ಶುಕ್ರವಾರ, ಜನವರಿ 22, 2021
27 °C
ಕಿಂಗ್ಸ್‌ ಇಲೆವನ್‌ ಪಂಜಾಬ್‌ ಎದುರು ವಾರ್ನರ್‌ ಬ್ಯಾಟಿಂಗ್‌ ವೈಭವ

ಸನ್‌ರೈಸರ್ಸ್‌ ಹೈದರಾಬಾದ್ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಈ ಸಲದ ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಅವರ ಬ್ಯಾಟಿಂಗ್‌ ಅಬ್ಬರ ಮುಂದುವರಿದಿದೆ.

ಉಪ್ಪಳದ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ವಾರ್ನರ್‌ ಸುರಿಸಿದ ರನ್‌ ಮಳೆಯಲ್ಲಿ ತವರಿನ ಅಭಿಮಾನಿಗಳು ಮಿಂದೆದ್ದರು.

ವಾರ್ನರ್‌  (81; 56ಎ, 7ಬೌಂ, 2ಸಿ) ಅರ್ಧಶತಕದ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ವಿರುದ್ಧ 45 ರನ್‌ಗಳಿಂದ ಗೆದ್ದಿತು.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಲು ಸಿಕ್ಕ ಅವಕಾಶವನ್ನು ಕೇನ್‌ ವಿಲಿಯಮ್ಸನ್‌ ಬಳಗ ಸದುಪಯೋಗಪ ಡಿಸಿಕೊಂಡಿತು. ಆತಿಥೇಯರು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 212ರನ್‌ ದಾಖಲಿಸಿದರು.

ಗುರಿ ಬೆನ್ನತ್ತಿದ ಕಿಂಗ್ಸ್‌ ಪರ ಕೆ.ಎಲ್‌.ರಾಹುಲ್ (79; 56ಎ, 5 ಸಿ, 4 ಬೌಂ) ಮಾತ್ರ ಮಿಂಚಿದರು. ಖಲೀಲ್‌ ಅಹಮ್ಮದ್‌, ರಶೀದ್ ಖಾನ್ ಮತ್ತು ಸಂದೀಪ್ ಶರ್ಮಾ ಅವರ ದಾಳಿಯನ್ನು ಮೆಟ್ಟಿ ನಿಲ್ಲಲು ಇತರ ಬ್ಯಾಟ್ಸಮನ್‌ಗಳಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ತಂಡಕ್ಕೆ 167 ರನ್‌ಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು.

ವಾರ್ನರ್ ಕೆಚ್ಚೆದೆಯ ಆಟ: ಅರ್ಷ್‌ದೀಪ್‌ ಸಿಂಗ್‌ ಹಾಕಿದ ಮೊದಲ ಓವರ್‌ನ ಮೊದಲ ಎರಡು ಎಸೆತಗಳನ್ನು ಎಚ್ಚರಿಕೆಯಿಂದ ಎದುರಿಸಿದ ಡೇವಿಡ್‌, ನಂತರ ರಟ್ಟೆ ಅರಳಿಸಿ ಆಡಿದರು. ಮೂರು ಮತ್ತು ಐದನೇ ಎಸೆತಗಳನ್ನು ಬೌಂಡರಿ ಗೆರೆ ದಾಟಿಸಿದ್ದು ಇದಕ್ಕೆ ಸಾಕ್ಷಿ. ಎರಡನೇ ಓವರ್‌ನಲ್ಲಿ ಇನಿಂಗ್ಸ್‌ನ ಮೊದಲ ಸಿಕ್ಸರ್‌ ಸಿಡಿಸಿದ ಅವರು ಮುಜೀಬ್‌ ಉರ್‌ ರಹಮಾನ್‌ ಹಾಕಿದ ನಾಲ್ಕನೇ ಓವರ್‌ನಲ್ಲಿ ಸತತ ಎರಡು ಬೌಂಡರಿ ಗಳಿಸಿ ತವರಿನ ಅಭಿಮಾನಿಗಳನ್ನು ರಂಜಿಸಿದರು.

ಇನ್ನೊಂದೆಡೆ ವೃದ್ಧಿಮಾನ್‌ ಸಹಾ (28; 13ಎ, 3ಬೌಂ, 1ಸಿ) ಕೂಡಾ ವೇಗದ ಆಟಕ್ಕೆ ಅಣಿಯಾದರು. ಹೀಗಾಗಿ ಕೇವಲ 24 ಎಸೆತಗಳಲ್ಲಿ ತಂಡದ ಖಾತೆಗೆ 53ರನ್‌ಗಳು ಜಮೆಯಾದವು. ಜಾನಿ ಬೇಸ್ಟೊ ಅನುಪಸ್ಥಿತಿಯಲ್ಲಿ ಇನಿಂಗ್ಸ್‌ ಆರಂಭಿಸಲು ಸಿಕ್ಕ ಅವಕಾಶವನ್ನು ಸಹಾ ಅವರು ಚೆನ್ನಾಗಿಯೇ ಬಳಸಿಕೊಂಡರು. ಮೊಹಮ್ಮದ್‌ ಶಮಿ ಬೌಲ್‌ ಮಾಡಿದ ಐದನೇ ಓವರ್‌ನ ಕೊನೆಯ ಎರಡು ಎಸೆತಗಳನ್ನು ಕ್ರಮವಾಗಿ ಬೌಂಡರಿ ಮತ್ತು ಸಿಕ್ಸರ್‌ಗೆ ಅಟ್ಟಿದರು.

ಏಳನೇ ಓವರ್‌ನಲ್ಲಿ ಸಹಾ, ಮುರುಗನ್‌ ಅಶ್ವಿನ್‌ಗೆ ವಿಕೆಟ್‌ ನೀಡಿದರು. ಇದರೊಂದಿಗೆ 78ರನ್‌ಗಳ ಮೊದಲ ವಿಕೆಟ್‌ ಜೊತೆಯಾಟಕ್ಕೆ ತೆರೆ ಬಿತ್ತು. ನಂತರ ಕರ್ನಾಟಕದ ಮನೀಷ್‌ ಪಾಂಡೆ (36; 25ಎ, 3ಬೌಂ, 1ಸಿ) ಮತ್ತು ವಾರ್ನರ್‌ ಆತಿಥೇಯರ ಇನಿಂಗ್ಸ್‌ ಬೆಳೆಸಿದರು.

ತಾವೆದುರಿಸಿದ 38ನೇ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ವಾರ್ನರ್‌ ಅರ್ಧಶತಕದ ಸಂಭ್ರಮ ಆಚರಿಸಿದರು. ಈ ಬಾರಿಯ ಲೀಗ್‌ನಲ್ಲಿ ಅವರು ದಾಖಲಿಸಿದ ಎಂಟನೇ ಅರ್ಧಶತಕ ಇದಾಗಿದೆ.

ನಂತರವೂ ವೇಗವಾಗಿ ತಂಡದ ಮೊತ್ತ ಹೆಚ್ಚಿಸಲು ಮುಂದಾದರು. ಆರ್‌.ಅಶ್ವಿನ್‌ ಅವರು ತಮ್ಮ 16ನೇ ಓವರ್‌ನಲ್ಲಿ ಎರಡು ವಿಕೆಟ್‌ ಉರುಳಿಸಿ ಸಂಭ್ರಮಿಸಿದರು. ಮೂರನೇ ಎಸೆತದಲ್ಲಿ ಮನೀಷ್‌ ವಿಕೆಟ್‌ ಪಡೆದ ಅವರು ಅಂತಿಮ ಎಸೆತದಲ್ಲಿ ವಾರ್ನರ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು.

ಇವರು ಔಟಾದ ನಂತರ ನಾಯಕ ವಿಲಿಯಮ್ಸನ್‌ ಮತ್ತು ಮೊಹಮ್ಮದ್‌ ನಬಿ ಅಬ್ಬರಿಸಿದರು.

ಈ ಜೋಡಿ ಮುಜೀಬ್ ಉರ್‌ ರೆಹಮಾನ್‌ ಹಾಕಿದ 18ನೇ ಓವರ್‌ನಲ್ಲಿ ಮೂರು ಸಿಕ್ಸರ್‌ ಮತ್ತು ಒಂದು ಬೌಂಡರಿ ಸೇರಿದಂತೆ ಒಟ್ಟು 26ರನ್‌ ಗಳಿಸಿತು. ಹೀಗಾಗಿ ತಂಡದ ಮೊತ್ತ 190ರ ಗಡಿ ದಾಟಿತು.

ಏಳು ಎಸೆತಗಳಲ್ಲಿ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್‌ ಸಹಿತ 14ರನ್‌ ಗಳಿಸಿದ್ದ ವೇಳೆ ವಿಲಿಯಮ್ಸನ್‌, ಮೊಹಮ್ಮದ್‌ ಶಮಿಗೆ ವಿಕೆಟ್‌ ನೀಡಿದರು.

ನಬಿ ಕೂಡಾ 20 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. 21 ನಿಮಿಷ ಕ್ರೀಸ್‌ನಲ್ಲಿದ್ದ ಅವರು 10 ಎಸೆತಗಳನ್ನು ಎದುರಿಸಿದರು. ಅವರು ಸಿಡಿಸಿದ ಎರಡು ಸಿಕ್ಸರ್‌ಗಳು ಮನಮೋಹಕವಾಗಿದ್ದವು.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು