ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಸ್ಟ್ ಇಂಡೀಸ್‌ ಉತ್ತಮ ಆರಂಭ

‘ಎ’ ತಂಡಗಳ ‘ಟೆಸ್ಟ್’ ಪಂದ್ಯ; ಗೌತಮ್, ದುಬೆಗೆ ವಿಕೆಟ್
Last Updated 1 ಆಗಸ್ಟ್ 2019, 20:17 IST
ಅಕ್ಷರ ಗಾತ್ರ

ಪೋರ್ಟ್ ಆಫ್ ಸ್ಪೇನ್: ಮಾಂಟ್ಸಿನ್ ಹಾಜ್ ಮತ್ತು ಶಾಮ್ರಾ ಬ್ರೂಕ್ಸ್‌ ಅವರ ಅರ್ಧಶತಕಗಳ ಬಲದಿಂದ ವೆಸ್ಟ್ ಇಂಡೀಸ್ ’ಎ’ ತಂಡವು ಗುರುವಾರ ಆರಂಭವಾದ ‘ಟೆಸ್ಟ್‌’ ಪಂದ್ಯದಲ್ಲಿ ಉತ್ತಮ ಮೊತ್ತ ಕಲೆ ಹಾಕುವತ್ತ ಹೆಜ್ಜೆ ಇಟ್ಟಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯ ತಂಡವು ಮೊದಲ ಇನಿಂಗ್ಸ್‌ ನಲ್ಲಿ 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 243 ರನ್ ಗಳಿಸಿದೆ.

ಅನುಭವಿ ನಾಯಕ ಕ್ರೇಗ್ ಬ್ರಾಥ್‌ವೇಟ್ ಮತ್ತು ಹಾಜ್ ಅವರು ಇನಿಂಗ್ಸ್‌ಗೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 87 ರನ್‌ ಸೇರಿಸಿದರು. ಭಾರತದ ಯುವ ಬೌಲಿಂಗ್ ಪಡೆಯು ಈ ಜೊತೆಯಾಟವನ್ನು ಮುರಿಯಲು ಬಹಳಷ್ಟು ಕಷ್ಟಪಟ್ಟಿತು. ಕೊನೆಗೂ 40ನೇ ಓವರ್‌ನಲ್ಲಿ ಸಂದೀಪ್ ವಾರಿಯರ್ ಯಶಸ್ವಿಯಾದರು. ಅವರು ಹಾಕಿದ ಎಸೆತವು ತಿರುವು ಪಡೆದು ಬ್ರಾಥ್‌ವೇಟ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು.

ಹಾಜ್ ಜೊತೆಗೂಡಿದ ಬ್ರೂಕ್ಸ್‌ ಅವರು ಉತ್ತಮ ಆಟ ಮುಂದುವರಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 62 ರನ್‌ಗಳನ್ನು ಸೇರಿಸಿದರು. 64ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಹಾಕಿದ ನೇರ ಎಸೆತವನ್ನು ಆಡುವಲ್ಲಿ ವಿಫಲರಾದ ಹಾಜ್ (65; 190ಎಸೆತ, 8ಬೌಂಡರಿ, 1ಸಿಕ್ಸರ್) ಬೌಲ್ಡ್‌ ಆದರು.

ಬ್ರೂಕ್ಸ್‌ ಕೂಡ ಅರ್ಧಶತಕ (53; 98ಎಸೆತ, 7ಬೌಂಡರಿ) ಗಳಿಸಿದರು. ರಕ್ಷಣಾತ್ಮಕವಾಗಿ ಆಡಿ ವಿಕೆಟ್ ಪತನ ತಡೆಯುವತ್ತ ಗಮನ ಇಟ್ಟಿದ್ದರು. ಆದರೆ ಇನ್ನೊಂದು ಬದಿಯಲ್ಲಿ ವಿಕೆಟ್‌ಗಳು ಪತನವಾದವು. ಕನ್ನಡಿಗ ಕೃಷ್ಣಪ್ಪ ಗೌತಮ್ ಅವರು ಸುನಿಲ್ ಆ್ಯಂಬ್ರಿಸ್ ಅವರ ವಿಕೆಟ್ ಗಳಿಸಿದರು. 75ನೇ ಓವರ್‌ನಲ್ಲಿ ಬ್ರೂಕ್ಸ್‌ ಕೂಡ ಶಿವಂ ದುಬೆಗೆ ವಿಕೆಟ್ ಒಪ್ಪಿಸಿದರು.

ದಿನದಾಟದ ಕೊನೆಗೆ ಶೇನ್ ಡೋರಿಚ್ (ಬ್ಯಾಟಿಂಗ್ 24) ಮತ್ತು ರೇಮನ್ ರೀಫರ್ (ಬ್ಯಾಟಿಂಗ್ 27) ಅವರು ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್ ‘ಎ’: 90 ಓವರ್‌ಗಳಲ್ಲಿ 5 ವಿಕೆಟ್‌ಗಳೀಗೆ 243 (ಮಾಂಟ್ಸಿನ್ ಹಾಜ್ 65, ಶಾಮ್ರಾ ಬ್ರೂಕ್ಸ್‌ 53, ಶಿವಂ ದುಬೆ 35ಕ್ಕೆ1, ಕೃಷ್ಣಪ್ಪ ಗೌತಮ್ 49ಕ್ಕೆ1, ಮೊಹಮ್ಮದ್ ಸಿರಾಜ್ 47ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT