ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ: ಫೈನಲ್‌ಗೆ ಕರ್ನಾಟಕ–ತಮಿಳುನಾಡು

ರಾಹುಲ್–ದೇವದತ್ತ ಅರ್ಧಶತಕಗಳ ಮಿಂಚು; ಅಬ್ಬರಿಸಿದ ಮಯಂಕ್ ಅಗರವಾಲ್
Last Updated 23 ಅಕ್ಟೋಬರ್ 2019, 19:05 IST
ಅಕ್ಷರ ಗಾತ್ರ

ಬೆಂಗಳೂರು: ಬುಧವಾರ ಬೆಳಿಗ್ಗೆಯವರೆಗೂ ಸುರಿದ ಮಳೆಯಲ್ಲಿ ಹಸನಾಗಿದ್ದ ಚಿನ್ನಸ್ವಾಮಿ ಅಂಗಳದಲ್ಲಿ ಕರ್ನಾಟಕದ ಪ್ರಶಸ್ತಿಯ ಕನಸು ಅರಳಿತು.

ಇಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ 9 ವಿಕೆಟ್‌ಗಳಿಂದ ಛತ್ತೀಸ ಗಡ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ನಗರದ ಹೊರವಲಯದಲ್ಲಿರುವ ಜಸ್ಟ್ ಕ್ರಿಕೆಟ್‌ ಮೈದಾನದಲ್ಲಿ ನಡೆದ ಇನ್ನೊಂದು ಸೆಮಿಯಲ್ಲಿ ಗುಜ ರಾತ್ ವಿರುದ್ಧ ಗೆದ್ದ ತಮಿಳುನಾಡು ಕರ್ನಾಟಕವನ್ನು ಎದುರಿಸಲು ಸಿದ್ಧ ವಾಯಿತು. ಶುಕ್ರವಾರ ಎರಡೂ ತಂಡ ಗಳು ಇಲ್ಲಿ ಮುಖಾಮುಖಿಯಾಗಲಿವೆ

ಕರ್ನಾಟಕ ತಂಡವು ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದೆ. ಹೋದ ವರ್ಷ ಇಲ್ಲಿಯೇ ನಡೆದಿದ್ದ ಟೂರ್ನಿಯ ಗುಂಪು ಹಂತದಲ್ಲಿಯೇ ಸೋತು ನಿರ್ಗಮಿಸಿತ್ತು. ಆದರೆ ಈ ಬಾರಿ ತಂಡದ ಸಂಘಟಿತ ಹೋರಾಟದ ಫಲವಾಗಿ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶದ ಬಾಗಿಲು ತೆರೆದಿದೆ.

ಕರ್ನಾಟಕವು ಎ ಮತ್ತು ಬಿ ಜಂಟಿ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಕ್ವಾರ್ಟರ್‌ಫೈನಲ್ ಪ್ರವೇಶಿಸಿತ್ತು. ಬೆಂಗಳೂರಿನಲ್ಲಿ ಇದೇ ಮೊದಲ ಸಲ ಫೈನಲ್ ಆಡಲಿದೆ. ತಮಿಳುನಾಡು ಆರನೇ ಬಾರಿ ಫೈನಲ್ ಪ್ರವೇಶಿಸುತ್ತಿದೆ. ಈ ಹಿಂದೆ ಐದು ಬಾರಿಯೂ ಅದು ಪ್ರಶಸ್ತಿ ಜಯಿಸಿತ್ತು. ಈ ಸಲ ಸಿ ಗುಂಪಿನಲ್ಲಿ ಎಲ್ಲ ಪಂದ್ಯಗಳನ್ನೂ ಗೆದ್ದು ನಾಕೌಟ್‌ ಪ್ರವೇಶಿಸಿತ್ತು.

ಸುಲಭದ ಜಯ: ಟೂರ್ನಿಯ ಬಹುತೇಕ ಎಲ್ಲ ಪಂದ್ಯಗ ಳಲ್ಲಿಯೂ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿರುವ ಕರ್ನಾಟಕದ ಆರಂಭಿಕ ಜೋಡಿ ಕೆ.ಎಲ್. ರಾಹುಲ್ ಮತ್ತು ದೇವದತ್ತ ಪಡಿಕ್ಕಲ್ ಈ ಪಂದ್ಯದಲ್ಲಿಯೂ ಮಿಂಚಿದರು. ಅವರ 155 ರನ್‌ಗಳ ಜೊತೆಯಾಟವು ತಂಡದ ಸುಲಭ ಜಯಕ್ಕೆ ಕಾರಣವಾಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಛತ್ತೀಸಗಡ ತಂಡವು ಗಳಿಸಿದ್ದ 223 ರನ್‌ಗಳ ಗುರಿಯನ್ನು ಕರ್ನಾಟಕವು ಇನಿಂಗ್ಸ್‌ನಲ್ಲಿ ಇನ್ನೂ 60 ಎಸೆತಗಳು ಬಾಕಿಯಿರುವಂತೆಯೇ ತಲುಪಿತು. 40 ಓವರ್‌ಗಳಲ್ಲಿ 1 ವಿಕೆಟ್‌ಗೆ 229 ರನ್ ಗಳಿಸಿತು.

ಟೂರ್ನಿಯಲ್ಲಿ ಹೋದ ಎರಡೂ ಪಂದ್ಯಗಳಲ್ಲಿ ಶತಕ ಬಾರಿಸಿದ್ದ ಎಡಗೈ ಬ್ಯಾಟ್ಸ್‌ಮನ್ ದೇವದತ್ತ (92; 98ಎಸೆತ, 7ಬೌಂಡರಿ, 3ಸಿಕ್ಸರ್)ಇಲ್ಲಿ ಕೇವಲ ಎಂಟು ರನ್‌ಗಳ ಅಂತರದಿಂದ ‘ಹ್ಯಾಟ್ರಿಕ್’ ತಪ್ಪಿಸಿಕೊಂಡರು. 31ನೇ ಓವರ್‌ನಲ್ಲಿ ಅಜಯ್ ಮಂಡಲ್ ಎಸೆತದಲ್ಲಿ ಅವರು ಕ್ಲೀನ್‌ಬೌಲ್ಡ್‌ ಆದರು. ಆಗ ಕರ್ನಾಟಕವು ಜಯದ ಸನಿಹ ಬಂದಿತ್ತು. ಇನ್ನೊಂದೆಡೆ ಎರಡು ಬಾರಿ ಜೀವದಾನ ಪಡೆದಿದ್ದ ಅನುಭವಿ ಕೆ.ಎಲ್. ರಾಹುಲ್ (ಅಜೇಯ 88; 111ಎಸೆತ, 6ಬೌಂಡರಿ, 1 ಸಿಕ್ಸರ್) ಅರ್ಧಶತಕ ಗಳಿಸಿದರು. ‘ವಿನ್ನಿಂಗ್ ಸಿಕ್ಸರ್‌‘ ಕೂಡ ಸಿಡಿಸಿದರು.

ಅಗರವಾಲ್ ಕಮಾಲ್:ಪಡಿಕ್ಕಲ್ ಔಟಾದ ಮೇಲೆ ಕ್ರೀಸ್‌ಗೆ ಬಂದ ಮಯಂಕ್ ಅಗರವಾಲ್ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿ, ತಮ್ಮನ್ನು ನೋಡಲು ಬಂದಿದ್ದ ಪ್ರೇಕ್ಷಕರನ್ನು ರಂಜಿಸಿದರು. 33 ಎಸೆತಗಳಲ್ಲಿ 47 ರನ್‌ ಗಳಿಸಿದರು. ಅದರಲ್ಲಿ ನಾಲ್ಕು ಆಕರ್ಷಕ ಬೌಂಡರಿಗಳಿದ್ದವು. ಮಂಗಳವಾರವಷ್ಟೇ ರಾಂಚಿಯಲ್ಲಿ ಮುಕ್ತಾಯವಾದ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ ಆಡಿದ್ದ ಮಯಂಕ್ ರಾತ್ರಿಯೇ ಬೆಂಗಳೂರು ತಲುಪಿದ್ದರು.

ಕೌಶಿಕ್ ಮಿಂಚು: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕಕ್ಕೆ ಮಧ್ಯಮವೇಗಿ ವಿ. ಕೌಶಿಕ್ (46ಕ್ಕೆ4) ಉತ್ತಮ ಆರಂಭ ನೀಡಿದರು. ಇದರಿಂದಾಗಿ ಛತ್ತೀಸಗಡ ತಂಡವು 96ಕ್ಕೆ5 ವಿಕೆಟ್‌ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಈ ಹಂತದಲ್ಲಿ ಕರ್ನಾಟಕದ ಬೌಲರ್‌ಗಳು ಛತ್ತೀಸಗಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಕ್ವಾರ್ಟರ್‌ಫೈನಲ್‌
ನಲ್ಲಿ ಪುದುಚೇರಿ ತಂಡವು 41ಕ್ಕೆ6 ವಿಕೆಟ್‌ ಕಳೆದುಕೊಂಡಾಗಲೂ ಇದೇ ರೀತಿಯಾಗಿತ್ತು. ಅ ತಂಡವು 200ರ ಗಡಿ ದಾಟಿತ್ತು. ಇಲ್ಲಿ ಅಮನದೀಪ್ ಖರೆ (78; 102ಎಸೆತ, 4ಬೌಂಡರಿ) ಮತ್ತು ಸುಮಿತ್ ರುಯಕರ್ (40; 37ಎ, 1ಬೌಂ, 2ಸಿ) ಎಂಟನೇ ವಿಕೆಟ್‌ಗೆ 56 ರನ್‌ ಸೆರಿಸಿ ಇನಿಂಗ್ಸ್‌ಗೆ ಚೇತರಿಕೆ ನೀಡಿದರು. ಈ ಪಂದ್ಯದಲ್ಲಿಯೂ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಬಿ.ಆರ್. ಶರತ್ ಅವರಿಗೆ ವಿಶ್ರಾಂತಿ ಕೊಡಲಾಯಿತು. ಕೆ.ಎಲ್. ರಾಹುಲ್ ಕೀಪಿಂಗ್ ನಿರ್ವಹಿಸಿದರು. ಫಾರ್ಮ್‌ನಲ್ಲಿದ್ದ ಶ್ರೇಯಸ್‌ ಗೋಪಾಲ್ ಬದಲಿಗೆ ಪ್ರವೀಣ ದುಬೆ ಅವಕಾಶ ಪಡೆದರು.

ಶಾರೂಕ್ ಖಾನ್ ಆಟಕ್ಕೆ ಒಲಿದ ಜಯ

ಬೆಂಗಳೂರು: ತಮಿಳುನಾಡು ತಂಡವು ಆರನೇ ಬಾರಿ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ ಪ್ರವೇಶಿಸಿತು. ಜಸ್ಟ್‌ ಕ್ರಿಕೆಟ್ ಮೈದಾನದಲ್ಲಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ತಮಿಳುನಾಡು ತಂಡವು 5 ವಿಕೆಟ್‌ಗಳಿಂದ ಗುಜರಾತ್ ವಿರುದ್ಧ ಜಯಿಸಿತು. ಮೈದಾನ ತೇವವಾಗಿದ್ದ ಕಾರಣ ತಡವಾಗಿ ಆಟ ಆರಂಭವಾಯಿತು. 40–40 ಓವರ್‌ಗಳಿಗೆ ಪಂದ್ಯವನ್ನು ನಿಗದಿ ಮಾಡಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 9 ವಿಕೆಟ್‌ಗಳಿಗೆ 177 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ತಮಿಳುನಾಡು ಒಂದು ಹಂತದಲ್ಲಿ ಆತಂಕ ಎದುರಿಸಿತ್ತು. ಆದರೆ ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್ ಶಾರೂಕ್ ಖಾನ್ (ಔಟಾಗದೆ 56) ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಗುಜರಾತ್: 40 ಓವರ್‌ಗಳಲ್ಲಿ 9ಕ್ಕೆ 177 (ಧ್ರುವ ರಾವಳ್ 40, ಅಕ್ಷರ್ ಪಟೇಲ್ 37, ಚಿಂತನ್ ಗಜ 24, ಮೊಹಮ್ಮದ್ ಸಲೀಂ 23ಕ್ಕೆ3), ತಮಿಳುನಾಡು: 39 ಓವರ್‌ಗಳಲ್ಲಿ 5ಕ್ಕೆ181 (ದಿನೇಶ್ ಕಾರ್ತಿಕ್ 47, ವಾಷಿಂಗ್ಟನ್ ಸುಂದರ್ 27, ಶಾರೂಕ್ ಖಾನ್ ಔಟಾಗದೆ 56) ಫಲಿತಾಂಶ: ತಮಿಳುನಾಡು ತಂಡಕ್ಕೆ 5 ವಿಕೆಟ್‌ಗಳ ಜಯ (ವಿಜೆಡಿ ಪದ್ಧತಿ).

ದೇವದತ್ತ ದಾಖಲೆ

ಕರ್ನಾಟಕದ ದೇವದತ್ತ ಪಡಿಕ್ಕಲ್ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ನಲ್ಲಿ ಸತತ ಐದು ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನ ಗಳಿಸಿದರು.

ಬುಧವಾರ ಛತ್ತೀಸಗಡದ ಎದುರಿನ ಸೆಮಿಫೈನಲ್‌ನಲ್ಲಿ ಅವರು 92 ರನ್ ಗಳಿಸಿ ಔಟಾದರು. ಟೂರ್ನಿಯಲ್ಲಿ ಒಟ್ಟು ಹತ್ತು ಪಂದ್ಯಗಳಲ್ಲಿ ಅವರು ಆಡಿದ್ದಾರೆ. ಐದು ಅರ್ಧಶತಕ ಮತ್ತು ಎರಡು ಶತಕ ದಾಖಲಿಸಿದ್ಧಾರೆ. ಅವರ ಖಾತೆಯಲ್ಲಿ ಒಟ್ಟು 598 ರನ್‌ಗಳು ಸೇರಿದ್ದು, ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿರುವ ಆಟಗಾರನಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT