ಬುಧವಾರ, ಆಗಸ್ಟ್ 17, 2022
25 °C

IND vs AUS: ಸಚಿನ್ ತೆಂಡೂಲ್ಕರ್ ಎಲೈಟ್ ಪಟ್ಟಿಗೆ ಸೇರಿದ ವಿರಾಟ್ ಕೊಹ್ಲಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಭಾರತ 12 ರನ್ ಅಂತರದ ಸೋಲಿಗೆ ಶರಣಾಗಿರಬಹುದು. ಹಾಗಿದ್ದರೂ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿದೆ.

ಅತ್ತ ಏಕಾಂಗಿ ಹೋರಾಟ ತೋರಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಗದೊಂದು ಮೈಲುಗಲ್ಲು ಸಾಧಿಸಿದ್ದಾರೆ. ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ಸಾಲಿಗೆ ಸೇರಿರುವ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ನೆಲದಲ್ಲಿ ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3,000 ರನ್‌ಗಳ ದಾಖಲೆ ಬರೆದಿದ್ದಾರೆ.

ಇದಕ್ಕೂ ಮುನ್ನ ಏಕದಿನ ಸರಣಿಯಲ್ಲೂ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿರುವ ವಿರಾಟ್ ಕೊಹ್ಲಿ, ಏಕದಿನ ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 12,000 ರನ್‌ಗಳ ದಾಖಲೆ ಬರೆದಿದ್ದರು. ಏಕದಿನ ಸರಣಿಯಲ್ಲಿ ಒಟ್ಟು 173 ರನ್ ಗಳಿಸಿರುವ ಕೊಹ್ಲಿ ಟಿ20 ಸರಣಿಯಲ್ಲೂ 134 ರನ್ ಪೇರಿಸಿದ್ದರು.

ಅಂತಿಮ ಟಿ20 ಪಂದ್ಯದಲ್ಲಿ 61 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ, ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 85 ರನ್ ಗಳಿಸಿದರು.

ಸ್ಲೋ ಓವರ್ ರೇಟ್; ಭಾರತಕ್ಕೆ ದಂಡ
ಈ ಮಧ್ಯೆ ಆಸ್ಟ್ರೇಲಿಯಾ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ಗೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ಆಟಗಾರರ ಮೇಲೆ ದಂಡ ವಿಧಿಸಲಾಗಿದೆ.

ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಬೂನ್, ಆಟಗಾರರ ಮೇಲೆ ಪಂದ್ಯ ಶುಲ್ಕದ ಶೇಕಡಾ 20ರಷ್ಟು ದಂಡ ವಿಧಿಸಿದರು. ಈ ಮೊದಲು ಏಕದಿನ ಸರಣಿಯಲ್ಲೂ ಸ್ಲೋ ಓವರ್-ರೇಟ್‌ಗೆ ಸಂಬಂಧಿಸಿದಂತೆ ಭಾರತೀಯ ಆಟಗಾರರು ದಂಡನೆಗೊಳಗಾಗಿದ್ದರು.

ಏಕದಿನ ಸರಣಿಯಲ್ಲಿ 1-2ರ ಅಂತರದ ಸೋಲಿಗೆ ಶರಣಾಗಿರುವ ಟೀಮ್ ಇಂಡಿಯಾ ಟಿ20 ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿ ತಿರುಗೇಟು ನೀಡಿತ್ತು. ಈಗ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ಡಿಸೆಂಬರ್ 17ರಂದು ಆಡಿಲೇಡ್‌ನಲ್ಲಿ ಅಹರ್ನಿಶಿಯಾಗಿ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು