ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಟೆಸ್ಟ್‌ ಪಾಸಾದ ವಿಂಡೀಸ್‌ ತಂಡ

ತಂಡವನ್ನು ಸೇರಿಕೊಂಡ ಕೀರನ್‌ ಪೊಲಾರ್ಡ್‌, ಜೇಸನ್‌ ಹೋಲ್ಡರ್‌
Last Updated 13 ನವೆಂಬರ್ 2020, 13:41 IST
ಅಕ್ಷರ ಗಾತ್ರ

ಕ್ರೈಸ್ಟ್ ಚರ್ಚ್‌: ನ್ಯೂಜಿಲೆಂಡ್‌ ವಿರುದ್ಧದ ಕ್ರಿಕೆಟ್‌ ಸರಣಿಯಲ್ಲಿ ಆಡಲು ಇಲ್ಲಿಗೆ ಬಂದಿರುವ ವೆಸ್ಟ್ ಇಂಡೀಸ್‌ ತಂಡವು ಎಲ್ಲ ಮೂರೂ ಸುತ್ತಿನ ಕೋವಿಡ್‌–19 ಪರೀಕ್ಷೆಗಳನ್ನು ಪಾಸು ಮಾಡಿತು. ಯಾವ ಆಟಗಾರರಲ್ಲಿಯೂ ಸೋಂಕು ಕಂಡುಬಂದಿಲ್ಲ. ಇದೇ 20ರಿಂದ ನ್ಯೂಜಿಲೆಂಡ್‌ ಎ ತಂಡದ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ಕಣಕ್ಕಿಳಿಯಲಿದೆ.

ಅಕ್ಟೋಬರ್‌ 30ರಂದು ನ್ಯೂಜಿಲೆಂಡ್‌ಗೆ ತಲುಪಿದ್ದ ಕೆರಿಬಿಯನ್‌ ಪಡೆಯು ಅಂದಿನಿಂದ ಪ್ರತ್ಯೇಕವಾಸದಲ್ಲಿತ್ತು. ಎಲ್ಲ ಆಟಗಾರರು ಎರಡು ಬಾರಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದರು.

‘ಪ್ರತ್ಯೇಕವಾಸದ 12ನೇ ದಿನ ಆಯೋಜಿಸಿದ್ದ ಪರೀಕ್ಷೆಯಲ್ಲಿ ನಮ್ಮ ತಂಡದ ಎಲ್ಲ ಸದಸ್ಯರ ವರದಿ ನೆಗೆಟಿವ್‌ ಬಂದಿದೆ‘ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಹೇಳಿದೆ.

‘ಎಲ್ಲ ಆಟಗಾರರು, ಆಡಳಿತ ಮಂಡಳಿ ಹಾಗೂ ನೆರವು ಸಿಬ್ಬಂದಿಯು ಶುಕ್ರವಾರವೇ ಕ್ವೀನ್ಸ್‌ಟೌನ್‌ಗೆ ತೆರಳಲಿದ್ದಾರೆ. ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡಲಿದ್ದಾರೆ‘ ಎಂದು ಮಂಡಳಿ ತಿಳಿಸಿದೆ.

‘ನವೆಂಬರ್‌ 27ರಂದು ಟ್ವೆಂಟಿ–20 ಪಂದ್ಯದ ಮೂಲಕ ಸರಣಿ ಆರಂಭವಾಗಲಿದೆ. ಇನ್ನುಳಿದ ಎರಡು ಟಿ–20 ಪಂದ್ಯಗಳು ಕ್ರಮವಾಗಿ 29 ಹಾಗೂ 30ರಂದು ನಡೆಯಲಿವೆ. ಇದಾದ ಬಳಿಕ ಹ್ಯಾಮಿಲ್ಟನ್‌ (ಡಿಸೆಂಬರ್‌ 3ರಿಂದ–7) ಹಾಗೂ ವೆಲ್ಲಿಂಗ್ಟನ್‌ನಲ್ಲಿ (ಡಿ.11–15) ನಡೆಯಲಿರುವ ಟೆಸ್ಟ್ ಪಂದ್ಯಗಳಲ್ಲಿ ಉಭಯ ತಂಡಗಳು ಸೆಣಸಲಿವೆ.

ಪ್ರತ್ಯೇಕವಾಸದ ಅವಧಿಯಲ್ಲಿ ಕೋವಿಡ್‌ ತಡೆ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ವೆಸ್ಟ್ ಇಂಡೀಸ್‌ ತಂಡದ ತರಬೇತಿಗೆ ನ್ಯೂಜಿಲೆಂಡ್‌ನ ಆರೋಗ್ಯ ಸಚಿವಾಲಯ ತಡೆ ನೀಡಿತ್ತು.

‘ಐಪಿಎಲ್‌ನಲ್ಲಿ ಆಡಿದ್ದ ವೆಸ್ಟ್ ಇಂಡೀಸ್ ಟ್ವೆಂಟಿ–20 ತಂಡದ ನಾಯಕ ಕೀರನ್‌ ಪೊಲಾರ್ಡ್‌, ಟೆಸ್ಟ್ ತಂಡದ ನಾಯಕ ಜೇಸನ್ ಹೋಲ್ಡರ್‌, ಫ್ಯಾಬಿಯನ್‌ ಅಲೆನ್‌, ಶಿಮ್ರೊನ್‌ ಹೆಟ್ಮೆಯರ್‌, ಕೀಮೊ ಪಾಲ್‌, ನಿಕೋಲಸ್‌ ಪೂರನ್‌ ಹಾಗೂ ಓಷೇನ್‌ ಥಾಮಸ್‌ ಕೂಡ ನ್ಯೂಜಿಲೆಂಡ್‌ ತಲುಪಿದ್ದಾರೆ‘ ಎಂದು ಮಂಡಳಿ ಹೇಳಿದೆ. ಸದ್ಯ ಅವರು ಆಕ್ಲೆಂಡ್‌ನಲ್ಲಿದ್ದು ಎರಡು ವಾರಗಳ ಪ್ರತ್ಯೇಕವಾಸ ಪೂರ್ಣಗೊಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT