ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್:ವಿಂಡೀಸ್ ವಿರುದ್ಧ ಭಾರತಕ್ಕೆ ಮೊದಲ ಇನಿಂಗ್ಸ್‌ನಲ್ಲಿ 299 ರನ್‌ ಮುನ್ನಡೆ

Last Updated 1 ಸೆಪ್ಟೆಂಬರ್ 2019, 19:09 IST
ಅಕ್ಷರ ಗಾತ್ರ

ಜಮೈಕಾ : ಜಸ್‌ಪ್ರೀತ್ ಬೂಮ್ರಾ ಎಸೆತಗಳನ್ನು ಆಡುವುದು ಹೇಗೆಂಬ ಪ್ರಶ್ನೆಗೆ ವೆಸ್ಟ್ ಇಂಡೀಸ್ ಆಟಗಾರರಿಗೆ ಇನ್ನೂ ಉತ್ತರವೇ ಸಿಕ್ಕಿಲ್ಲ. ಮೊದಲ ಪಂದ್ಯದಲ್ಲಿ ಪರದಾಡಿದ ರೀತಿಯಲ್ಲಿಯೇ ಎರಡನೇ ಪಂದ್ಯದಲ್ಲಿಯೂ ಆತಿಥೇಯರು ಬೂಮ್ರಾ ದಾಳಿಗೆ ತತ್ತರಿಸಿದರು.

ಭಾರತ ತಂಡವು ಮೊದಲ ಇನಿಂಗ್ಸ್‌ ನಲ್ಲಿ ಗಳಿಸಿರುವ 416 ರನ್‌ಗಳಿಗೆ ಉತ್ತರವಾಗಿ ವಿಂಡೀಸ್ 47.1 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಭಾರತಕ್ಕೆ 299 ರನ್‌ಗಳ ಭಾರಿ ಮುನ್ನಡೆ ಲಭಿಸಿತು. ಬೂಮ್ರಾ ‘ಹ್ಯಾಟ್ರಿಕ್’ ಸಹಿತ ಆರು ವಿಕೆಟ್ ಗಳಿಸಿ ವಿಜೃಂಭಿಸಿದರು.

ನೆತ್ತಿ ಸುಡುವ ಬಿಸಿಲಿನಲ್ಲಿ ಎಸೆತಗಳು ನಿಧಾನಗತಿಯಲ್ಲಿ ಪುಟಿದೇಳುತ್ತಿರುವ ಪಿಚ್‌ನಲ್ಲಿ ಅಪಾರ ತಾಳ್ಮೆಯಿಂದ ಆಡಿದ್ದ ಹನುಮವಿಹಾರಿ (111; 225ಎಸೆತ, 16ಬೌಂಡರಿ) ಮತ್ತು ಇಶಾಂತ್ ಶರ್ಮಾ (57; 80ಎಸೆತ, 7ಬೌಂಡರಿ) ಅವರು ಅರ್ಧಶತಕ ಗಳಿಸಿದರು. ಅದರಿಂದಾಗಿ ತಂಡವು 400 ರನ್‌ಗಳಿಗಿಂತ ಹೆಚ್ಚಿನ ಮೊತ್ತ ದಾಖಲಿಸಿತು. ಆದರೆ ಆತಿಥೇಯ ಬ್ಯಾಟ್ಸ್‌ಮನ್‌ಗಳು ತಾಳ್ಮೆ ಕಳೆದುಕೊಂಡಂತೆ ಆಡಿದರು. ಬೂಮ್ರಾ ಎಸೆತಗಳ ವೇಗ ಮತ್ತು ಲಯವನ್ನು ಗುರುತಿಸುವಲ್ಲಿ ಎಡವಿದರು.

ಏಳನೇ ಓವರ್‌ನಲ್ಲಿ ಕ್ಯಾಂಪ್‌ಬೆಲ್‌ ವಿಕೆಟ್ ಗಳಿಸುವುದರೊಂದಿಗೆ ಬೂಮ್ರಾ ತಮ್ಮ ಬೇಟೆ ಆರಂಭಿಸಿದರು. ತಮ್ಮ ನಂತರದ ಓವರ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಡರೆನ್ ಬ್ರಾವೊ (8.2), ಶಮ್ರಾ ಬ್ರೂಕ್ರ್ (8.3) ಮತ್ತು ರಾಸ್ಟನ್ ಚೇಸ್ (8.4) ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಭಾರತ ತಂಡದ ಎಲ್ಲ ಆಟಗಾರರೂ ಬೂಮ್ರಾ ಅವರನ್ಜು ಮೈದಡವಿ, ಅಪ್ಪಿ ಅಭಿನಂದಿಸಿತು.

ಅಷ್ಟಕ್ಕೆ ಅವರ ಬೇಟೆ ನಿಲ್ಲಲಿಲ್ಲ. ನಿಧಾನವಾಗಿ ಆಡುತ್ತಿದ್ದ ಕ್ರೆಗ್ ಬ್ರಾಥ್‌ವೇಟ್ (10ರನ್), ನಾಯಕ ಜೇಸನ್ ಹೋಲ್ಡರ್ ಅವರ ವಿಕೆಟ್‌ ಕೂಡ ಕಬಳಿಸಿದರು. ಇನ್ನೊಂದಡೆ ಮೊಹಮ್ಮದ್ ಶಮಿ ಅವರು ಹೆಟ್ಮೆಯರ್ (34; 57ಎಸೆತ, 7ಬೌಂಡರಿ) ಅವರ ವಿಕೆಟ್ ಉರುಳಿಸಿ ವಿಂಡೀಸ್‌ಗೆ ಮತ್ತೊಂದು ಪೆಟ್ಟು ಕೊಟ್ಟರು. ಶಮಿ ಅವರು ‘ತೂಕದ ವ್ಯಕ್ತಿ’ ರಹಕೀಮ್ ಕಾರ್ನವಾಲ್‌ ಅವರಿಗೂ ಪೆವಿಲಿಯನ್ ಹಾದಿ ತೋರಿಸಿದರು. ಇಶಾಂತ್ ಶರ್ಮಾ ಮತ್ತು ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಪಡೆದು ವಿಂಡೀಸ್ ಇನಿಂಗ್ಸ್‌ಗೆ ಮಂಗಳ ಹಾಡಿದರು.

ಕೆಮರ್ ರೋಚ್‌ಗೆ 3 ವಿಕೆಟ್‌: ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲೇ ಕುಸಿತ ಕಂಡಿತು.

ಮಧ್ಯಮ ವೇಗಿ ಕೆಮರ್ ರೋಚ್ ದಾಳಿಗೆ ನಲುಗಿದ ತಂಡ 23 ಓವರ್‌ಗಳಲ್ಲಿ 3ಕ್ಕೆ 46 ರನ್ ಗಳಿಸಿತು. ಕೆ.ಎಲ್‌.ರಾಹುಲ್ ಮತ್ತು ಮಯಂಕ್‌ ಅಗರವಾಲ್ ಕ್ರಮವಾಗಿ 6 ಮತ್ತು 4 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರು. ಮೂರೂ ವಿಕೆಟ್‌ಗಳು ರೋಚ್ ಪಾಲಾದವು.

ಜಸ್‌ಪ್ರೀತ್ ಬೂಮ್ರಾ ‘ಹ್ಯಾಟ್ರಿಕ್’

ಪ್ರಖರ ಬಿಸಿಲಿನ ಧಗೆಯಲ್ಲಿಯೂ ಮಿಂಚಿದ ಭಾರತದ ಜಸ್‌ಪ್ರೀತ್ ಬೂಮ್ರಾ ‘ಹ್ಯಾಟ್ರಿಕ್’ ಸಾಧನೆ ಮಾಡಿದರು. ಅವರ ಬಿರುಗಾಳಿ ವೇಗದ ಬೌಲಿಂಗ್ ಮುಂಚೆ ಆತಿಥೇಯ ವೆಸ್ಟ್ ಇಂಡೀಸ್ ತತ್ತರಿಸಿತು.

ಕಿಂಗ್ಸ್‌ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಶನಿವಾರ ತಡರಾತ್ರಿ ಹನುಮವಿಹಾರಿ ಗಳಿಸಿದ ಶತಕದ ಬಲದಿಂದ ಭಾರತವು ಮೊದಲ ಇನಿಂಗ್ಸ್‌ನಲ್ಲಿ 416 ರನ್‌ ಗಳಿಸಿತು. ಉತ್ತರವಾಗಿ ವೆಸ್ಟ್‌ ಇಂಡೀಸ್ ತಂಡ ಬ್ಯಾಟಿಂಗ್ ಆರಂಭಿಸಿತು. ಆದರೆ, ಎರಡನೇ ದಿನದಾಟದ ಅಂತ್ಯಕ್ಕೆ ವಿಂಡೀಸ್ 87 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿತು. ಅದಕ್ಕೆ ಕಾರಣರಾಗಿದ್ದ ಮಧ್ಯಮವೇಗಿ ಬೂಮ್ರಾ. ಅವರು ಆರು ವಿಕೆಟ್ ಕಬಳಿಸಿದರು. ಇನಿಂಗ್ಸ್‌ನ ಒಂಬತ್ತನೇ ಓವರ್‌ನಲ್ಲಿ ಬೂಮ್ರಾ ಅವರು ಡರೆನ್ ಬ್ರಾವೊ, ಶಮ್ರಾ ಬ್ರೂಕ್ಸ್‌ ಮತ್ತು ರಾಸ್ಟನ್ ಚೇಸ್‌ ಅವರನ್ನು ಔಟ್ ಮಾಡಿ ಹ್ಯಾಟ್ರಿಕ್ ದಾಖಲಿಸಿದರು.

ಮೊದಲ ಟೆಸ್ಟ್ ಪಂದ್ಯದಲ್ಲಿಯೂ ಅವರು ಐದು ವಿಕೆಟ್‌ಗಳ ಗೊಂಚಲು ಗಳಿಸಿದ ಸಾಧನೆ ಮಾಡಿದ್ದರು. ಎರಡನೇ ಟೆಸ್ಟ್‌ನಲ್ಲಿಯೂ ವಿಂಡೀಸ್ ಬ್ಯಾಟಿಂಗ್‌ ಪಡೆಗೆ ಸಿಂಹಸ್ವಪ್ನರಾದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಭಾರತ: 416; ವೆಸ್ಟ್ ಇಂಡೀಸ್: 47.1 ಓವರ್‌ಗಳಲ್ಲಿ 117 (ಕ್ರೇಗ್ ಬ್ರಾಥ್‌ವೇಟ್ 10, ಶಿಮ್ರೊನ್ ಹೆಟ್ಮೆಯರ್ 34, ಜೇಸನ್ ಹೋಲ್ಡರ್ 18, ರಹಕೀಮ್ ಕಾರ್ನವಾಲ್ 14, ಕೆಮರ್ ರೋಚ್ 17; ಜಸ್‌ಪ್ರೀತ್ ಬೂಮ್ರಾ 27ಕ್ಕೆ6, ಮೊಹಮ್ಮದ್ ಶಮಿ 34ಕ್ಕೆ 2);

ಭಾರತ: 2ನೇ ಇನಿಂಗ್ಸ್‌: 23 ಓವರ್‌ಗಳಲ್ಲಿ 3ಕ್ಕೆ 46 (ಚೇತೇಶ್ವರ ಪೂಜಾರ ಬ್ಯಾಟಿಂಗ್ 20, ಅಜಿಂಕ್ಯ ರಹಾನೆ ಬ್ಯಾಟಿಂಗ್ 9; ಕೆಮರ್ ರೋಚ್‌ 12ಕ್ಕೆ 3).
ವಿವರ ಅಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT