ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಶ್ಚಿತ ಸ್ಥಿತಿಯಲ್ಲಿ ಅಫ್ಗನ್ ಕ್ರಿಕೆಟ್; ಕ್ರಿಕೆಟ್ ಪಟುಗಳಿಗೆ ಮತ್ತೆ ಸಂಕಷ್ಟ

ತಾಲಿಬಾನ್ ಆಡಳಿತ ಮುಕ್ತಾಯಗೊಂಡ ಪುಟಿದೆದ್ದಿದ್ದ ಕ್ರಿಕೆಟ್ ಪಟುಗಳಿಗೆ ಮತ್ತೆ ಸಂಕಷ್ಟ
Last Updated 23 ಆಗಸ್ಟ್ 2021, 14:35 IST
ಅಕ್ಷರ ಗಾತ್ರ

ಕಾಬೂಲ್: ತಾಲಿಬಾನ್‌ ಆಡಳಿತಕ್ಕೆ ಹೆದರಿ ಅಫ್ಗನ್‌ನಿಂದ ಬೇರೆ ದೇಶಕ್ಕೆ ಹಾರಲು ನೂರಾರು ಸಂಖ್ಯೆಯಲ್ಲಿ ಜನರು ಕಾಬೂಲ್ ವಿಮಾನ ನಿಲ್ದಾಣದತ್ತ ನಿತ್ಯವೂ ಸಾಗುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಬಿಕೋ ಎನ್ನುತ್ತಿದೆ. ಇದು, ಅಫ್ಗಾನಿಸ್ತಾನದಲ್ಲಿ ಕ್ರಿಕೆಟ್ ಸೇರಿದಂತೆ ಎಲ್ಲ ಕ್ರೀಡೆಯ ಸದ್ಯದ ಸ್ಥಿತಿಗೆ ಕನ್ನಡಿ ಹಿಡಿಯುತ್ತಿದೆ.

ತಾಲಿಬಾನ್ ಆಡಳಿತ ಆರಂಭವಾದ ನಂತರ ದೇಶದ ಕ್ರಿಕೆಟಿಗರು ಆಟದತ್ತ ಗಮನ ಹರಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ. ಶ್ರೀಲಂಕಾ ಎದುರಿನ ಸರಣಿಗೆ ತಂಡ ಸಜ್ಜಾಗುತ್ತಿದೆ. ಪುರುಷರ ಕ್ರಿಕೆಟ್‌ಗೆ ಯಾವ ಧಕ್ಕೆಯೂ ಇಲ್ಲ ಎಂದು ತಾಲಿಬಾನ್‌ ಹೇಳಿದೆ. ಆದರೂ ದೇಶದಲ್ಲಿ ನಿರ್ಮಾಣಗೊಂಡಿರುವ ವಿಷಮ ಸ್ಥಿತಿ ಕ್ರೀಡೆಯ ಮೇಲೆ ದುಷ್ಪರಿಣಾಮ ಬೀರಿದೆ.

‘ಆಟಗಾರರ ಕಣ್ಣೋಟದಲ್ಲೂ ಮಾತಿನಲ್ಲೂ ಆತಂಕ ಎದ್ದು ಕಾಣುತ್ತಿದೆ. ಅವರು ಕಳುಹಿಸುವ ಸಂದೇಶಗಳಲ್ಲೂ ಮನಸ್ಸಿನ ಭಾವನೆಗಳು ಧ್ವನಿಸುತ್ತಿವೆ. ಕ್ರೀಡಾಪಟುವಿಗೆ ತೊಂದರೆ ಮಾಡುವುದಿಲ್ಲ ಎಂದು ತಾಲಿಬಾನ್ ಹೇಳಿದೆ. ಆದರೆ ಯಾವಾಗ ಏನಾಗುತ್ತದೆ ಎಂದು ಯಾರು ಬಲ್ಲ’ ಎಂದು ಮಧ್ಯಮ ವೇಗದ ಬೌಲರ್‌ ನವೀದ್ ಉಲ್ ಹಕ್ ಅವರು ಬಿಬಿಸಿ ರೇಡಿಯೊಗೆ ನೀಡಿರುವ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ವೆಸ್ಟ್‌ ಇಂಡೀಸ್‌ನಲ್ಲಿ ಕೆರಿಬಿಯನ್ ಲೀಗ್‌ ಆಡಲು ತೆರಳಿದ್ದ ಅವರು ಈ ಮಾತು ಆಡಿದ್ದರು. 1996ರಿಂದ 2001ರ ಅವಧಿಯಲ್ಲಿ ಕಠಿಣ ಇಸ್ಲಾಮಿಕ್ ಕಾನೂನುಗಳನ್ನು ಜಾರಿಗೆ ತಂದಿದ್ದ ತಾಲಿಬಾನ್‌ ಪಡೆಯ ಕ್ರೌರ್ಯವನ್ನು ಕಂಡಿದ್ದರಿಂದ ಅವರಿಂದ ಈ ಮಾತು ಬಂದಿತ್ತು. ಕ್ರೀಡೆ ಸೇರಿದಂತೆ ಅನೇಕ ಬಗೆಯ ಮನರಂಜನೆಗಳಿಗೆ ತಾಲಿಬಾನ್‌ನವರು ಅಂದು ಕಡಿವಾಣ ಹಾಕಿದ್ದರು. ಕ್ರೀಡಾಂಗಣಗಳನ್ನು ದುಷ್ಕೃತ್ಯಗಳಿಗಾಗಿ ಬಳಸಿಕೊಂಡಿದ್ದರು.

ತಾಲಿಬಾನ್ ಆಡಳಿತ ಮುಕ್ತಾಯಗೊಂಡ ಪುಟಿದೆದ್ದ ಕ್ರಿಕೆಟ್ ಪಟುಗಳು ಅಮೋಘ ಆಟದ ಮೂಲಕ ಗಮನ ಸೆಳೆದಿದ್ದರು. 2017ರಲ್ಲಿ ಅಫ್ಗನ್ ತಂಡಕ್ಕೆ ಟೆಸ್ಟ್ ಮಾನ್ಯತೆ ಲಭಿಸಿತ್ತು. ಈಗ ಏಕದಿನ ಮತ್ತು ಟಿ20 ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ವಿಶ್ವದ ಪ್ರಮುಖ 10 ತಂಡಗಳಲ್ಲಿ ಅಫ್ಗನ್ ಕೂಡ ಒಂದಾಗಿದೆ. ಹಿಂದಿನ 20 ವರ್ಷಗಳಲ್ಲಿ ಕಟ್ಟಿಬೆಳೆಸಿದ ಕ್ರಿಕೆಟ್ ಸೌಧ ಈಗ ಮತ್ತೆ ಕುಸಿದು ಬೀಳುವ ಆತಂಕ ಎದುರಾಗಿದೆ.

ಅಧ್ಯಕ್ಷರಾಗಿ ಅಜೀಜುಲ್ಲಾ ಮರುನೇಮಕ

ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿಯ (ಎಸಿಬಿ) ಅಧ್ಯಕ್ಷರಾಗಿ ಅಜೀಜುಲ್ಲ ಫಜ್ಲಿ ಅವರನ್ನು ಮರುನೇಮಕ ಮಾಡಲಾಗಿದೆ ಎಂದು ಮಂಡಳಿ ಟ್ವೀಟ್ ಮೂಲಕ ತಿಳಿಸಿದೆ. 2019ರ ವಿಶ್ವಕಪ್‌ ನಂತರ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿತ್ತು.

ಭಾನುವಾರ ಎಸಿಬಿ ಅಧಿಕಾರಿಗಳನ್ನು ಭೇಟಿಯಾಗಿ ತಾಲಿಬಾನ್ ಸದಸ್ಯರು ಚರ್ಚೆ ನಡೆಸಿದ್ದರು. ಅಲ್ಲಿಯ ವರೆಗೆ ಅಧ್ಯಕ್ಷರಾಗಿದ್ದ ಫರ್ಹಾನ್ ಯೂಸೆಫಜೈ ಅವರ ಬದಲಿಗೆ ಆ ನಂತರಅಜೀಜುಲ್ಲ ಅವರನ್ನು ಅಧ್ಯಕ್ಷ ಸ್ಥಾನಕ್ಕೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT