ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಶಫಾಲಿ–ಡ್ಯಾನಿಯಲಿ ಉತ್ತಮ ಜೊತೆಯಾಟ; 4 ವಿಕೆಟ್ ಕಬಳಿಸಿದ ದೀಪ್ತಿ ಶರ್ಮಾಗೆ

ನಾಟಕೀಯ ಅಂತ್ಯ: ವೆಲೋಸಿಟಿ ಜಯಭೇರಿ

Published:
Updated:
Prajavani

ಜೈಪುರ: ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಗಿ ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ವೆಲೋಸಿಟಿ ತಂಡ ಜಯ ಗಳಿಸಿ ಸಂಭ್ರಮಿಸಿತು.

ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮಹಿಳೆಯರ ಟ್ವೆಂಟಿ–20 ಚಾಲೆಂಜ್ ಕ್ರಿಕೆಟ್ ಟೂರ್ನಿಯಲ್ಲಿ ಮಿಥಾಲಿ ರಾಜ್ ನೇತೃತ್ವದ ವೆಲೋಸಿಟಿ ತಂಡ ಟ್ರೇಲ್ ಬ್ಲೇಜರ್ಸ್‌ ವಿರುದ್ಧ ಮೂರು ವಿಕೆಟ್‌ಗಳಿಂದ ಗೆದ್ದಿತು.

ಮೊದಲ ಪಂದ್ಯದಲ್ಲಿ ಸೂಪರ್‌ ನೋವಾ ವಿರುದ್ಧ ಐದು ವಿಕೆಟ್‌ಗಳಿಂದ ಗೆದ್ದಿದ್ದ ಟ್ರೇಲ್‌ಬ್ಲೇಜರ್ಸ್‌ ಟಾಸ್‌ ಸೋತು ಬ್ಯಾಟಿಂಗ್ ಮಾಡಿತು. ಸೂಸಿ ಬೇಟ್ಸ್ ಮತ್ತು ಹರ್ಲೀನ್ ಡಿಯೋಲ್ ಉತ್ತಮ ಆಟವಾಡಿದರೂ ಇತರ ಆಟಗಾರ್ತಿಯರು ವೈಫಲ್ಯ ಅನುಭವಿಸಿದ ಕಾರಣ ತಂಡ ಕೇವಲ 112 ರನ್ ಕಲೆ ಹಾಕಿತು.

ಗುರಿ ಬೆನ್ನತ್ತಿದ ವೆಲೋಸಿಟಿ 17ನೇ ಓವರ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡು 111 ರನ್‌ ಗಳಿಸಿತ್ತು. ಈ ಸಂದರ್ಭದಲ್ಲಿ ರಾಜೇಶ್ವರಿ ಗಾಯಕವಾಡ್‌ ಮತ್ತು ದೀಪ್ತಿ ಶರ್ಮಾ ತೋರಿದ ಅಮೋಘ ಬೌಲಿಂಗ್ ದಾಳಿಯ ಪರಿಣಾಮ ತಂಡ ನಿರಂತರ ವಿಕೆಟ್ ಕಳೆದುಕೊಂಡಿತು. ಆರು ಎಸೆತಗಳ ಅಂತರದಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ದಿಟ್ಟತನ ತೋರಿದ ಸುಷ್ಮಾ ವರ್ಮಾ ಮತ್ತು ಸುಶ್ರೀ ಪ್ರಧಾನ್ ತಂಡವನ್ನು ಗುರಿ ಮುಟ್ಟಿಸಿದರು.

ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಆರಂಭದಲ್ಲೇ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸಿದರು. ಆದರೆ ತಂಡದ ಮೊತ್ತ 25 ಆಗಿದ್ದಾಗ ಅವರ ಜೊತೆಗಾರ್ತಿ ಹ್ಯಾಲಿ ಮ್ಯಾಥ್ಯೂಸ್‌ ಔಟಾಗಿ ಮರಳಿದರು. ಶೆಫಾಲಿ ಜೊತೆಗೂಡಿದ ಡ್ಯಾನಿಯಲಿ ವ್ಯಾಟ್‌ ಎರಡನೇ ವಿಕೆಟ್‌ಗೆ 38 ರನ್‌ ಜೋಡಿಸಿದರು. ವರ್ಮಾ ಔಟಾದ ನಂತರ ನಾಯಕಿ ಮಿಥಾಲಿ ರಾಜ್ ಜೊತೆ ಸೇರಿದ ಡ್ಯಾನಿಯಲಿ 48 ರನ್‌ಗಳ ಜೊತೆಯಾಟ ಆಡಿದರು.

ಆದರೆ ಅರ್ಧಶತಕದತ್ತ ದಾಪುಗಾಲು ಹಾಕಿದ್ದ ವ್ಯಾಟ್‌ (46; 35 ಎಸೆತ, 2 ಸಿಕ್ಸರ್‌, 5 ಬೌಂಡರಿ) ವಿಕೆಟ್ ಉರುಳಿಸಿದ ಕರ್ನಾಟಕದ ರಾಜೇಶ್ವರಿ ಗಾಯಕವಾಡ್‌ ಟ್ರೇಲ್‌ಬ್ಲೇಜರ್ಸ್‌ ಪಾಳಯದಲ್ಲಿ ಭರವಸೆ ಮೂಡಿಸಿದರು. ನಂತರ ದೀಪ್ತಿ ಶರ್ಮಾ ಮ್ಯಾಜಿಕ್ ಮಾಡಿದರು.

ವೇದಾ ಕೃಷ್ಣಮೂರ್ತಿ, ಮಿಥಾಲಿ ರಾಜ್‌, ಶಿಖಾ ಪಾಂಡೆ ಮತ್ತು ಅಮೆಲಿಯಾ ಕೇರ್ ಅವರು ದೀಪ್ತಿಗೆ ಬಲಿಯಾದರು. ಒಂಬತ್ತನೇ ಕ್ರಮಾಂಕದ ಸುಶ್ರೀ ಪ್ರಧಾನ್‌ 18ನೇ ಓವರ್‌ನ ಕೊನೆಯ ಎಸೆತದಲ್ಲಿ ಎರಡು ರನ್‌ ಗಳಿಸಿ ತಂಡಕ್ಕೆ ಜಯ ಗಳಿಸಿಕೊಟ್ಟರು.

ಹರ್ಲೀನ್ ಡಿಯೋಲ್‌ ಮೋಡಿ: ಮೊದಲು ಬ್ಯಾಟಿಂಗ್ ಮಾಡಿದ ಟ್ರೇಲ್‌ಬ್ಲೇಜರ್ಸ್‌ ತಂಡದ ಪರ ಹರ್ಲೀನ್ ಡಿಯೋಲ್ (43; 40 ಎ, 5 ಬೌಂ) ಮಿಂಚಿದರು. ಆರಂಭಿಕ ಬ್ಯಾಟ್ಸ್‌ವುಮನ್‌ ಮತ್ತು ನಾಯಕಿ ಸ್ಮೃತಿ ಮಂದಾನ ಕೇವಲ 10 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದ ಆಟಗಾರ್ತಿಯರು ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ.

ಬುಧವಾರ ವೆಲೋಸಿಟಿ ಗೆಲ್ಲುವುದರೊಂದಿಗೆ ಮೂರು ತಂಡಗಳು ಕೂಡ ಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದು ಗುರುವಾರ ನಡೆಯಲಿರುವ ವೆಲೋಸಿಟಿ ಮತ್ತು ಸೂಪರ್‌ನೋವಾ ನಡುವಿನ ಪಂದ್ಯದ ನಂತರವಷ್ಟೇ ಫೈನಲ್ ಹಣಾಹಣಿಯಲ್ಲಿ ಸೆಣಸುವ ತಂಡಗಳು ಯಾವುವು ಎಂಬುದು ಖಚಿತವಾಗಲಿದೆ.

Post Comments (+)