ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದ ಕೊನೆಯಲ್ಲಿ ಜಯದ ಕನಸು

ರಣಜಿ ಟ್ರೋಫಿ ಕ್ರಿಕೆಟ್‌: ಕರ್ನಾಟಕ– ಹಿಮಾಚಲ ಪ್ರದೇಶ ಪಂದ್ಯ ಇಂದಿನಿಂದ
Last Updated 24 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಮೈಸೂರು: ಸಾಕಷ್ಟು ಮಧುರ ನೆನಪುಗಳನ್ನು ಕಟ್ಟಿಕೊಟ್ಟ 2019ರ ಋತುವಿಗೆ ಗೆಲುವಿನ ವಿದಾಯ ಹೇಳಲು ಕರ್ನಾಟಕ ರಾಜ್ಯ ಕ್ರಿಕೆಟ್‌ ತಂಡ ಸಿದ್ಧತೆ ನಡೆಸಿಕೊಂಡಿದೆ. ಹಿಮಾಚಲ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯ ಇಲ್ಲಿನ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗಲಿದ್ದು, ಕರುಣ್‌ ನಾಯರ್‌ ಬಳಗ ಜಯದ ನಿರೀಕ್ಷೆಯಲ್ಲಿದೆ.

ದಿಂಡಿಗಲ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆತಿಥೇಯ ತಮಿಳುನಾಡು ತಂಡವನ್ನು 26 ರನ್‌ಗಳಿಂದ ಮಣಿಸಿ ಕರ್ನಾಟಕ ಈ ಬಾರಿಯ ರಣಜಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಹುಬ್ಬಳ್ಳಿಯಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಡ್ರಾ ಸಾಧಿಸಿತ್ತು.

ಒಟ್ಟು ಒಂಬತ್ತು ಪಾಯಿಂಟ್‌ ಹೊಂದಿರುವ ಕರ್ನಾಟಕ ತಂಡ ಎಲೈಟ್‌ ‘ಎ’ ಮತ್ತು ‘ಬಿ’ ಗುಂಪಿನ ತಂಡಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಮೇಲಿನ ಸ್ಥಾನಕ್ಕೇರುವುದು ಮುಂದಿರುವ ಗುರಿ.

ವೆಸ್ಟ್‌ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಗೆ ರಾಷ್ಟ್ರೀಯ ತಂಡದಲ್ಲಿದ್ದ ಮಯಂಕ್‌ ಅಗರವಾಲ್‌ ಮರಳಿರುವುದು ರಾಜ್ಯ ತಂಡದ ಬಲ ಹೆಚ್ಚಿಸಿದೆ. ಕೆ.ಎಲ್‌.ರಾಹುಲ್‌ ಮತ್ತು ಮನೀಷ್‌ ಪಾಂಡೆ ಅವರ ಅನುಪಸ್ಥಿತಿ ಯಲ್ಲಿ ಮಯಂಕ್‌ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ.

ಫಾರ್ಮ್‌ ಕಂಡುಕೊಳ್ಳಲು ಪ್ರಯತ್ನ ಪಡುತ್ತಿರುವ ನಾಯಕ ಕರುಣ್‌ ನಾಯರ್‌ ಅವರಿಗೂ ಈ ಪಂದ್ಯ ಮಹತ್ವದ್ದಾಗಿದೆ. ತಮಿಳುನಾಡು ವಿರುದ್ಧ ಎರಡು ಇನಿಂಗ್ಸ್‌ಗಳಿಂದ 13 ರನ್‌ ಗಳಿಸಿದ್ದ ಅವರು ಉತ್ತರ ಪ್ರದೇಶ ಎದುರು ಮೊದಲ ಇನಿಂಗ್ಸ್‌ನಲ್ಲಿ 13 ರನ್‌ ಕಲೆಹಾಕಿದ್ದರು. ಡಿ.ನಿಶ್ಚಲ್, ಆರ್‌.ಸಮರ್ಥ್‌ ಮತ್ತು ಅತ್ಯುತ್ತಮ ಲಯದಲ್ಲಿರುವ ದೇವದತ್ತ ಪಡಿಕ್ಕಲ್ ಬ್ಯಾಟಿಂಗ್‌ಗೆ ಬಲ ನೀಡಲಿದ್ದಾರೆ.

ರೋನಿತ್‌ ಮೋರೆ ಗಾಯಗೊಂಡು ಹೊರಬಿದ್ದಿರುವುದು ಸ್ವಲ್ಪ ಹಿನ್ನಡೆಯಾಗಿದೆ. ಆಲ್‌ರೌಂಡರ್‌ ಕೆ.ಗೌತಮ್‌ ಕೂಡಾ ಗಾಯದಿಂದ ಚೇತರಿಸಿಕೊಂಡಿಲ್ಲ. ಅಭಿಮನ್ಯು ಮಿಥುನ್, ವಿ.ಕೌಶಿಕ್‌ ಮತ್ತು ಪ್ರತೀಕ್‌ ಜೈನ್ ವೇಗದ ಬೌಲಿಂಗ್‌ ವಿಭಾಗದ ಚುಕ್ಕಾಣಿ ಹಿಡಿಯಲಿದ್ದು, ಶ್ರೇಯಸ್‌ ಗೋಪಾಲ್‌ ಹಾಗೂ ಜೆ.ಸುಚಿತ್‌ ಅವರು ಸ್ಪಿನ್‌ ಜವಾಬ್ದಾರಿ ನಿಭಾಯಿಸುವರು.

ಪೈಪೋಟಿ ನೀಡುವ ಸಾಧ್ಯತೆ: ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿರುವ ಹಿಮಾಚಲ ಪ್ರದೇಶ ತಂಡವನ್ನು ಲಘುವಾಗಿ ಪರಿಗಣಿಸಲು ಕರ್ನಾಟಕ ಸಿದ್ಧವಿಲ್ಲ. ಸೌರಾಷ್ಟ್ರ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಈ ತಂಡ, ಎರಡನೇ ಪಂದ್ಯದಲ್ಲಿ ತಮಿಳುನಾಡು ಎದುರು ದಿಂಡಿಗಲ್‌ನಲ್ಲೇ 71 ರನ್‌ಗಳ ಜಯ ಸಾಧಿಸಿತ್ತು.

ವೇಗಿಗಳಾದ ವೈಭವ್‌ ಅರೋರ, ರಿಷಿ ಧವನ್ ಮತ್ತು ಸ್ಪಿನ್ನರ್‌ ಆಕಾಶ್‌ ವಸಿಷ್ಠ್ ಅವರು ಕರ್ನಾಟಕದ ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕಕ್ಕೆ ಸವಾಲೊಡ್ಡು ವರೇ ಎಂಬುದು ಕುತೂಹಲಕರ. ಪ್ರವಾಸಿ ತಂಡಕ್ಕೆ ಬ್ಯಾಟಿಂಗ್‌ನದ್ದೇ ಚಿಂತೆ. ಅಂಕುಶ್‌ ಬೇನ್ಸ್, ಅಂಕಿತ್‌ ಖಾಲ್ಸಿ ಪ್ರಶಾಂತ್‌ ಚೋಪ್ರಾ ಮತ್ತು ಸುಮೀತ್‌ ವರ್ಮಾ ಅವರಿಂದ ಉತ್ತಮ ಆಟವನ್ನು ನಿರೀಕ್ಷಿಸುತ್ತಿದೆ.ಆರಂಭ: ಬೆಳಿಗ್ಗೆ 9.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT