ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ ಫೈನಲ್‌ಗೆ ಸೌರಾಷ್ಟ್ರ–ಮಹಾರಾಷ್ಟ್ರ

Last Updated 1 ಡಿಸೆಂಬರ್ 2022, 4:44 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ದೇಶಿ ಏಕದಿನ ಕ್ರಿಕೆಟ್ ಟ್ರೋಫಿಯನ್ನು ಜಯಿಸುವ ಕರ್ನಾಟಕದ ಕನಸಿಗೆ ಸೌರಾಷ್ಟ್ರದ ಎಡಗೈ ಮಧ್ಯಮವೇಗಿ ಜೈದೇವ್ ಉನದ್ಕತ್ ತಣ್ಣೀರು ಸುರಿದರು.

ಬುಧವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೌರಾಷ್ಟ್ರ ತಂಡವು 5 ವಿಕೆಟ್‌ಗಳಿಂದ ಗೆದ್ದಿತು. ಲೀಗ್ ಹಂತದಲ್ಲಿ ಮಿಂಚಿದ್ದ ಬ್ಯಾಟರ್‌ಗಳನ್ನು ಕಟ್ಟಿಹಾಕಿದ ಸೌರಾಷ್ಟ್ರ ಮೇಲುಗೈ ಸಾಧಿಸಿತು.

ಆರಂಭಿಕ ಬ್ಯಾಟರ್ ಆರ್. ಸಮರ್ಥ್ (88; 135ಎ, 4X4, 6X1) ಅವರೊಬ್ಬರೇ ತಮ್ಮ ಮೇಲಿನ ಭರವಸೆ ಉಳಿಸಿಕೊಂಡರು. ಅದರಿಂದಾಗಿ ತಂಡವು 49.1 ಓವರ್‌ಗಳಲ್ಲಿ 171 ರನ್ ಗಳಿಸಿತು. ಈ ಸಾಧಾರಣ ಗುರಿಯನ್ನು ಸೌರಾಷ್ಟ್ರ ತಂಡವು 36.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಸಾಧಿಸಿತು.

ಜೈ ಗೋಹಿಲ್ (61; 82ಎ) ಮತ್ತು ಪ್ರೇರಕ್ ಮಂಕಡ್ (35; 32ಎ) ಅವರು ಕರ್ನಾಟಕದ ಬೌಲರ್‌ಗಳ ಪ್ರಯತ್ನಕ್ಕೆ ಅಡ್ಡಿಯಾದರು. ಕೃಷ್ಣಪ್ಪ ಗೌತಮ್ ಎರಡು, ವಿದ್ವತ್ ಕಾವೇರಪ್ಪ, ಕೌಶಿಕ್ ಹಾಗೂ ಶ್ರೇಯಸ್ ತಲಾ ಒಂದು ವಿಕೆಟ್ ಗಳಿಸಿದರು.

ಗುಂಪು ಹಂತದಲ್ಲಿ ಮಿಂಚಿದ್ದ ನಿಕಿನ ಜೋಸ್, ನಾಯಕ ಮಯಂಕ್ ಅಗರವಾಲ್, ಅನುಭವಿ ಮನೀಷ್ ಪಾಂಡೆ, ಭರವಸೆಯ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರ ಬ್ಯಾಟಿಂಗ್ ವೈಫಲ್ಯವೇ ತಂಡದ ಸೋಲಿಗೆ ಕಾರಣವಾಯಿತು.

ಋತುರಾಜ್ ಅಬ್ಬರ: ಇನ್ನೊಂದು ಸೆಮಿಫೈನಲ್‌ನಲ್ಲಿ ಋತುರಾಜ್ ಗಾಯಕವಾಡ್ ಹಾಗೂ ಅಂಕಿಗ್ ಬಾವ್ನೆ ಅವರ ಶತಕಗಳ ಬಲದಿಂದ ಮಹಾರಾಷ್ಟ್ರ ತಂಡವು ಅಸ್ಸಾಂ ವಿರುದ್ಧ 12 ರನ್‌ಗಳಿಂದ ಗೆದ್ದಿತು.

ಕಳೆದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಏಳು ಸಿಕ್ಸರ್ ಸಿಡಿಸಿದ್ದ ಋತುರಾಜ್ ಅಸ್ಸಾಂ ಎದುರೂ ಚೆಂದದ ಶತಕ ದಾಖಲಿಸಿದರು. ಮಧ್ಯಮ ಕ್ರಮಾಂಕದ ಆಟಗಾರ ಅಂಕಿತ್ ಕೂಡ ಶತಕ ಬಾರಿಸಿದರು. 350 ರನ್‌ಗಳ ಗುರಿ ಬೆನ್ನಟ್ಟಿದ ಅಸ್ಸಾಂ ದಿಟ್ಟ ಹೋರಾಟ ಮಾಡಿತು. ಸ್ವರೂಪಂ ಪುರಕಾಯಸ್ತ (95 ರನ್) ಐದು ರನ್‌ಗಳಿಂದ ಶತಕ ಕೈತಪ್ಪಿಸಿಕೊಂಡರು.

ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಸೌರಾಷ್ಟ್ರ ಮತ್ತು ಮಹಾರಾಷ್ಟ್ರ ತಂಡಗಳು ಮುಖಾಮುಖಿಯಾಗಲಿವೆ.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 49.1 ಓವರ್‌ಗಳಲ್ಲಿ 171 (ಆರ್. ಸಮರ್ಥ್ 88, ನಿಕಿನ್ ಜೋಸ್ 12, ಮನೋಜ್ ಬಾಂಡಗೆ 22, ರೋನಿತ್ ಮೋರೆ 16, ಜೈದೇವ್ ಉನದ್ಕತ್ 26ಕ್ಕೆ4, ಪ್ರೇರಕ್ ಮಂಕಡ್ 34ಕ್ಕೆ2) ಸೌರಾಷ್ಟ್ರ: 36.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 172 (ಜೈ ಗೋಹಿಲ್ 61, ಸಮರ್ಥ್ ವ್ಯಾಸ್ 33, ಪ್ರೇರಕ್ ಮಂಕಡ್ 36, ಅರ್ಪಿತ್ ವಸವದಾ ಔಟಾಗದೆ 25, ಕೆ. ಗೌತಮ್ 50ಕ್ಕೆ2) ಫಲಿತಾಂಶ: ಸೌರಾಷ್ಟ್ರ ತಂಡಕ್ಕೆ 5 ವಿಕೆಟ್‌ಗಳ ಜಯ.

ಮಹಾರಾಷ್ಟ್ರ: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 350 (ಋತುರಾಜ್ ಗಾಯಕವಾಡ್ 168, ಬಚಾವ್ 41, ಅಂಕಿತ್ ಬಾವ್ನೆ 110, ಮುಕ್ತಾರ್ ಹುಸೇನ್ 42ಕ್ಕೆ3) ಅಸ್ಸಾಂ: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 338 (ರಿಷವ್ ದಾಸ್ 53, ಸಿಬಶಂಕರ್ ರಾಯ್ 78, ಸ್ವರೂಪಂ ಪುರಕಾಯಸ್ತ 95, ಮನೋಜ್ ಇಂಗಳೆ 66ಕ್ಕೆ2, ರಾಜ್ಯವರ್ಧನ್ ಹಂಗರಗೇಕರ್ 65ಕ್ಕೆ4) ಫಲಿತಾಂಶ: ಮಹಾರಾಷ್ಟ್ರ ತಂಡಕ್ಕೆ 12 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT