ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ನಲ್ಲಿ ಜಾಫರ್ ಭರ್ಜರಿ ‘ಬ್ಯಾಟಿಂಗ್’

Last Updated 23 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಕ್ರೀಸ್‌ಗೆ ಇಳಿದರೆ ವೇಗಿಗಳನ್ನೂ ಸ್ಪಿನ್ನರ್‌ಗಳನ್ನೂ ಸಿಕ್ಸರ್‌ಗೆ ಅಟ್ಟುತ್ತಿದ್ದ ಬ್ಯಾಟ್ಸ್‌ಮನ್‌ ಆಗಿದ್ದರು, ವೀರೇಂದ್ರ ಸೆಹ್ವಾಗ್. ಅವರು ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿದ್ದರು. ಮುಂದೆ ನುಗ್ಗಿ ಚೆಂಡನ್ನು ಎತ್ತಿ ಸಿಕ್ಸರ್‌ಗೆ ಕಳುಹಿಸುತ್ತಿದ್ದಂತೆ ಟ್ವೀಟ್‌ಗಳ ಮೂಲಕ ಛಡಿಯೇಟು ನೀಡುವ ಅವರಿಗೆ ಲೆಗ್‌ಸೈಡ್‌ನಲ್ಲಿ ಬರುತ್ತಿದ್ದ ಚೆಂಡನ್ನು ಮೋಹಕವಾಗಿ ಫ್ಲಿಕ್ ಮಾಡಿ ಬೌಂಡರಿ ಗೆರೆ ದಾಟಿಸಿದಂತೆ ಹಾಸ್ಯದ ಧಾಟಿಯ ಟ್ವೀಟ್‌ಗಳ ಮೂಲಕ ಕಚಗುಳಿ ನೀಡಲೂ ಗೊತ್ತು.

ಸೆಹ್ವಾಗ್ ಅವರಂತೆಯೇ ಈಗ ಭಾರತದ ಮತ್ತೊಬ್ಬ ಕ್ರಿಕೆಟಿಗ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಷ್ಟೇನೂ ಸಾಧನೆ ಮಾಡದಿದ್ದರೂ ದೇಶಿ ಕ್ರಿಕೆಟ್‌ನಲ್ಲಿ ರನ್ ಗುಡ್ಡ ಹಾಕುತ್ತಿದ್ದ ವಾಸಿಂ ಜಾಫರ್ ಈ ಆಟಗಾರ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಅವರು ಟ್ವಿಟರ್‌ನಲ್ಲಿ ಹಾಕುತ್ತಿರುವ ಪೋಸ್ಟ್‌ಗಳು ಕ್ರಿಕೆಟ್ ಜಗತ್ತಿನ ಮತ್ತು ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುವವರ ಗಮನ ಸೆಳೆದಿವೆ.

ಭಾರತ ತಂಡ ಮೊದಲ ಟೆಸ್ಟ್‌ನಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟಾದ ನಂತರ ಎಲ್ಲೆಡೆ ಕೇಳಿಬಂದ ಟೀಕೆಗಳ ನಡುವೆ ಎರಡನೇ ಟೆಸ್ಟ್‌ನಿಂದ ತಂಡದ ನಾಯಕತ್ವ ವಹಿಸಲಿರುವ ಅಜಿಂಕ್ಯ ರಹಾನೆಗೆ ಜಾಫರ್ ನೀಡಿರುವ ಸಲಹೆಯೊಂದು ಕುತೂಹಲ ಕೆರಳಿಸಿದೆ. ಶುಭಮನ್ ಗಿಲ್ ಮತ್ತು ಕೆ.ಎಲ್‌.ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಿಂಜರಿಯಬೇಡಿ ಎಂದು ಮುಂಬೈಕರ್‌ ಜಾಫರ್ ಅದೇ ನಗರದ ರಹಾನೆಗೆ ಕಿವಿಮಾತು ಹೇಳಿದ್ದಾರೆ.

ಆಸ್ಟ್ರೇಲಿಯಾದವರ ಕಾಲೆಳೆಯುವ ಚಾಳಿಗೂ ಜಾಫರ್ ಉತ್ತರ ನೀಡುತ್ತಿದ್ದಾರೆ. ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಆಫ್‌ಸ್ಟಂಪ್ ಎಲ್ಲಿದೆ ಎಂದು ನೋಡಿಕೊಂಡೇ ಬ್ಯಾಟಿಂಗ್ ಆರಂಭಿಸಬೇಕು ಎಂದು ಲೇವಡಿ ಮಾಡಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಗ್ ಅವರಿಗೆ ಉತ್ತರಿಸಿದ ಜಾಫರ್ ‘ಆಸ್ಟ್ರೇಲಿಯಾದ ಆಟಗಾರರನ್ನು ಗಾಯದ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ಮೊದಲು ನಿಮ್ಮ ಇನಿಂಗ್ಸ್ ಆರಂಭಿಸುವವರು ಯಾರು ಎಂದು ನಿರ್ಧರಿಸಿ’ ಎಂದು ಹೇಳಿದ್ದಾರೆ.

ಕ್ರಿಕೆಟ್‌ಗೆ ಸಂಬಂಧಿಸಿದ ಜಾಫರ್ ಅವರ ಒಳನೋಟಗಳು ಕೂಡ ಟ್ವಿಟರ್‌ನಲ್ಲಿ ಗಮನ ಸೆಳೆಯುತ್ತಿವೆ. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಜೋ ಬರ್ನ್ಸ್‌ ವಿಕೆಟ್ ಮುಂದೆ ನಿಲ್ಲುವ ವಿಧಾನವನ್ನು ಗಮನಿಸಿದ ಜಾಫರ್ ಈ ಆಟಗಾರ ಎಲ್‌ಬಿಡಬ್ಲ್ಯು ಆಗುವ ಸಾಧ್ಯತೆ ಹೆಚ್ಚಿದೆ ಎಂದು ಭವಿಷ್ಯ ನುಡಿದಿದ್ದರು. ಬರ್ನ್ಸ್‌ ಮೊದಲ ಇನಿಂಗ್ಸ್‌ನಲ್ಲಿ ಎಂಟು ರನ್‌ಗಳಿಗೆ ಜಸ್‌ಪ್ರೀತ್ ಬೂಮ್ರಾ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆಗಿ ಮರಳಿದ್ದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT