ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಕ್ರಿಕೆಟ್‌ಗೆ ಡೇವಿಡ್ ವಾರ್ನರ್‌ ವಿದಾಯ ಸಾಧ್ಯತೆ

ಪಾಕ್‌ ವಿರುದ್ಧದ ಮೊಡಲ ಟೆಸ್ಟ್‌: ಆಸ್ಟ್ರೇಲಿಯಾ ತಂಡಕ್ಕೆ ಕಮಿನ್ಸ್ ಸಾರಥ್ಯ
Published 3 ಡಿಸೆಂಬರ್ 2023, 13:05 IST
Last Updated 3 ಡಿಸೆಂಬರ್ 2023, 13:05 IST
ಅಕ್ಷರ ಗಾತ್ರ

ಸಿಡ್ನಿ: ಸ್ಪೋಟಕ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್ ಅವರು ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕಾಗಿ ಪ್ರಕಟಿಸಿದ ಆಸ್ಟ್ರೇಲಿಯಾದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಂದ್ಯದಲ್ಲೇ ವಾರ್ನರ್‌ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳುವರೇ ಎಂಬ ಕುತೂಹಲ ಮೂಡಿಸಿದೆ.

37ರ ವರ್ಷದ ವಾರ್ನರ್‌ ಅವರನ್ನು ಒಳಗೊಂಡ 14 ಆಟಗಾರರ ತಂಡವನ್ನು ಭಾನುವಾರ ಪ್ರಕಟಿಸಿದ್ದು, ಮೊದಲ ಪಂದ್ಯ ಡಿ.14ರಿಂದ 19 ರವರೆಗೆ ಪರ್ತ್‌ನಲ್ಲಿ ನಡೆಯಲಿದೆ.

ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಎರಡನೇ (ಡಿ.26ರಿಂದ 30ರವರೆಗೆ) ಹಾಗೂ ಸಿಡ್ನಿಯಲ್ಲಿ ಮೂರನೇ (ಜ.3ರಿಂದ 7ರವರೆಗೆ) ಪಂದ್ಯ ನಡೆಯಲಿವೆ. ವಾರ್ನರ್‌ ಅವರು ತಮ್ಮ ತವರು ಕ್ರೀಡಾಂಗಣ ಸಿಡ್ನಿಯಲ್ಲಿ ವಿದಾಯ ಹೇಳಲು ಬಯಸಿದ್ದಾರೆ. ಎರಡು ಮತ್ತು ಮೂರನೇ ಟೆಸ್ಟ್‌ ಪಂದ್ಯಗಳಿಗೆ ವಾರ್ನರ್‌ ಅವರಿಗೆ ಅವಕಾಶ ಸಿಗಲಿದೆಯೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಾರ್ನರ್‌ ಇತ್ತೀಚೆಗೆ ನಿರೀಕ್ಷಿತ ಆಟ ಪ್ರದರ್ಶಿಸಿಲ್ಲ. 2019ರಲ್ಲಿ ಅಡಿಲೇಡ್‌ನಲ್ಲಿ ನಡೆದ ಪಾಕ್‌ ವಿರುದ್ಧದ ಪಂದ್ಯದಲ್ಲಿ ತ್ರಿಶತಕ ಹೊಡೆದ ನಂತರದ ಪಂದ್ಯಗಳಲ್ಲಿ ಅವರು 28 ರನ್‌ಗಳ ಸರಾಸರಿ ಹೊಂದಿದ್ದಾರೆ. ಸೀಮಿತ ಓವರ್‌ಗಳ ಪಂದ್ಯಗಳತ್ತ ಗಮನ ಹರಿಸುವ ಉದ್ದೇಶದಿಂದ ಟೆಸ್ಟ್‌ ಕ್ರಿಕೆಟ್‌ಗೆ ಅವರು ಗುಡ್‌ಬೈ ಹೇಳಲು ಮುಂದಾಗಿದ್ದಾರೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ವಿಜೇತ ತಂಡದಲ್ಲಿದ್ದ 13 ಮಂದಿಯನ್ನು ಮೊದಲ ಟೆಸ್ಟ್‌ ಪಂದ್ಯದಲ್ಲಿ ಉಳಿಸಿಕೊಳ್ಳಲಾಗಿದೆ. ಬೆನ್ನಿನ ಗಾಯದಿಂದ ಚೇತರಿಸಿಕೊಂಡ ‌ಲ್ಯಾನ್ಸ್ ಮೋರಿಸ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಕಳೆದ ವರ್ಷದ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ ಪ್ರಕಟಿಸಿದ ತಂಡದಲ್ಲಿ ಅವರು ಸ್ಥಾನ ಪಡೆದಿದ್ದರು.

ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್‌ ಕಮಿನ್ಸ್‌ (ನಾಯಕ), ಸ್ಕಾಟ್‌ ಬೋಲ್ಯಾಂಡ್‌, ಅಲೆಕ್ಸ್‌ ಕ್ಯಾರಿ, ಕ್ಯಾಮರಾನ್‌ ಗ್ರೀನ್‌, ಜೋಶ್‌ ಹ್ಯಾಜಲ್‌ವುಡ್‌, ಟ್ರಾವಿಸ್‌ ಹೆಡ್‌, ಉಸ್ಮಾನ್‌ ಖ್ವಾಜಾ, ಮಾರ್ನಸ್‌ ಲಾಬುಷೇನ್‌, ನೇಥನ್‌ ಲಯನ್‌, ಮಿಚೆಲ್‌ ಮಾರ್ಷ್‌, ಲ್ಯಾನ್ಸ್ ಮೋರಿಸ್, ಸ್ಟೀವ್‌ ಸ್ಮಿತ್‌, ಮಿಚೆಲ್‌ ಸ್ಟಾರ್ಕ್‌ ಮತ್ತು ಡೇವಿಡ್‌ ವಾರ್ನರ್‌.

ಮಿಚೆಲ್ ಜಾನ್ಸನ್ ಟೀಕೆ

ಸಿಡ್ನಿ ಕ್ರೀಡಾಂಗಣದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳುವ ಬಯಕೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ ವಾರ್ನರ್ ನಡೆಯನ್ನು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಮಿಚೆಲ್ ಜಾನ್ಸನ್‌ ಟೀಕಿಸಿದ್ದಾರೆ. ‘ನಾವು ವಾರ್ನರ್ ಅವರ ವಿದಾಯ ಸರಣಿಗಾಗಿ ತಯಾರಿ ನಡೆಸುತ್ತಿರುವಾಗ ಅವರು ಯಾಕೆ ನಿವೃತ್ತಿ ದಿನಾಂಕದ ಬಗ್ಗೆ ಮಾತನಾಡುತ್ತಿದ್ದಾರೆ. ದಯವಿಟ್ಟು ಯಾರಾದರೂ ನನಗೆ ಕಾರಣ ಹೇಳಬಹುದೇ?’ ಎಂದು ಜಾನ್ಸನ್ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT