ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

U19 World Cup Final: ಭಾರತ ಯುವಪಡೆಗೆ ಆರನೇ ಕಿರೀಟದ ಕನಸು

19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಇಂದು: ಉದಯ್, ಸಚಿನ್ ಮೇಲೆ ಕಣ್ಣು
Published 11 ಫೆಬ್ರುವರಿ 2024, 0:30 IST
Last Updated 11 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆನೊನಿ, ದಕ್ಷಿಣ ಆಫ್ರಿಕಾ: ಭಾರತ ಯುವ ಕ್ರಿಕೆಟ್‌ ಪಡೆಯಲ್ಲಿರುವ ಚಿಗುರುಮೀಸೆಯ ಹುಡುಗರ ಕಂಗಳಲ್ಲಿ ಈಗ ಭರಪೂರ ಕನಸುಗಳು. ಯಶಸ್ಸಿನ ಆಗಸದಲ್ಲಿ ರೆಕ್ಕೆ ಬಿಚ್ಚಿ ಹಾರುವ ಹುಮ್ಮಸ್ಸು.

ಭಾನುವಾರ ಇಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಗೆದ್ದು ದಾಖಲೆ ಬರೆಯುವ ಉತ್ಸಾಹ ಈ ತಂಡದಲ್ಲಿದೆ. ಐದು ಬಾರಿಯ ಚಾಂಪಿಯನ್‌ ಭಾರತ ತಂಡವು ಮತ್ತೊಂದು ಕಿರೀಟದ ಕನವರಿಕೆಯಲ್ಲಿದೆ.

ಹೋದ ವರ್ಷ ನವೆಂಬರ್‌ 19ರಂದು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ವಿಶ್ವಕಪ್ ಫೈನಲ್‌ನಲ್ಲಿ ಪ್ಯಾಟ್‌ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಎದುರು ಸೋತಿತ್ತು. ಇದೀಗ ಉಭಯ ದೇಶಗಳ ‘ಭಾವಿ ತಾರೆ‘ಗಳು ಮುಖಾಮುಖಿಯಾಗಲಿವೆ. ತಮ್ಮ ಸೀನಿಯರ್‌ಗಳಿಗೆ ಆದ ಮುಖಭಂಗದ ಸೇಡನ್ನು  ಉದಯ್  ಸಹಾರನ್ ನಾಯಕತ್ವದ ತಂಡ ತೀರಿಸಿಕೊಳ್ಳುವುದೇ?

‘ನಾವು ಮುಯ್ಯಿ ತೀರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡುತ್ತಿಲ್ಲ. ವರ್ತಮಾನದ ಮೇಲೆ ಮಾತ್ರ ನಮ್ಮ ಗಮನವಿದೆ. ಹಳೆಯ ಘಟನೆ ಅಥವಾ ಭವಿಷ್ಯದ ಬಗ್ಗೆ ಚಿಂತಿತರಾಗಿಲ್ಲ’ ಎಂದು ಉದಯ್ ಸ್ಪಷ್ಟಪಡಿಸಿದ್ದಾರೆ.

ಸಚಿನ್ ದಾಸ್, ಮುಷೀರ್ ಖಾನ್ ಮತ್ತು ಸೂರ್ಯಕುಮಾರ್ ಪಾಂಡೆ ಅವರಂತಹ ಪ್ರತಿಭಾವಂತರು ತಂಡದಲ್ಲಿದ್ದಾರೆ. ಆದರೆ ಆಸ್ಟ್ರೇಲಿಯಾ ತಂಡದಲ್ಲಿ ಪರಿಣಾಮಕಾರಿ ಬೌಲರ್‌ಗಳು ಇದ್ದಾರೆ. ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅಮೋಘ ಬೌಲಿಂಗ್ ಮಾಡಿದ್ದ ಟಾಮ್ ಸ್ಟ್ರೇಕರ್ ಮತ್ತು ಕ್ಯಾಲಂ ವಿಡ್ಲೆರ್ ಅವರು ಭಾರತದ ಬ್ಯಾಟಿಂಗ್ ಪಡೆಗೆ ಸವಾಲೊಡ್ಡಬಲ್ಲರು.

ಒಂಬತ್ತನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡುವ ಸಮರ್ಥರು ಆಸ್ಟ್ರೇಲಿಯಾ ಬಳಗದಲ್ಲಿದ್ದಾರೆ. ಆದ್ದರಿಂದ ಭಾರತದ ಬೌಲರ್‌ಗಳಾದ ನಮನ್ ತಿವಾರಿ ಮತ್ತು ರಾಜ್ ಲಂಬಾಣಿ ಅವರ ಮೇಲೆ ಒತ್ತಡ ಹೆಚ್ದಿದೆ.

ಭಾರತ ತಂಡವು 2012 ಮತ್ತು 2018ರ ಟೂರ್ನಿಗಳ ಫೈನಲ್‌ಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿತ್ತು.  2016ರಿಂದ ಇಲ್ಲಿಯವರೆಗೆ ನಡೆದ ಎಲ್ಲ ವಿಶ್ವಕಪ್ ಟೂರ್ನಿಗಳಲ್ಲಿಯೂ ಫೈನಲ್ ತಲುಪಿದ ಹೆಗ್ಗಳಿಕೆ ಭಾರತದ್ದು. 2016 ಹಾಗೂ 2020ರಲ್ಲಿ ಬಿಟ್ಟರೆ ಉಳಿದ ಆವೃತ್ತಿಗಳಲ್ಲಿ ಜಯಭೇರಿ ಬಾರಿಸಿತ್ತು.

2008ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ತಂಡವು ಪ್ರಶಸ್ತಿ ಜಯಿಸಿದ ನಂತರ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಗೆ ಅಪಾರ ಜನಪ್ರಿಯತೆ ಬಂದಿತು. ಟಿ.ವಿಯಲ್ಲಿ ನೇರಪ್ರಸಾರವೂ ಆರಂಭವಾಯಿತು. ಭಾರತ ಸೀನಿಯರ್ ತಂಡಕ್ಕೆ ಬಹಳಷ್ಟು ಪ್ರತಿಭಾವಂತ ಆಟಗಾರರನ್ನು ಈ ವಯೋವರ್ಗದ ಟೂರ್ನಿಯು ನೀಡಿದೆ. ರಾಷ್ಟ್ರೀಯ ತಂಡವನ್ನಷ್ಟೇ ಅಲ್ಲ. ಐಪಿಎಲ್ ಫ್ರ್ಯಾಂಚೈಸಿಗಳ ಗಮನ ಸೆಳೆಯಲೂ  ಈ ಟೂರ್ನಿಯ ಯಶಸ್ಸು ಕಾರಣವಾಗಿರುವ ಉದಾಹರಣೆಗಳು ಇವೆ. ಈ ಬಾರಿಯೂ ಅದೇ ನಿರೀಕ್ಷೆಯನ್ನು ಈ ಫೈನಲ್ ಮೂಡಿಸಿದೆ.

ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಸಾಧನೆ

ಭಾರತ ಜಯ: 5

ಆಸ್ಟ್ರೇಲಿಯಾ ಗೆಲುವು;3

ತಂಡಗಳು

ಭಾರತ: ಉದಯ ಸಹಾರನ್ (ನಾಯಕ) ಸೌಮಿಕುಮಾರ್ ಪಾಂಡೆ (ಉಪನಾಯಕ) ಅರ್ಷಿಣ್ ಕುಲಕರ್ಣಿ ಆದರ್ಶ್ ಸಿಂಗ್ ರುದ್ರ ಮಯೂರ್ ಪಟೇಲ್ ಸಚಿನ್ ದಾಸ್ ಪ್ರಿಯಾಂಶು ಮಾಲಿಯಾ ಮುಷೀರ್ ಖಾನ್ ಅರವೆಳ್ಳಿ ಅವನೀಶ್ ರಾವ್ (ವಿಕೆಟ್‌ಕೀಪರ್) ಮುರುಗನ್ ಅಭಿಷೇಕ್ ಇನ್ನೇಶ್ ಮಹಾಜನ್ (ವಿಕೆಟ್‌ಕೀಪರ್) ಧನುಷ್ ಗೌಡ ಆರಾಧ್ಯ ಶುಕ್ಲಾ ರಾಜ್ ಲಿಂಬಾನಿ ನಮನ್ ತಿವಾರಿ.

ಆಸ್ಟ್ರೇಲಿಯಾ: ಹಗ್ ವಿಬ್‌ಜೆನ್ (ನಾಯಕ) ಲಚ್ಲನ್ ಎಟ್ಕೆನ್ ಚಾರ್ಲಿ ಆ್ಯಂಡರ್ಸನ್ ಹರಕಿರತ್ ಬಜ್ವಾ ಮಾಳಿ ಬಿಯರ್ಡ್‌ಮ್ಯಾನ್ ಟಾಮ್ ಕ್ಯಾಂಪ್‌ಬೆಲ್ ಹ್ಯಾರಿ ಡಿಕ್ಸನ್ ರಿಯಾನ್ ಹಿಕ್ಸ್ (ವಿಕೆಟ್‌ಕೀಪರ್) ಸ್ಯಾಮ್ ಕೊನ್ಸ್ಟಾಸ್ ರಫೆಲ್ ಮ್ಯಾಕ್‌ಮಿಲನ್ ಏಡನ್ ಒಕಾನರ್ ಹರ್ಜಾಸ್ ಸಿಂಗ್ ಟಾಮ್ ಸ್ಟ್ರೇಕರ್ ಕ್ಯಾಲಂ ವಿಡ್ಲೆರ್ ಒಲೀ ಪೀಕೆ.

ಪಂದ್ಯ ಆರಂಭ: ಮಧ್ಯಾಹ್ನ 1.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT