ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ | ಹೂಡಾ ಅಬ್ಬರ: ಮುಗ್ಗರಿಸಿದ ಮಯಂಕ್ ಪಡೆ

Published 14 ಡಿಸೆಂಬರ್ 2023, 16:31 IST
Last Updated 14 ಡಿಸೆಂಬರ್ 2023, 16:31 IST
ಅಕ್ಷರ ಗಾತ್ರ

ರಾಜ್‌ಕೋಟ್: ದೀಪಕ್ ಹೂಡಾ ಶತಕದ ಅಬ್ಬರದಲ್ಲಿ ಕರ್ನಾಟಕ ತಂಡದ ಫೈನಲ್ ಕನಸು ಕಮರಿತು. ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ ತಂಡವು ಫೈನಲ್‌ಗೆ ಅರ್ಹತೆ ಗಿಟ್ಟಿಸಿತು.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ರಾಜಸ್ಥಾನ ತಂಡವು 6 ವಿಕೆಟ್‌ಗಳಿಂದ ಮಯಂಕ್ ಅಗರವಾಲ್ ಬಳಗವನ್ನು ಮಣಿಸಿತು. ಮೂರು ವರ್ಷಗಳ ನಂತರ ಪ್ರಶಸ್ತಿ ಗಳಿಸುವ ಕರ್ನಾಟಕದ ಗುರಿ ಈ ಬಾರಿಯೂ ಈಡೇರಲಿಲ್ಲ. ಇದೇ 16ರಂದು ನಡೆಯುವ ಫೈನಲ್‌ನಲ್ಲಿ ರಾಜಸ್ಥಾನವು ಹರಿಯಾಣ ತಂಡವನ್ನು ಎದುರಿಸಲಿದೆ. 

ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ರಾಜಸ್ಥಾನದ ಬೌಲರ್‌ಗಳಾದ ಖಲೀದ್ ಅಹಮದ್ ಮತ್ತು ಅಂಕಿತ್ ಚೌಧರಿ ಅವರ ಬೌಲಿಂಗ್ ಮುಂದೆ ಅಗ್ರ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಆದರೆ ಐದನೇ ಕ್ರಮಾಂಕದ ಬ್ಯಾಟರ್ ಅಭಿನವ್ ಮನೋಹರ್ (91; 80ಎ, 4X10, 6X3) ಮತ್ತು ಮನೋಜ್ ಬಾಂಢಗೆ (63; 39ಎ, 4X3, 6X5) ಅವರ  ಬ್ಯಾಟಿಂಗ್‌ನಿಂದಾಗಿ ಕರ್ನಾಟಕ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 282 ರನ್ ಗಳಿಸಿತು.

ಟೂರ್ನಿಯುದ್ದಕ್ಕೂ ಅಮೋಘ ಆಟದ ಮೂಲಕ ತಂಡದ ಶಕ್ತಿಯಾಗಿದ್ದ ಬೌಲರ್‌ಗಳು ಈ ಮೊತ್ತವನ್ನು ರಕ್ಷಿಸುವ ಭರವಸೆ ಮೂಡಿತ್ತು. ಅದಕ್ಕೆ ತಕ್ಕಂತೆ ವೇಗಿ ವೈಶಾಖ ಮತ್ತು ಕೌಶಿಕ್ ಅವರ ಅಮೋಘ ದಾಳಿಗೆ ರಾಜಸ್ಥಾನದ ಇಬ್ಬರೂ ಆರಂಭಿಕ ಬ್ಯಾಟರ್‌ಗಳು ಸೊನ್ನೆ ಸುತ್ತಿದರು. ಮಹಿಪಾಲ್ ಲೊಮ್ರೊರ್ (14 ರನ್) ಅವರಿಗೆ ಮನೋಜ್ ಬಾಂಢಗೆ ಪೆವಿಲಿಯನ್ ದಾರಿ ತೋರಿಸಿದರು. 23 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡ ರಾಜಸ್ಥಾನ ಸೋಲಿನ ಭೀತಿಯಲ್ಲಿತ್ತು.

ಆದರೆ ದೀಪಕ್ ಹೂಡಾ (180; 128ಎ) ಮತ್ತು ಕರಣ್ ಲಂಬಾ (ಅಜೇಯ 73; 112ಎ) ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 255 ರನ್‌ ಸೇರಿಸಿದರು. ಕರ್ನಾಟಕದ ಕೈಯಿಂದ ಗೆಲುವನ್ನು ಕಿತ್ತುಕೊಂಡರು. ಪಂದ್ಯದಲ್ಲಿ ಇನ್ನೂ 38 ಎಸೆತಗಳು ಬಾಕಿ ಇದ್ದಾಗಲೇ ರಾಜಸ್ಥಾನವು 4 ವಿಕೆಟ್‌ಗಳಿಗೆ 283 ರನ್‌ ಗಳಿಸಿ ಗೆದ್ದಿತು. ಹೂಡಾ ಹತ್ತು ಅಂತರರಾಷ್ಟ್ರೀಯ ಏಕದಿನ ಮತ್ತು 21 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ಹೂಡಾ 19 ಬೌಂಡರಿ ಮತ್ತು ಐದು ಸಿಕ್ಸರ್ ಸಿಡಿಸಿ ರಾಜ್ಯದ ಬೌಲರ್‌ಗಳ ಬೆವರಿಳಿಸಿದರು. ಕೌಶಿಕ್ (8–1–28–1) ಬಿಟ್ಟರೆ ಉಳಿದೆಲ್ಲ ಬೌಲರ್‌ಗಳೂ ದುಬಾರಿಯಾದರು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 282 (ನಿಕಿನ್ ಜೋಸ್ 21, ಕೃಷ್ಣನ್ ಶ್ರೀಜಿತ್ 37, ಮನೀಷ್ ಪಾಂಡೆ 28, ಅಭಿನವ್ ಮನೋಹರ್ 91, ಮನೋಜ್ ಬಾಂಢಗೆ 63, ಅಂಕಿತ್ ಚೌಧರಿ 43ಕ್ಕೆ2, ಕೆ. ಅಜಯ್ ಸಿಂಗ್ 43ಕ್ಕೆ2) ರಾಜಸ್ಥಾನ: 43.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 283  (ದೀಪಕ್ ಹೂಡಾ 180, ಕರಣ್ ಲಾಂಬಾ ಔಟಾಗದೆ 73, ವಿ ಕೌಶಿಕ್ 28ಕ್ಕೆ1, ವೈಶಾಖ ವಿಜಯಕುಮಾರ್ 58ಕ್ಕೆ1, ಮನೋಜ್ ಬಾಂಢಗೆ 49ಕ್ಕೆ1) ಫಲಿತಾಂಶ: ರಾಜಸ್ಥಾನ ತಂಡಕ್ಕೆ 6 ವಿಕೆಟ್‌ಗಳ ಜಯ. ಫೈನಲ್‌ಗೆ  ಅರ್ಹತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT