ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ: ಟೂರ್ನಿಯಲ್ಲಿ ಕರ್ನಾಟಕಕ್ಕೆ ಮೊದಲ ಸೋಲು- ವೈಶಾಖ ಅರ್ಧಶತಕ

ಮಯಂಕ್ ಪಡೆ ಓಟಕ್ಕೆ ಹರಿಯಾಣ ಕಡಿವಾಣ
Published 3 ಡಿಸೆಂಬರ್ 2023, 13:16 IST
Last Updated 3 ಡಿಸೆಂಬರ್ 2023, 13:16 IST
ಅಕ್ಷರ ಗಾತ್ರ

ಅಹಮದಾಬಾದ್: ಕರ್ನಾಟಕ ತಂಡದ ಅಜೇಯ ಓಟಕ್ಕೆ ಭಾನುವಾರ ಹರಿಯಾಣ ತಂಡವು ತಡೆಯೊಡ್ಡಿತು.

ಇಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಆರನೇ ಪಂದ್ಯದಲ್ಲಿ ಕರ್ನಾಟಕವು ತಂಡವು 5 ವಿಕೆಟ್‌ಗಳಿಂದ ಸೋತಿತು. ಕಳೆದ ಐದು ಪಂದ್ಯಗಳಲ್ಲಿ ಜಯಿಸಿದ್ದ ಮಯಂಕ್ ಅಗರವಾಲ್ ಬಳವನ್ನು ಕಟ್ಟಿಹಾಕಿದ ಹರಿಯಾಣ ತಂಡವು ಸತತ ಆರನೇ ಪಂದ್ಯ ಗೆದ್ದು ಸಿ ಗುಂಪಿನ ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿತು. ಇದರೊಂದಿಗೆ ತಂಡವು ನೇರವಾಗಿ ಕ್ವಾರ್ಟರ್‌ಫೈನಲ್ ಹಂತ ಪ್ರವೇಶಿಸುವ ಸಾಧ್ಯತೆಯೂ ಹೆಚ್ಚಿತು.

ಟಾಸ್ ಗೆದ್ದ ಕರ್ನಾಟಕ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಹರಿಯಾಣದ ಸುಮಿತ್ ಕುಮಾರ್ (28ಕ್ಕೆ3) ಮತ್ತು ಉಳಿದ ಬೌಲರ್‌ಗಳ ಶಿಸ್ತಿನ ದಾಳಿಯ ಮುಂದೆ ಕರ್ನಾಟಕ 43.5 ಓವರ್‌ಗಳಲ್ಲಿ 143 ರನ್‌ಗಳ ಅಲ್ಪಮೊತ್ತ ಪೇರಿಸಿತು.  ಹತ್ತನೇ ಕ್ರಮಾಂಖದ ಬ್ಯಾಟರ್ ವೈಶಾಖ ವಿಜಯಕುಮಾರ್ (54; 61ಎ, 4X4, 6X4) ಹೊಡೆದ ಅರ್ಧಶತಕ ಹೊಡೆದರು.

ಆದರೆ, ಈ ಟೂರ್ನಿಯಲ್ಲಿ ರನ್‌ಗಳ ಮಳೆ ಹರಿಸಿದ್ದ ದೇವದತ್ತ ಪಡಿಕ್ಕಲ್ ಗೈರುಹಾಜರಿಯಲ್ಲಿ ಬ್ಯಾಟಿಂಗ್ ಬಲ ಕುಸಿಯಿತು. ಮಯಂಕ್ ಖಾತೆ ತೆರೆಯಲಿಲ್ಲ. ಸಮರ್ಥ್ ಒಂದು ರನ್ ಮಾಡಿದರು. ದೇವದತ್ತ ಬದಲಿಗೆ ಸ್ಥಾನ ಪಡೆದ ಬಿ.ಆರ್. ಶರತ್ 15 ರನ್ ಗಳಿಸಿದರು. ಅನುಭವಿ ಮನೀಷ್ ಪಾಂಡೆ (24; 44ಎ) ಇನಿಂಗ್ಸ್‌ಗೆ ಬಲ ತುಂಬುವಲ್ಲಿ ಹಿಂದೆ ಬಿದ್ದರು. ಯಜುವೇಂದ್ರ ಚಾಹಲ್ ಸ್ಪಿನ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಅಭಿನವ್ ಮನೋಹರ್, ಮನೋಜ್ ಬಾಂಢಗೆ ಕೂಡ ಮಿಂಚಲಿಲ್ಲ. ಆದರೆ ವೈಶಾಖ ಚೆಂದದ ಅರ್ಧಶತಕ ಹೊಡೆದರು.  

ಈ ಸಾಧಾರಣ ಮೊತ್ತವನ್ನು ರಕ್ಷಿಸಿಕೊಳ್ಳಲು ಬೌಲರ್‌ಗಳು ಪ್ರಯತ್ನಿಸಿದರು.  ವಾಸುಕಿ ಕೌಶಿಕ್ (6–3–9–2) ಮತ್ತು ಸ್ಪಿನ್ನರ್ ಜೆ ಸುಚಿತ್ (37ಕ್ಕೆ2)  ಅವರು ಅಮೋಘವಾಗಿ ಬೌಲಿಂಗ್ ಮಾಡಿದರು. ಆದರೆ, ಹರಿಯಾಣದ ರೋಹಿತ್ ಪ್ರಮೋದ ಶರ್ಮಾ (63; 70ಎ) ಅರ್ಧಶತಕ ಹೊಡೆದರು. ಇದರಿಂದಾಗಿ ತಂಡವು 31.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 144 ರನ್ ಗಳಿಸಿತು.

ದೇವದತ್ತ ಪಡಿಕ್ಕಲ್ ಮತ್ತು ವಿದ್ವತ್ ಕಾವೇರಪ್ಪ ಅವರು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ  ಎ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಸಂಕ್ಷಿಪ್ತ ಸ್ಕೋರು

ಕರ್ನಾಟಕ: 43.5 ಓವರ್‌ಗಳಲ್ಲಿ 143 (ಮನೀಷ್ ಪಾಂಡೆ 24, ವೈಶಾಖ ವಿಜಯಕುಮಾರ್ 54, ಅನ್ಷುಲ್ ಕಾಂಬೋಜ್ 29ಕ್ಕೆ2, ಸುಮಿತ್ ಕುಮಾರ್ 28ಕ್ಕೆ3, ನಿಶಾಂತ್ ಸಿಂದು 22ಕ್ಕೆ2, ಯಜುವೇಂದ್ರ ಚಾಹಲ್ 16ಕ್ಕೆ2, ಹರ್ಷಲ್ ಪಟೇಲ್ 25ಕ್ಕೆ1) ಹರಿಯಾಣ: 31.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 144 (ಯುವರಾಜ್ ಸಿಂಗ್ 19, ನಿಶಾಂತ್ ಸಿಂಧು 43, ರೋಹಿತ್ ಪ್ರಮೋದ್ ಶರ್ಮಾ 63, ವಿ. ಕೌಶಿಕ್ 9ಕ್ಕೆ2, ಜೆ. ಸುಚಿತ್ 37ಕ್ಕೆ2) ಫಲಿತಾಂಶ: ಹರಿಯಾಣ ತಂಡಕ್ಕೆ 5 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT