ಲಾಹೋರ್: 2023ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗೆಲುವು ದಾಖಲಿಸಿದ ಬಳಿಕ ಲಾಹೋರ್ ಖಲಂದರ್ಸ್ ತಂಡದ ಆಟಗಾರ ಹ್ಯಾರಿಸ್ ರೌಫ್, ಟ್ರೋಫಿಯೊಂದಿಗೆ ಪಾಕಿಸ್ತಾನ-ಭಾರತ ವಾಘಾ ಗಡಿಯಲ್ಲಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ಈ ಸಂಬಂಧ ಚಿತ್ರಗಳನ್ನು ಲಾಹೋರ್ ಖಲಂದರ್ಸ್ ತಂಡದ ಅಧಿಕೃತ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
ಪಿಸಿಎಲ್ 2023 ಫೈನಲ್‌ನಲ್ಲಿ ಮುಲ್ತಾನ್ ಸುಲ್ತಾನ್ಸ್ ವಿರುದ್ಧ ಒಂದು ರನ್ ಅಂತರದ ರೋಚಕ ಗೆಲುವು ದಾಖಲಿಸಿದ್ದ ಶಾಹೀನ್ ಅಫ್ರಿದಿ ನೇತೃತ್ವದ ಲಾಹೋರ್ ಖಲಂದರ್ಸ್ ಸತತ ಎರಡನೇ ಬಾರಿಗೆ ಟ್ರೋಫಿ ಜಯಿಸಿತ್ತು.
ಈಗ ವಾಘಾ ಗಡಿಗೆ ಆಗಮಿಸಿರುವ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್, ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದ್ದಾರೆ. ಈ ವೇಳೆ ಪಾಕಿಸ್ತಾನದ ಸೈನಿಕರು ಹಾಗೂ ಅಭಿಮಾನಿಗಳೊಂದಿಗೆ ಸೆಲ್ಫಿ ಚಿತ್ರ ತೆಗೆದಿದ್ದಾರೆ.