ ಜೊತೆಯಾಟದಲ್ಲಿ 52ರನ್‌ ಸೇರಿಸಿದ ಈ ಜೋಡಿ, ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವ ಅಪಾಯದಿಂದ ಪಾರು ಮಾಡಿತು.

61ನೇ ಓವರ್‌ನಲ್ಲಿ ಶೋಯಬ್‌, ಅಜಯ್‌ ಮಂಡಲ್‌ಗೆ ವಿಕೆಟ್‌ ನೀಡಿದರು. 62ನೇ ಓವರ್‌ ಬೌಲ್‌ ಮಾಡಿದ ಬಿನ್ನಿ ಸ್ಯಾಮುಯೆಲ್‌ ಮೋಡಿ ಮಾಡಿದರು. ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಕ್ರಮವಾಗಿ ಸ್ವರೂಪ್‌ ಕುಮಾರ್‌ ಮತ್ತು ಸಿ.ಎಚ್‌.ಸ್ಟೀಫನ್‌ ಅವರ ವಿಕೆಟ್‌ ಪಡೆದು ಆಂಧ್ರ ತಂಡದ ಇನಿಂಗ್ಸ್‌ಗೆ ತೆರೆ ಎಳೆದರು.

ಗೆಲುವಿಗೆ 358ರನ್‌ಗಳ ಕಠಿಣ ಗುರಿ ಪಡೆದಿದ್ದ ಛತ್ತೀಸಗಡ ತಂಡವು 4.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 28ರನ್‌ ಗಳಿಸಿತ್ತು. ಈ ವೇಳೆ ಉಭಯ ತಂಡಗಳ ನಾಯಕರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.

ಆಂಧ್ರ ತಂಡದ ಬೌಲರ್‌ ಕೆ.ವಿ.ಶಶಿಕಾಂತ್‌, ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು. ಅವರು ಮೊದಲ ಇನಿಂಗ್ಸ್‌ನಲ್ಲಿ 39ರನ್‌ ಬಿಟ್ಟುಕೊಟ್ಟು ನಾಲ್ಕು ವಿಕೆಟ್‌ ಕಬಳಿಸಿದ್ದರು.

ಸಂಕ್ಷಿಪ್ತ ಸ್ಕೋರ್‌: ಆಂಧ್ರ ಕ್ರಿಕೆಟ್‌ ಸಂಸ್ಥೆ: ಪ್ರಥಮ ಇನಿಂಗ್ಸ್‌; 117.1 ಓವರ್‌ಗಳಲ್ಲಿ 313 ಮತ್ತು 61.4 ಓವರ್‌ಗಳಲ್ಲಿ 192 (ಶೋಯಬ್‌ ಮೊಹಮ್ಮದ್‌ ಖಾನ್‌ 33, ಡಿ.ಸ್ವರೂಪ್‌ ಕುಮಾರ್‌ 24; ಪುನೀತ್‌ ದತೆ 28ಕ್ಕೆ3, ಅಜಯ್‌ ಮಂಡಲ್‌ 15ಕ್ಕೆ2, ಬಿನ್ನಿ ಸ್ಯಾಮುಯೆಲ್‌ 9ಕ್ಕೆ2, ಪಂಕಜ್‌ ರಾವ್‌ 44ಕ್ಕೆ1, ವೀರಪ್ರತಾಪ್‌ ಸಿಂಗ್‌ 39ಕ್ಕೆ1, ಶಶಾಂಕ್‌ 22ಕ್ಕೆ1).

ಛತ್ತೀಸಗಡ ರಾಜ್ಯ ಕ್ರಿಕೆಟ್‌ ಸಂಘ: ಮೊದಲ ಇನಿಂಗ್ಸ್‌; 43 ಓವರ್‌ಗಳಲ್ಲಿ 147 ಮತ್ತು 4.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 28 (ಜೀವನ್‌ಜ್ಯೋತ್‌ ಸಿಂಗ್‌ ಔಟಾಗದೆ 10, ರಿಷಭ್‌ ತಿವಾರಿ ಔಟಾಗದೆ 11).

ಫಲಿತಾಂಶ: ಡ್ರಾ. ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿದ್ದ ಆಂಧ್ರ ತಂಡಕ್ಕೆ ಪ್ರಶಸ್ತಿ.

Post Comments (+)