ಶುಕ್ರವಾರ, ಜನವರಿ 22, 2021
27 °C

ಧೋನಿ ನಿವೃತ್ತಿಯಿಂದ ಕ್ರಿಕೆಟ್‌ನ ಒಂದು ಯುಗಾಂತ್ಯ: ಶ್ರೀನಿವಾಸನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ದಿಗ್ಗಜ ಮಹೇಂದ್ರಸಿಂಗ್ ಧೋನಿ  ನಿವೃತ್ತಿಯೊಂದಿಗೆ ಕ್ರಿಕೆಟ್‌ನ ಒಂದು ಯುಗ ಮುಕ್ತಾಯವಾದಂತಾಗಿದೆ. ಈ ಕ್ರೀಡೆಯಲ್ಲಿ ಅವರು ಎಲ್ಲವನ್ನೂ ಸಾಧಿಸಿದ್ದಾರೆ. ಇನ್ನೇನೂ ಉಳಿದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಆಭಿಪ್ರಾಯಪಟ್ಟಿದ್ದಾರೆ.

ಆಗಸ್ಟ್‌ 15ರಂದು ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.  ಉದ್ಯಮಿ ಶ್ರೀನಿವಾಸನ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಹಮಾಲೀಕರು ಹೌದು. ಧೋನಿ ಆ ತಂಡದ ನಾಯಕರಾಗಿದ್ದಾರೆ. 

ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಶ್ರೀನಿವಾಸನ್, ’ಧೋನಿ 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, ನಂತರದಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದ ತಂಡದ ನಾಯಕತ್ವ ವಹಿಸಿದವರು. ಅದ್ಭುತ ವಿಕೆಟ್‌ಕೀಪರ್, ಅಮೋಘ ಬ್ಯಾಟ್ಸ್‌ಮನ್ ಮತ್ತು ಅಮೋಘವಾದ ನಾಯಕ ಅವರು. ಇಡೀ ತಂಡವನ್ನು ಹುರಿದುಂಬಿಸಿ ಮುನ್ನಡೆಸುತ್ತಿದ್ದ ರೀತಿ ಅನನ್ಯ‘ ಎಂದು ಬಣ್ಣಿಸಿದ್ದಾರೆ.

’ಕ್ರಿಕೆಟ್‌ನಲ್ಲಿ ಗರಿಷ್ಠ ಮಟ್ಟದ ಸಾಧನೆಗಳನ್ನು ಮಾಡಿಬಿಟ್ಟಿದ್ದಾರೆ. ಇನ್ನೇನು ಬೇಕು. ಪ್ರತಿಯೊಬ್ಬ ಕ್ರೀಡಾಪಟುವೂ ತಮ್ಮ ಜೀವನದ ಒಂದು ಹಂತದಲ್ಲಿ ವಿದಾಯದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದು ಯಾವಾಗ ಎಂಬುದು ಅವರಿಗೇ ಚೆ್ನ್ನಾಗಿ ಗೊತ್ತಿರುತ್ತದೆ. ಆದರೆ, ಧೋನಿ ಇನ್ನು ಮುಂದೆ ನೀಲಿ ವರ್ಣದ (ಭಾರತ ತಂಡದ ಪೋಷಾಕು) ಜೆರ್ಸಿಯಲ್ಲಿ ಕಾಣಸಿಗುವುದಿಲ್ಲ ಎಂಬ ದುಃಖವಿದೆ. ಆದರೆ ಸಿಎಸ್‌ಕೆಯಲ್ಲಿ ಅವರು ಮುಂದುವರಿಯಲಿರುವುದು ಸಂತಸ ತಂದಿದೆ‘ ಎಂದು ಶ್ರೀನಿವಾಸನ್ ಹೇಳಿದ್ದಾರೆ.

’ಸಿಎಸ್‌ಕೆ ಜಾಗತಿಕ ಮಟ್ಟದ ಬ್ರ್ಯಾಂಡ್ ಆಗಿದೆ. ಆದ್ದರಿಂದ ಧೋನಿ ಅವರು  ಈ ತಂಡವನ್ನು ಮುನ್ನಡೆಸುವುದನ್ನು ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ. ಮೊದಲಿನಿಂದಲೂ ಅವರೇ ನಾಯಕರಾಗಿದ್ದಾರೆ.  ಇನ್ನಷ್ಟು ವರ್ಷಗಳ ಕಾಲ ಅವರೇ ಇರುತ್ತಾರೆ‘ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

’ಪ್ರತಿಭಾನ್ವಿತರನ್ನು ಗುರುತಿಸಿ ಬೆಳೆಸುವ ವಿಶಿಷ್ಟ ಗುಣ ಧೋನಿಯಲ್ಲಿದೆ. ಪ್ರತಿಭಾಶೋಧದಲ್ಲಿ ಅವರಿಗೆ ಅಪರೂಪದ ತಂತ್ರಗಾರಿಕೆ ಸಿದ್ಧಿಸಿದೆ. ಅವರು ಸಲಹೆಯಿಂದಾಗಿ ಸಿಎಸ್‌ಕೆಗೆ ಆಯ್ಕೆಯಾದ ಬಹಳಷ್ಟು ಆಟಗಾರರು ಈಗ ಉನ್ನತ ಸಾಧಕರಾಗಿದ್ದಾರೆ‘ ಎಂದು 75 ವರ್ಷದ ಶ್ರೀನಿವಾಸನ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು