ಗುರುವಾರ , ನವೆಂಬರ್ 21, 2019
22 °C

ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್: ಕರ್ನಾಟಕಕ್ಕೆ 223 ರನ್ ಗುರಿ

Published:
Updated:
Prajavani

ಬೆಂಗಳೂರು: ಮಧ್ಯಮವೇಗಿ ಕೌಶಿಕ್ ಕೃಷ್ಣಸ್ವಾಮಿ ವಾಸುಕಿ (46ಕ್ಕೆ4) ಅವರ ಪರಿಣಾಮಕಾರಿ ದಾಳಿಯಿಂದಾಗಿ ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಛತ್ತೀಸಗಡ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು.

ಚಿನ್ನಸ್ವಾಮಿ  ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಛತ್ತೀಸಗಡ ತಂಡವು 49.4 ಓವರ್‌ಗಳಲ್ಲಿ 223 ರನ್‌ ಗಳಿಸಿತು. ಕೌಶಿಕ್ ದಾಳಿಗೆ ಆರಂಭದಲ್ಲಿಯೇ ಆಘಾತ ಅನುಭವಿಸಿ ಅಲ್ಪಮೊತ್ತಕ್ಕೆ ಕುಸಿಯಬೇಕಿದ್ದ ತಂಡಕ್ಕೆ ಅಮನ್‌ದೀಪ್ ಖರೆ (78 ರನ್) ಅರ್ಧಶತಕ ಮತ್ತು ಸುಮಿತ್ ರುಯಕರ್ (40ರನ್) ಅವರು ಚೇತರಿಕೆ ನೀಡಿದರು.

ಕರ್ನಾಟಕದ ಬೌಲರ್‌ಗಳಾದ ಅಭಿಮನ್ಯು ಮಿಥುನ್, ಕೆ. ಗೌತಮ್ ಮತ್ತು ಪ್ರವೀಣಕುಮಾರ್ ದುಬೆ ತಲಾ ಎರಡು ವಿಕೆಟ್ ಗಳಿಸಿದರು. ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರಿಗೆ ವಿಶ್ರಾಂತಿ ನೀಡಿ ದುಬೆಗೆ ಅವಕಾಶ ನೀಡಲಾಗಿದೆ.

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿಯಲ್ಲಿ ಮಿಂಚಿ ಬಂದಿರುವ ಮಯಂಕ್ ಅಗರವಾಲ್ ಈ ಪಂದ್ಯದಲ್ಲಿ ಕಣಕ್ಕಿಳಿದರು. ಉತ್ತಮ ಫೀಲ್ಡಿಂಗ್ ಮೂಲಕ ಗಮನ ಸೆಳೆದರು. ಈ ಪಂದ್ಯದಲ್ಲಿಯೂ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಬಿ.ಆರ್. ಶರತ್ ಅವರಿಗೆ ವಿಶ್ರಾಂತಿ ಕೊಡಲಾಯಿತು. ಕೆ.ಎಲ್. ರಾಹುಲ್ ಕೀಪಿಂಗ್ ನಿರ್ವಹಿಸಿದರು.

ಸಂಕ್ಷಿಪ್ತ ಸ್ಕೋರು: ಛತ್ತೀಸಗಡ: 49.4 ಓವರ್‌ಗಳಲ್ಲಿ 223 (ಆಷುತೋಷ್ ಸಿಂಗ್ 20, ಹರಪ್ರೀತ್ ಸಿಂಗ್ ಭಾಟಿಯಾ 25, ಅಮನದೀಪ್ ಖರೆ 78, ಅಜಯ್ ಜಾಧವ್ 26, ಸುಮಿತ್ ರುಯಕರ್ 40, ವಿ. ಕೌಶಿಕ್ 46ಕ್ಕೆ4, ಮಿಥುನ್ ಅಭಿಮನ್ಯು 44ಕ್ಕೆ2, ಗೌತಮ್ ಕೃಷ್ಣಪ್ಪ 30ಕ್ಕ2, ಪ್ರವೀಣಕುಮಾರ್ ದುಎ 43ಕ್ಕೆ2) 

ಪ್ರತಿಕ್ರಿಯಿಸಿ (+)