ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿ ಪ್ರಿಯಂ ಗರ್ಗ್

19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದ ನಾಯಕ
Last Updated 15 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು:ತಂಡದಲ್ಲಿರುವ ಆಟಗಾರರು ಒಗ್ಗಟ್ಟಿನಿಂದ ಆಡಿದರೆ ಮಾತ್ರ ಯಶಸ್ಸು ಸಾಧ್ಯ. ಆದ್ದರಿಂದ ನಾಯಕನೂ ಸೇರಿದಂತೆ ಪ್ರತಿಯೊಬ್ಬ ಆಟಗಾರನೂ ಪರಸ್ಪರ ತಮ್ಮ ಸಾಮರ್ಥ್ಯ, ದೌರ್ಬಲ್ಯಗಳನ್ನು ಅರಿತು ಆಡಬೇಕು. ನಮ್ಮ ತಂಡದಲ್ಲಿ ಎಲ್ಲರಲ್ಲಿಯೂ ಉತ್ತಮ ಬಾಂಧವ್ಯ ಇದೆ ಎಂದು 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ನಾಯಕ ಪ್ರಿಯಂ ಗರ್ಗ್ ಹೇಳಿದರು.

ದಕ್ಷಿಣ ಆಫ್ರಿಕಾದಲ್ಲಿ ಜನವರಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಆಡಲಿರುವ ತಂಡವು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಾಲೀಮು ನಡೆಸುತ್ತಿದೆ. ‌

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಂ, ‘ಹೋದ ಸಲ ವಿಶ್ವಕಪ್ ಗೆದ್ದಾಗ ಭಾರತ ತಂಡವನ್ನು ಮುನ್ನಡೆಸಿದ್ದ ಪೃಥ್ವಿ ಶಾ ಅವರು ಕೊಟ್ಟ ಸಲಹೆಗಳು ಇವು. ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನ ಸಾಮರ್ಥ್ಯದ ಕುರಿತು ನಾಯಕನಿಗೆ ಅರಿವು ಇರಬೇಕು. ಪಂದ್ಯದಲ್ಲಿ ಅಗತ್ಯಕ್ಕೆ ತಕ್ಕಂತೆ ಆಟಗಾರರಿಗೆ ಹೊಣೆ ನೀಡಿದರೆ ಯಶಸ್ಸು ಸುಲಭವೆಂದೂ ಅವರು (ಪೃಥ್ವಿ) ಹೇಳಿದ್ದಾರೆ. ಈ ಹಿಂದೆ ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದ ಮತ್ತು ಈಗ ಭಾರತ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಅವರೊಂದಿಗೆ ಇದುವರೆಗೆ ಮಾತನಾಡಲು ಸಾಧ್ಯವಾಗಿಲ್ಲ’ ಎಂದರು.

‘ಹಾಲಿ ಚಾಂಪಿಯನ್ ಆಗಿರುವ ನಮ್ಮ ತಂಡವು ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ. ದೊಡ್ಡ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸುವ ಸುವರ್ಣಾವಕಾಶ ಲಭಿಸಿದೆ. ಸಹ ಆಟಗಾರರೂ ಉತ್ತಮವಾಗಿದ್ದಾರೆ. ಇದಕ್ಕೂ ಮುನ್ನ ಬಹಳಷ್ಟು ಟೂರ್ನಿಗಳಲ್ಲಿ ಆಡಿದ್ದೇವೆ. ಆದ್ದರಿಂದ ಆತ್ಮವಿಶ್ವಾಸವಿದೆ. ಹೆಚ್ಚು ಒತ್ತಡವಿಲ್ಲ. ಯಶಸ್ಸು ಸಾಧಿಸುತ್ತೇವೆ’ ಎಂದು ಪ್ರಿಯಂ ಹೇಳಿದರು.

ಈ ಸಂದರ್ಭದಲ್ಲಿ ಹಾಜರಿದ್ದ ತಂಡದ ಕೋಚ್ ಪಾರಸ್ ಮಾಂಬ್ರೆ, ‘ತಂಡದಲ್ಲಿರುವ ಆಟಗಾರರು ವಯಸ್ಸಿನಲ್ಲಿ ಕಿರಿಯರು. ಆದರೆ, ವೃತ್ತಿಪರತೆಯನ್ನು ಮೈಗೂಡಿಸಿಕೊಂಡಿದ್ದಾರೆ. ತಂಡದಲ್ಲಿ ಆಲ್‌ರೌಂಡರ್‌ಗಳು ಇದ್ದಾರೆ. ಆದ್ದರಿಂದ ಅವರನ್ನು ತರಬೇತುಗೊಳಿಸುವುದು ಸವಾಲಿನ ವಿಷಯವೇ ಆಗಿರಲಿಲ್ಲ. ವಯೋಮಿತಿ ವಿಭಾಗಗಳಲ್ಲಿ ಸಾಕಷ್ಟು ಕ್ರಿಕೆಟ್ ಆಡಿರುವ ಅನುಭವ ಇವರಿಗೆ ಇದೆ’ ಎಂದರು.

‘ಜಯದ ಹವ್ಯಾಸ ಬೆಳೆಸಿಕೊಳ್ಳುವುದು ಯಾವುದೇ ತಂಡಕ್ಕೆ ಮುಖ್ಯ. ಈ ಬಳಗದಲ್ಲಿ ಅಂತಹ ಛಲ ಇರುವ ಆಟಗಾರರು ಇದ್ದಾರೆ. ಸೀನಿಯರ್ ತಂಡ (ಭಾರತ)ದ ಆಟವೂ ಅವರಿಗೆ ಪ್ರೇರಣೆಯಾಗಿದೆ. ಅಲ್ಲದೇ ಎಲ್ಲರೂ ಭವಿಷ್ಯದಲ್ಲಿ ರಾಷ್ಟ್ರೀಯ ಸೀನಿಯರ್ ತಂಡಕ್ಕೆ ಆಡುವ ಕನಸು ಕಾಣುತ್ತಿರುವವರೇ ಆಗಿದ್ದಾರೆ. ಆದ್ದರಿಂದ ಅದೇ ಅವರ ಸಾಮರ್ಥ್ಯವನ್ನು ವೃದ್ಧಿಸುವುದು ಖಚಿತ’ ಎಂದು ಪಾರಸ್ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕ್ರಿಕೆಟಿಗರಲ್ಲಿ ಮಾನಸಿಕ ಒತ್ತಡದ ಕುರಿತು ಹೆಚ್ಚು ಚರ್ಚೆಗಳು ನಡೆಯುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾರಸ್, ‘ಈ ಯುವ ತಂಡದಲ್ಲಿ ಅಂತಹ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಆಟಗಾರರು ಉತ್ಸಾಹಿಗಳಾಗಿದ್ದಾರೆ. ಸಾಧಿಸುವ ಛಲ ಅವರಲ್ಲಿದೆ. ಆದರೆ, ತಂಡದೊಳಗೆ ತಮ್ಮ ಸಹ ಆಟಗಾರರೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ. ಸಂವಹನ ಪರಿಣಾಮಕಾರಿಯಾಗಿದೆ. ಯಾವುದೇ ಸಮಸ್ಯೆಯನ್ನೂ ಮುಕ್ತವಾಗಿ ಚರ್ಚಿಸಿ ಪರಿಹಾರ ಪಡೆದುಕೊಳ್ಳುವ ವಾತಾವರಣ ತಂಡದಲ್ಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT