ಗುರುವಾರ , ಜೂನ್ 4, 2020
27 °C

ಸ್ಪಿನ್ ಎದುರು ಲಕ್ಷ್ಮಣ್ ಶ್ರೇಷ್ಠ ಬ್ಯಾಟ್ಸ್‌ಮನ್: ಚಾಪೆಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಹತ್ತೊಂಬತ್ತು ವರ್ಷಗಳ ಹಿಂದೆ ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಭಾರತದ ವಿವಿಎಸ್ ಲಕ್ಷಣ್ ಅವರು ಗಳಿಸಿದ ದ್ವಿಶತಕವು ಸ್ಪಿನ್ ಬೌಲಿಂಗ್ ಎದುರಿನ ಶ್ರೇಷ್ಠ ಇನಿಂಗ್ಸ್‌ ಎಂದು ದಿಗ್ಗಜ ಆಟಗಾರ ಇಯಾನ್ ಚಾಪೆಲ್ ಹೇಳಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠವಾದ ಎರಡು ಇನಿಂಗ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದರಲ್ಲಿ ಕೋಲ್ಕತ್ತದಲ್ಲಿ ಲಕ್ಷ್ಮಣ್ ಮತ್ತು ರಾಹುಲ್  ದ್ರಾವಿಡ್ (180 ರನ್) ಅವರ ಜೊತೆಯಾಟಕ್ಕೆ ಅಗ್ರಸ್ಥಾನ ನೀಡಿದ್ದಾರೆ.  ಆಸ್ಟ್ರೇಲಿಯಾದ ಡಾಗ್  ವಾಲ್ಟರ್‌ ಅವರ ಇನಿಂಗ್ಸ್‌ಗೆ ನೀಡಿದ್ದಾರೆ.

‘ಕೊರೊನಾ ವೈರಸ್‌ ಸೋಂಕು ತಡೆಯಲು ಲಾಕ್‌ಡೌನ್ ಜಾರಿಯಾಗಿದೆ. ಈ ಸಂದರ್ಭದಲ್ಲಿ ಎಲ್ಲ ಕ್ರಿಕೆಟ್ ಚಟುವಟಿಕೆಗಳೂ ಸ್ಥಗಿತವಾಗಿವೆ. ಇದರಿಂದಾಗಿ ಕ್ರಿಕೆಟ್‌ನ ಮಹತ್ವದ ವಿಷಯಗಳ ಕುರಿತು ಚರ್ಚಿಸಲು ನನಗೆ ಅವಕಾಶ ಸಿಕ್ಕಿದೆ. ಲಕ್ಷ್ಮಣ್ ಅವರು ಸ್ಪಿನ್‌ ಬೌಲಿಂಗ್ ಎದುರು ಸೊಗಸಾಗಿ ಆಡುವ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್. ಅದರಲ್ಲೂ ಅಗ್ರಮಾನ್ಯ ಸ್ಪಿನ್ ಬೌಲರ್‌ಗಳನ್ನು ಅವರು ಆ ಎರಡೂ ಇನಿಂಗ್ಸ್‌ಗಳಲ್ಲಿ ಎದುರಿಸಿದ್ದ ರೀತಿ ಅನನ್ಯವಾಗಿತ್ತು. ಅವರ ಪಾದಚಲನೆಯ ಚುರುಕುತನ, ಸುಂದರವಾದ ಕಟ್, ಡ್ರೈವ್‌ಗಳು ಅಮೋಘ’ ಎಂದು ಆಸ್ಟ್ರೇಲಿಯಾದ ಚಾಪೆಲ್ ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ವೆಬ್‌ಸೈಟ್‌ಗೆ ಬರೆದಿರುವ ಅಂಕಣದಲ್ಲಿ ಉಲ್ಲೇಖಿಸಿದ್ದಾರೆ.

ಆ ಪಂದ್ಯದಲ್ಲಿ ಲಕ್ಷ್ಮಣ್ ಮತ್ತು ದ್ರಾವಿಡ್ ಜೊತೆಯಾಟದಲ್ಲಿ ಸೇರಿಸಿದ್ದ 376 ರನ್‌ಗಳಿಂದಾಗಿ ಭಾರತವು ಆಸ್ಟ್ರೇಲಿಯಾ ಎದುರು ಐತಿಹಾಸಿಕ ಜಯ ಸಾಧಿಸಿತ್ತು.

‘ಈಡನ್ ಅಂಗಳದಲ್ಲಿ ಶ್ರೇಷ್ಠ ಲೆಗ್‌ಸ್ಪಿನ್ನರ್ ಶೇನ್ ವಾರ್ನ್ ಅವರ ಬೌಲಿಂಗ್ ಮುಂದೆ ಲಕ್ಷ್ಮಣ್ ಬ್ಯಾಟಿಂಗ್ ಗೆದ್ದಿತ್ತು. ಆಗ ನನ್ನೊಂದಿಗೆ ಮಾತನಾಡಿದ್ದ ವಾರ್ನ್ ಕೂಡ ತಾವು ತಮ್ಮ ಶ್ರೇಷ್ಠ ತಂತ್ರಗಳನ್ನೇಲ್ಲ ಬಳಸಿ ಉತ್ತಮವಾಗಿ ಬೌಲಿಂಗ್ ಮಾಡಿದ್ದೆ ಎಂದೂ ಹೇಳಿದ್ದರು. ಇದರಿಂದ ಲಕ್ಷ್ಮಣ್ ಬ್ಯಾಟಿಂಗ್‌ನ ಸಾಮರ್ಥ್ಯ ಮತ್ತು ಕೌಶಲ್ಯದ ಪರಿಪಕ್ಷತೆಯನ್ನು ನಾವು ಅರಿಯಬಹುದು’ ಎಂದು ಚಾಪೆಲ್ ಶ್ಲಾಘಿಸಿದ್ದಾರೆ.

ಡಾಗ್ ವಾಲ್ಟರ್ಸ್ ಕುರಿತು ಬರೆದಿರುವ ಅವರು, ‘ಟೆಸ್ಟ್ ಕ್ರಿಕೆಟ್ ಪಂದ್ಯದ ಒಂದೇ ಅವಧಿಯಲ್ಲಿ ಶತಕ ಬಾರಿಸಿದ ಸಾಧನೆಯನ್ನು ಅವರು ಮೂರು ಸಲ ಮಾಡಿದ್ದಾರೆ. ಆದರೆ ಇದು ಸರಿಯಾಗಿ ಎಲ್ಲಿಯೂ ದಾಖಲಾಗಿಲ್ಲ. ಸರ್ ಡಾನ್ ಬ್ರಾಡ್ಮನ್ ಮಾತ್ರ ಇಂತಹ ಸಾಧನೆ ಮಾಡಿದ್ದರು ಎಂದು ನನಗನಿಸುತ್ತದೆ.  ವಾಲ್ಟರ್ಸ್ ಕೂಡ ಸರ್ವಶ್ರೇಷ್ಠ ಸ್ಪಿನ್ನರ್‌ಗಳ ಎದುರು ಯಶಸ್ವಿಯಾದ ಅಪರೂಪದ ಆಟಗಾರ’ ಎಂದಿದ್ಧಾರೆ.

‘ಆಫ್‌ಸ್ಪಿನ್ ವಿರುದ್ಧ ವಾಲ್ಟರ್ಸ್‌ ಚೆನ್ನಾಗಿ ಆಡುತ್ತಿದ್ದರು. ಚೆನ್ನೈ (ಆಗಿನ ಮದ್ರಾಸ್) ನಲ್ಲಿ ಭಾರತದ ವಿರುದ್ಧ 1969ರಲ್ಲಿ ನಡೆದಿದ್ದ ಟೆಸ್ಟ್ ಪಂದ್ಯ ಇಂದಿಗೂ ನೆನಪಿದೆ. ಎರ್ರಪಳ್ಳಿ ಪ್ರಸನ್ನ ಅವರ ಶಿಸ್ತಿನ ಆಫ್‌ಸ್ಪಿನ್ ಬೌಲಿಂಗ್ ಮುಂದೆ ವಾಲ್ಟರ್ಸ್ ಮಿಂಚಿದ್ದರು. 14 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದರು’ ಎಂದು ಚಾಪೆಲ್ ನೆನಪಿಸಿಕೊಂಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು